ಹೆಚ್ಚೆನ್ನೆಸ್‌ಗೆ ಅಕ್ಷರ ನಮನ

`ಜನತಾವಾಣಿ’ ಸಂಸ್ಥಾಪಕ ಸಂಪಾದಕರಾಗಿದ್ದ ಹೆಚ್.ಎನ್. ಷಡಾಕ್ಷರಪ್ಪ ಅವರು ನಮ್ಮನ್ನಗಲಿ ಏಪ್ರಿಲ್ 29ಕ್ಕೆ ಹತ್ತು ವರ್ಷಗಳಾದವು. ಪತ್ರಿಕೆಯನ್ನು ಜನಮನದ ಜೀವನಾಡಿಯನ್ನಾಗಿಸಿದ ಕೀರ್ತಿ ಹೆಚ್ಚೆನ್ನೆಸ್ ಅವರದ್ದು. ಪತ್ರಿಕೆ ಬೆಳೆಸುವ ಜೊತೆಗೆ ಅನೇಕ ಓದುಗರ ಪ್ರೀತಿ ಗಳಿಸಿದ್ದರು.  ಹೆಚ್ಚೆನ್ನೆಸ್ ಅವರನ್ನು ಕೆಲವು ಓದುಗರು ಈ ಸಂದರ್ಭದಲ್ಲಿ ನೆನಪಿಸಿಕೊಂಡು ತಮ್ಮ ಅಕ್ಷರಗಳ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಸುದ್ದಿಯಾಗಲೀ, ಜಾಹೀರಾತಾಗಲಿ `ಜನತಾವಾಣಿ’ಯಲಿ ಮೊದ್ಲು ಬರ್ಬೇಕು. ಇನ್ನುಳಿದವುಗಳ ವಿಚಾರ ಆಮೇಲೆ ಎಂಬಷ್ಟರ ಮಟ್ಟಿಗೆ ಜನ ಜನಿತವಾಗುವಂತೆ ಪತ್ರಿಕೆಯನ್ನು ಮುಗಿಲೆತ್ತರಕ್ಕೆ ಬೆಳೆಸಿದ ಹೆಚ್.ಎನ್.ಷಡಾಕ್ಷರಪ್ಪನವರು ಭೌತಿಕವಾಗಿ ಇನ್ನಿಲ್ಲವಾಗಿ ಇಂದಿಗೆ (ಏಪ್ರಿಲ್ 29) ವರ್ಷ ಹತ್ತು.

ಜನಮಾನಸದಲ್ಲಿ ಹೆಚ್ಚೆನ್ನೆಸ್ ಎಂದೇ ಗುರುತಿಸಲ್ಪಡುವ ಷಡಾಕ್ಷರಪ್ಪನವರು ಒಬ್ಬ ಒಳ್ಳೆಯ ಪತ್ರಕರ್ತ, ನುರಿತ ವಾಗ್ಮಿ, ವೈಜ್ಞಾನಿಕ ವಿಚಾರಧಾರೆಯ ಪ್ರತಿಪಾದಕ. ಎಲ್ಲಕ್ಕೂ ಮಿಗಿಲಾಗಿ `ಹಾರಿ ಮೇಲಕೆ, ಗಗನವೇ ನಿಮ್ಮ ಮಿತಿಯಾಗಿರಲಿ’ ಎಂದು ಕಿರಿಯರಿಗೆ ಬೆನ್ನು ತಟ್ಟಿ ಉತ್ತೇಜಿಸಿದ ಅಪರೂಪದ ಮಾನವತಾವಾದಿ.

ಷಡಾಕ್ಷರಪ್ಪನವರ ಜೊತೆಯಲ್ಲಿನ ಒಂದೆರಡು ಸಿಹಿ ನೆನಪುಗಳಿವು.

