ಶವವಿಟ್ಟುಕೊಂಡು ಸಂಬಂಧಿಕರ ಪರದಾಟ
ದಾವಣಗೆರೆ, ಏ.30- ಆಂಬ್ಯುಲೆನ್ಸ್ ಗೆ ದುಡ್ಡು ಕೊಡದಿದ್ದಕ್ಕೆ ಚಿತಾಗಾರಕ್ಕೆ ಶವವನ್ನು ಆಂಬ್ಯುಲೆನ್ಸ್ ಮೂಲಕ ತೆಗೆದುಕೊಂಡು ಹೋಗದ ಕಾರಣ ಶವವಿಟ್ಟುಕೊಂಡು ಎರಡು ಗಂಟೆಗಳ ಕಾಲ ಸಂಬಂಧಿಕರು ಪರದಾಡಿರುವ ಅಮಾನವೀಯ ಘಟನೆ ಚಿಗಟೇರಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ ವರದಿಯಾಗಿದೆ.
ನಗರದ ಶಿವಕುಮಾರಸ್ವಾಮಿ ಬಡಾವಣೆಯ ಖಾಸಗಿ ಬಸ್ ಏಜೆಂಟ್ ಮಂಜಪ್ಪ ಎಂಬುವರು ಇಂದು ಕೊರೊನಾದಿಂದ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟರು. ಬೆಳಿಗ್ಗೆ ಶವದ ಅಂತ್ಯ ಸಂಸ್ಕಾರ ನಡೆಸಲು ಚಿತಾಗಾರಕ್ಕೆ ತೆಗೆದುಕೊಂಡು ಹೋಗಬೇಕಿತ್ತು. ಆದರೆ, 4 ಸಾವಿರ ಹಣ ನೀಡದೇ ಆಂಬ್ಯುಲೆನ್ಸ್ ಅನ್ನು ಮುಂದೆ ಬಿಡಲು ಆಂಬ್ಯುಲೆನ್ಸ್ ಚಾಲಕ ತಯಾರಿರಲಿಲ್ಲ. ಹೀಗಾಗಿ, ಶವವನ್ನು ಇಟ್ಟುಕೊಂಡು ಜಿಲ್ಲಾಸ್ಪತ್ರೆಯ ಶವಾಗಾರದ ಆವರಣದಲ್ಲಿ ಸಂಬಂಧಿಕರು ಎರಡು ಗಂಟೆಗಳ ಕಾಲ ಪರದಾಟ ನಡೆಸಬೇಕಾಯಿತು.
ಹಣವನ್ನು ಆಮೇಲೆ ಕೊಡುವುದಾಗಿ ಕೇಳಿ ಕೊಂಡರೂ ಒಪ್ಪದ ಚಾಲಕ ದುಡ್ಡು ಹೊಂದಿಸಿ ಕೊಳ್ಳಿ, ಆಮೇಲೆ ಹೋಗೋಣ ಎಂದು ಹೇಳಿ ಹೋಗಿದ್ದ. ಮೃತನ ಸಂಬಂಧಿಕರು ಕೂಡ ಹಣ ಹೊಂದಿಸುವುದಕ್ಕಾಗಿ ಹರಸಾಹಸ ಪಟ್ಟ ಪರಿಸ್ಥಿತಿ ಮನಕಲಕುವಂತೆ ಇತ್ತು. ಇಂತಹ ಸ್ಥಿತಿ ಯಲ್ಲಿ ಶವವನ್ನು ಚಿತಾಗಾರಕ್ಕೆ ಸಾಗಿಸಲು ವಾಹನ ವ್ಯವಸ್ಥೆ ಮಾಡದ ಜಿಲ್ಲಾಡಳಿತದ ವಿರುದ್ಧವೂ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ನಂತರ ವಿಷಯ ತಿಳಿದ ಆನಗೋಡು ಜಿ.ಪಂ ಕ್ಷೇತ್ರದ ಸದಸ್ಯ ಕೆ.ಎಸ್. ಬಸವಂತಪ್ಪ ಅವರು ನಗರ ಪಾಲಿಕೆ ಅಧಿಕಾರಿಗಳ ಮನವೊಲಿಸಿ ಮುಕ್ತಿ ವಾಹಿನಿ ವಾಹನ ಒದಗಿಸಿಕೊಡುವಂತೆ ಮನವಿ ಮಾಡಿದರು. ಮುಕ್ತಿ ವಾಹಿನಿ ಬಂದ ಬಳಿಕ ಖಾಸಗಿ ಆಂಬ್ಯುಲೆನ್ಸ್ ನಿಂದ ಶವವನ್ನು ಮುಕ್ತಿ ವಾಹಿನಿಗೆ ಹಾಕಿಕೊಂಡು ಚಿತಾಗಾರಕ್ಕೆ ತೆಗೆದುಕೊಂಡು ಹೋಗಲಾಯಿತು.