ಸಂಶಯಾತ್ಮಕ ವ್ಯಕ್ತಿಗಳು ಕಂಡುಬಂದರೆ 112 ಕ್ಕೆ ಕರೆ ಮಾಡಿ

ಜಗಳೂರಿನಲ್ಲಿ ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ್‌

ಜಗಳೂರು, ಏ.30- ಅಪರಾಧ ತಡೆಗಾಗಿ ಕರ್ನಾಟಕ ಸರ್ಕಾರ ನೂತನವಾಗಿ ಇಆರ್‌ಎಸ್‌ಎಸ್‌ ವಿಶೇಷ ಯೋಜನೆ ಜಾರಿಗೊಳಿಸಿದ್ದು, ಸಂಶಯಾತ್ಮಕ ವ್ಯಕ್ತಿಗಳು ಕಂಡುಬಂದಲ್ಲಿ 112 ನಂಬರ್‌ಗೆ ಕರೆ ಮಾಡಿ ಎಂದು ದಾವಣಗೆರೆ ಗ್ರಾಮಾಂತರ ಉಪವಿಭಾಗದ ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ್ ತಿಳಿಸಿದರು.

ಪಟ್ಟಣದ ಇಂದಿರಾ ಬಡಾವಣೆಯ ದುರ್ಗಾಂಭಿಕಾ ದೇವಸ್ಥಾನ ಮುಂಭಾಗದ ಕಾಲೋನಿಯ ನಿವಾಸಿಗಳಿಗೆ ಕೊರೊನ ಹಾಗೂ ಅಪರಾಧ ತಡೆ ಮಾಸಾಚರಣೆ ಕುರಿತು ಜಾಗೃತಿ ಮೂಡಿಸಿ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿ  ಮಾತನಾಡಿ, ಕೊರೊನಾ ಬಗ್ಗೆ ಭಯ ಬೇಡ ಜಾಗೃತಿ ವಹಿಸಿರಿ. ಶಕ್ತಿವರ್ಧಕ ಆಹಾರ ಪದಾರ್ಥಗಳನ್ನು ಸೇವಿಸಿ ಯೋಗಾಭ್ಯಾಸ ನಡೆಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ಈ ಬಾರಿ ಕೋವಿಡ್ ಎರಡನೇ ಅಲೆ ಸೋಂಕು ಅತಿ ವೇಗದಲ್ಲಿ ಪಸರಿಸುತ್ತಿದ್ದು, ಅರಿತುಕೊಂಡು ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡಿ ಲಾಕ್‌ಡೌನ್ ನಿಯಮ ಪಾಲಿಸುವ ಮೂಲಕ ಪೊಲೀಸ್ ಇಲಾಖೆಯವರಿಗೆ ಸಹಕರಿಸಬೇಕು ಎಂದು ಹೇಳಿದರು.

ಇಆರ್‌ಎಸ್‌ಎಸ್‌ ವಾಹನ ವಿಶೇಷವಾಗಿ ಬೀಟ್‌ಗೆ ನಿಯೋಜಿಸಲಾಗಿದ್ದು, ನಿರಂತರ ಸೇವೆಯಲ್ಲಿ ಪೊಲೀಸ್‌ ಸಿಬ್ಬಂದಿಗಳು ನಿರತರಾಗಿರುತ್ತಾರೆ. ಪಟ್ಟಣದಲ್ಲಿ ಒಂಟಿ ಮನೆಗಳಿಗೆ ಅಥವಾ ಮನೆಯಲ್ಲಿ ಯಾರೂ ಇರದ ವೇಳೆ ದಿಢೀರ್ ಕಳ್ಳರು ಆಕ್ರಮಿಸಿದರೆ 112 ಸಹಾಯವಾಣಿಗೆ ಕರೆ ಮಾಡಿ ತಿಳಿಸಬೇಕು  ಎಂದು ತಿಳಿಸಿದರು.

ಸಿಪಿಐ ಮಂಜುನಾಥ್ ಪಂಡಿತ್ ಮಾತನಾಡಿ, ಕೊರೊನಾ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಿರಿ. ಪೊಲೀಸ್ ಇಲಾಖೆಯಿಂದ ಮಾಸ್ಕ್ ವಿತರಿಸಿ ಜಾಗೃತಿ ಮೂಡಿಸಲಾಗಿದೆ. ಬೆಳಿಗ್ಗೆ 6 ರಿಂದ  10 ರವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಿ ನಂತರ ಮನೆಗಳಲ್ಲಿದ್ದು ಲಾಕ್‌ಡೌನ್‌ಗೆ ಕೈಜೋಡಿಸಬೇಕು. 

ಅನಾವಶ್ಯಕವಾಗಿ ತಿರುಗಾಡಿದರೆ ದಂಡ ಖಚಿತ ಎಂದು ಎಚ್ಚರಿಸಿದರು.   ಪಿಎಸ್‌ಐ ಸಂತೋಷ್ ಭಾಗೋಜಿ, ಪೊಲೀಸ್ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

error: Content is protected !!