ರಾಜ್ಯ ಜಿಲ್ಲಾ ಮತ್ತು ಸಣ್ಣ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಹೆಚ್ಚೆನ್ನೆಸ್ ರವರಿಗೆ ದಾವಣಗೆರೆಯ ವರ್ತಕರ ಸಂಘದ ಸಭಾಂಗಣದಲ್ಲಿ ಭವ್ಯ ಸತ್ಕಾರ. ಸನ್ಮಾನದ ಮೊದಲು ಅಭಿಮಾನಿಗಳ ಮಾತುಗಳ ಮಹಾಪೂರ. ಅವೆಲ್ಲವನ್ನೂ ವಿನಮ್ರರಾಗಿ ಸ್ವೀಕರಿಸಿದ ಹೆಚ್ಚೆನ್ನೆಸ್ ಭಾಷಣ ಮುಗಿಯುತ್ತ ಬಂದಾಗ ಸಭಿಕರ ಕಡೆಯಿಂದ ಅನಾಮಧೇಯ ಚೀಟಿ.  ಚೀಟಿ ಸ್ವೀಕರಿಸಿದ ಹೆಚ್ಚೆನ್ನೆಸ್, ಪೂರ್ಣ ಓದಿ, ಅರೆ ಕ್ಷಣ ತಡೆದರು. `ಸಂಪಾದಕರ ಸಂಘದ ಬಗೆಗಿನ, ಮೂಲಭೂತ ವಿಚಾರದ ಬಗೆಗಿನ ಈ ಅನಾಮಧೇಯ ಪತ್ರಕ್ಕೆ ಇಲ್ಲಿ ಉತ್ತರಿಸುತ್ತಾ ನಿಂತರೆ ತಾಸುಗಟ್ಟಲೆ ಸಮಯವಾದೀತು, ಪ್ರಶ್ನೆ ಯೋಗ್ಯವಾಗಿದೆ’ ತುಸು ತಡೆದು `ಪ್ರಸಾದ್, ರಾತ್ರಿ ಆಫೀಸ್ ಕಡೆ ಬರ್ತೀರಲ್ಲಾ, ಮಾತಾಡೋಣ’ ಎಂದು ಮುಗಿಸಿದರು.

ಬರಹ ನೋಡಿದೊಡನೆ ಇದರ ಕರ್ತೃ ಇವನೇ ಎಂದು ಗುರ್ತಿಸುವ, ಅವನ ಕರ್ತೃತ್ವ ಶಕ್ತಿಗೆ ಪ್ರೋತ್ಸಾಹ ನೀಡುವ ಗುಣ ಅವರಿಗೆ ರಕ್ತಗತವಾಗಿತ್ತೆಂಬುದಕ್ಕೆ ಚೀಟಿ ಕಳುಹಿಸಿದವ ನಾನೇ ಎಂದು ತತ್ ಕ್ಷಣ ಕಂಡುಕೊಂಡಿದ್ದು – ಇದು ನಿದರ್ಶನ.

ಸುನಂದಾ ರಂಗಮಂಟಪದಲ್ಲಿ ಹಿರಿಯ ಕಲಾವಿದ ಟಿ.ಎನ್.ಬಾಲಕೃಷ್ಣ ರಿಗೆ ಸನ್ಮಾನ. ಹೆಚ್ಚೆನ್ನೆಸ್, ಎಸ್ಸೆಸ್ ಅತಿಥಿಗಳು. ಎಂದಿನಂತೆ ನನ್ನದೇ ಸ್ವಾಗತ, ನಿರೂಪಣೆ, ಇತ್ಯಾದಿ. ಸಮಾರಂಭದ ನಂತರ ಚೇತನಾ ಹೋಟೆಲ್ ಕೊಠಡಿಯಲ್ಲಿ ಬಾಲಕೃಷ್ಣ, ಚಿತ್ರ ನಿರ್ದೇಶಕ ವೈ.ಆರ್.ಸ್ವಾಮಿ ಅವರ ಜೊತೆಯಲ್ಲಿ ಹೆಚ್ಚೆನ್ನೆಸ್ ಮತ್ತು ನನ್ನ ಭೋಜನಾ ನಂತರ ಮಾತುಕತೆ.

ಸುದೀರ್ಘವಾಗಿ ಮಾತನಾಡಿದ ಬಾಲಕೃಷ್ಣರು ಇಂದಿನ ಚಿತ್ರರಂಗದ ಒಳ ರಾಜಕೀಯ, ಅನಿಸ್ಟ ಬೆಳವಣಿಗೆಯ ಬಗ್ಗೆ ಗದ್ಗದ ಕಂಠದಿಂದ ವಿವರಿಸಿದಾಗ ಗಾಬರಿಯಾಗುವ, ಅಯ್ಯೊ ! ಹೀಗೂ ಉಂಟೆ?  ಎಂದು ವಿಭ್ರಾಂತನಾಗುವ ಸರದಿ ನನ್ನದು. ಎಲ್ಲವನ್ನೂ ಚಕಚಕನೆ ನೋಟ್ಸ್ ಮಾಡಿಕೊಳ್ಳಲು ಮರೆಯಲಿಲ್ಲ.

ಊಟ ಮುಗಿಯಿತು. ಕೈ ಮುಗಿದು ಹೊರಬಂದೆವು. `ನೋಟ್ಸ್ ಮಾಡ್ಕೊಂಡ್ರಲ್ಲ, ಮುಂದೇನು ಮಾಡ್ತೀರಿ?’ ದಾರಿಯಲ್ಲಿ ಹೆಚ್ಚೆನ್ನೆಸ್ ಪ್ರಶ್ನೆ. `ಸರ್, ಒಳ್ಳೆ ಸ್ಟೋರಿ ಮಾಡಿ ಭಾನುವಾರದ ಸಂಚಿಕೆಗೆ ಹಾಕ್ತೇನೆ’ ಎಂದೆ.

`ಮೊದ್ಲು ಆ ಚೀಟೀನ ಹರ್ದು ಎಸೀರಿ. ಪ್ರಕಟವಾದ್ರೆ ನೀವೂ ಇರೋಲ್ಲಾ, ಅವ್ರೂ ಇರೋಲ್ಲಾ. ನನ್ನ ಅನುಭವದ ಮಾತನ್ನು ಕೇಳಿ’ ಅಂದ್ರು ಹೆಚ್ಚೆನ್ನೆಸ್. ಅಷ್ಟೇ ಮಾಡ್ದೆ. ಕಿರಿಯ ಬರಹಗಾರರ ಹಿತದ ಬಗ್ಗೆ ಹೆಚ್ಚೆನ್ನೆಸ್ ತೋರುತ್ತಿದ್ದ ಕಾಳಜಿಗೆ ಇದೊಂದು ನಿದರ್ಶನ.

ರೈಲು ಉದ್ಯೋಗಕ್ಕೆ ಸೇರಿದ ಮೇಲೊಮ್ಮೆ ಹೆಚ್ಚೆನ್ನೆಸ್ ರೈಲು ಹತ್ತಲು ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ಬಂದರು. ಅಲ್ಲಿದ್ದ ವೇಳಾಪಟ್ಟಿಯಲ್ಲಿರುವ ರೈಲುಗಳ ಸಂಖ್ಯೆ ನೋಡಿ ಆಶ್ಚರ್ಯಪಟ್ಟ ಅವರು ನಮ್ಮೂರಿಗೆ ಇಷ್ಟೊಂದು ರೈಲು ಬರುತ್ತೆ ಅಂಥ ನನಗೆ ಗೊತ್ತಿರ್ಲಿಲ್ಲ. ಇದನ್ನು ಬರೆದು ಕೊಡಿ ಹಾಕೋಣ. ಜನಗಳಿಗೆ ಅನುಕೂಲವಾಗುತ್ತೆ ಅಂದ್ರು. ಜೊತೆಗೆ ಬಂದಿದ್ದ ಮಂಜುನಾಥ ಏಕಬೋಟೆಯವರ ಕೈಗೆ ಪ್ರತಿ ಮಾಡಿ ಕೊಟ್ಟೆ. ಅಭ್ಯಾಸ ಬಲದಂತೆ ಕೆಳಗೆ ಸಹಿ ಹಾಕಿದ್ದೆ. ಮರುದಿನವೇ ರೈಲ್ವೆ ವೇಳಾಪಟ್ಟಿ ಪ್ರಕಟಗೊಂಡಿತು, ಲೇಖಕ (?)ರ ಹೆಸರಿನ ಸಹಿತ ! 

ಮಾರನೇ ದಿನ ನಿಲ್ದಾಣಕ್ಕೇ ಬಂದು ಮಾತನಾಡಿಸಿದ ಹಿರಿಯ ಸಹಕಾರಿ ಧುರೀಣರಾಗಿದ್ದ ಅಂದನೂರು ಕೊಟ್ರಬಸಪ್ಪನವರು `ನೋಡಪ್ಪಾ, ನಾನು ವೇಳಾಪಟ್ಟಿಯನ್ನು ಕತ್ತರಿಸಿ ನನ್ನ ಬೆಡ್ ರೂಂನಲ್ಲಿ ಹಾಕಿದ್ದೇನೆ. ಇವು ಜನರಿಗೆ ಉಪಯೋಗ ಆಗ್ತಾವೆ. ಅದ್ ಬಿಟ್ಟು ಏನೇನೋ ಹಾಕಿ ಪೇಜ್ ತುಂಬ್ಸಿದ್ರೆ ಏನ್ ಸುಖ? ಇದನ್ನೇ ನಾನು  ಷಡಕಣ್ಣನಿಗೂ ಹೇಳ್ದೆ’ ಎಂದು ಶಹಬ್ಬಾಶ್‌ಗಿರಿ ಕೊಟ್ಟರು ! 

ಹೆಚ್ಚೆನ್ನೆಸ್ ಗೆ ಹೇಳಿದಾಗ `ಇಷ್ಟು ವರ್ಷದ ಮೇಲೆ ಹೀಗಾದ್ರೂ ಜನ ಗುರ್ತಿಸಿದ್ರಲ್ಲ ಅಂತಾ ಸಂತೋಷ ಪಡಿ ವೇಳಾಪಟ್ಟಿ ಸಾಹಿತಿಗಳೇ’ ಎಂದು ರೇಗಿಸುವುದನ್ನು ಬಿಡಲಿಲ್ಲ.

ಆ ದಿನಗಳಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುವ ದೊಡ್ದ ಖಯ್ಯಾಲಿ ನನಗೆ. ಅದಕ್ಕೆ ತಕ್ಕಂತೆ ರೈಲು ಹತ್ತಿಸುತ್ತಿದ್ದ ಮಿತ್ರ ಬಳಗ. ಕೈಗೆ ಸಿಗುತ್ತಿದ್ದ ಕಾರ್ಯಕ್ರಮಗಳು.

ಹೀಗೆ ಒಂದು ಕಾರ್ಯಕ್ರಮ. ಹೆಚ್ಚೆನ್ನೆಸ್ ಅಧ್ಯಕ್ಷತೆ. ಇನ್ನೂ ನಾಲ್ಕಾರು ಜನ ಅತಿಥಿಗಳು. ಕಾರ್ಯಕ್ರಮ ಆರಂಭಿಸಿದೆ. ಇದ್ದ ಅತಿಥಿಗಳನ್ನು ಬಾಯಿಗೆ ಬಂದ ಶಬ್ದಭಂಡಾರದಿಂದ ಹಾಡಿ ಹೊಗಳಿದೆ. ಅದ್ಭುತ ಮುಕ್ತಾಯವೂ ಆಯಿತು.

`ಪ್ರಸಾದ್, ನನ್ನ ಕಾರಿನಲ್ಲೇ ಬನ್ನಿ’ ಅಂದ್ರು ಹೆಚ್ಚೆನ್ನೆಸ್. ಆಫೀಸಿಗೆ ಕರೆದೊಯ್ದರು. ಚಹಾ ನಂತರ `ಒಂದು ಮಾತು ಹೇಳಿದ್ರೆ, ಬೇಜಾರು ಇಲ್ಲಾ ತಾನೇ’ ಅಂದ್ರು. `ಛೆ ! ಛೆ !! ಇಲ್ಲ, ಹೇಳಿ ಸರ್’ ಅಂದೆ.

`ನೀವು ಕಾರ್ಯಕ್ರಮ ಚೆನ್ನಾಗಿ ನಿರೂಪಣೆ ಮಾಡ್ತೀರಿ, ಒಳ್ಳೆಯ ಶಬ್ದ ಭಂಡಾರವಿದೆ. ಸಂತೋಷ. ಆದರೆ ಆ ಹೊಗಳಿಕೆಗಳು ಸತ್ಪಾತ್ರರಿಗೆ ಸಂದಾಗ ಆ ಮಾತುಗಾರಿಕೆಗೂ ಒಂದು ಬೆಲೆ ಬರುತ್ತದೆ. ಅದ್ಬಿಟ್ಟು ಅಪಾತ್ರದಾನವಾದ್ರೆ ನಗೆಪಾಟಲಿಗೀಡಾಗ್ತೀರಿ. ಯಾವ್ಯಾವ್ದೋ ಕಾರಣಗಳಿಗಾಗಿ ವ್ಯವಸ್ಥಾಪಕರು ಅನಿವಾರ್ಯವಾಗಿ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಕಳೆದುಕೊಂಡವರನ್ನೂ ಕರೆದಿರಬಹುದು. ಅದರಿಂದ ಅವರಿಗುಪಯೋಗವೂ ಆಗಬಹುದು. ಆದರೆ ಇದಾವುದರ ಅರಿವಿಲ್ಲದ ಭೋಳೆ ಸ್ವಭಾವದ ನೀವು ಅವರುಗಳನ್ನು ಇಂದ್ರ, ಚಂದ್ರ, ದೇವೇಂದ್ರ ಎಂದು ಹಾಡಿ ಹೊಗಳಿ ಅಟ್ಟಕ್ಕೇರಿಸಿದರೆ, ಜನ ಅವರ ಚಾರಿತ್ರ್ಯದ ಅಳತೆಗೋಲಿನಲ್ಲಿ ನಿಮ್ಮನ್ನು ಅಳೆಯುತ್ತಾರೆ.’

ಅಂದಿನಿಂದ ನಿರೂಪಣೆಗೆ ಕೈ ಮುಗಿದೆ.

ಒಂದು ಸಂಜೆ ಮಿತ್ರ ಹೆಚ್.ಆಂಜನೇಯ ಫೋನ್ ಮಾಡಿ, `ಎಂಟು ಗಂಟೆಗೆ ಬರ್ತೇನೆ, ರೆಡಿ ಇರಿ. ಆಸ್ಪತ್ರೆಗೆ ಹೋಗಬೇಕು. ಹೆಚ್ಚೆನ್ನೆಸ್‌ಗೆ ಆರೋಗ್ಯ ಸರಿಯಿಲ್ಲವಂತೆ’ ಎಂಬ ಆಘಾತಕಾರಿ ವಿಚಾರ ತಿಳಿಸಿದ್ರು.

ಆದರಂದು ಹಾವೇರಿಯಲ್ಲಿ ರಾತ್ರಿ ಪಾಳಿ ಕರ್ತವ್ಯದಲ್ಲಿದ್ದ ನಾನು ಹೊರಡುವಂತಿರಲಿಲ್ಲ, ಬಿಡುವಂತಿರಲಿಲ್ಲ. `ಈಗ ಬೇಡ. ಬೆಳಗ್ಗೆ ಎಂಟಕ್ಕೆ ಬನ್ನಿ, ರೆಡಿ ಇರ್ತೇನೆ‌’ ಎಂದು ಬಲವಂತವಾಗಿ ಒಪ್ಪಿಸಿದೆ.

ಮುಂಜಾನೆ ಹಾವೇರಿಯಿಂದ ಹೊರಡುವಾಗಲೇ ಆಂಜನೇಯರ ಕೋಪಾವಿಷ್ಟ ಮಾತುಗಳು ಫೋನಿನಲ್ಲಿ ತೂರಿಬಂದವು `ನಿಮ್ಮಿಂದಾಗಿ ನಾನೂ ಹೋಗಲಿಲ್ಲ, ಹೆಚ್ಚೆನ್ನೆಸ್ ಇನ್ನಿಲ್ಲ’

ಯುಗವೊಂದು ಅಂತ್ಯವಾಯಿತು !


ಹಳೇಬೀಡು ರಾಮ ಪ್ರಸಾದ್

error: Content is protected !!