ಲಾಕ್‌ಡೌನ್ ನಿಯಮ ಸಡಿಲಿಕೆಗೆ ಸಿಎಂಗೆ ರೇಣುಕಾಚಾರ್ಯ ಮನವಿ

ದಾವಣಗೆರೆ, ಏ. 29 – ರೈತರ ಹಿತದೃಷ್ಟಿಯಿಂದ ಲಾಕ್‌ ಡೌನ್‌ ನಿಯಮವನ್ನು ಸಡಿಲಗೊಳಿ ಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಶಾಸಕ ಎಂ.ಪಿ. ರೇಣುಕಾಚಾರ್ಯ ಮನವಿ ಮಾಡಿದ್ದಾರೆ.

ಬೆಂಗಳೂರಿನ ಮುಖ್ಯಮಂತ್ರಿ ಗಳ ಅಧಿಕೃತ ನಿವಾಸದಲ್ಲಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ರೇಣುಕಾಚಾರ್ಯ ಮನವಿ ಮಾಡಿದ್ದು, ಇದಕ್ಕೆ ಮುಖ್ಯಮಂತ್ರಿಗಳ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ. ಲಾಕ್‌ಡೌನ್‌ ನಿಯಮದಂತೆ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಹಣ್ಣು, ತರಕಾರಿ ಕೊಳ್ಳಲು ಹಾಗೂ ಮಾರಲು ಅವಕಾಶ ಮಾಡಿಕೊಟ್ಟಿದ್ದು, ಇದು ಸ್ವಲ್ಪಮಟ್ಟಿಗೆ ಅನಾನುಕೂಲ ಉಂಟು ಮಾಡಿದ್ದು, ಲಾಕ್‌ಡೌನ್‌ ನಿಯಮ ವನ್ನು ರೈತರ ಹಿತದೃಷ್ಟಿಯಿಂದ ಬೆಳಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಡಿಲಿಸುವಂತೆ ಮುಖ್ಯಮಂತ್ರಿಗಳಿಗೆ ರೇಣುಕಾಚಾರ್ಯ ಮನವಿ ಮಾಡಿದ್ದಾರೆ.

ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕಿನಲ್ಲಿ 880 ಹೆಕ್ಟೇರ್ ಪ್ರದೇಶದಲ್ಲಿ ತರಕಾರಿಯನ್ನು ಬೆಳೆಯ ಲಾಗುತ್ತದೆ. ಇಲ್ಲಿ ಬೆಳೆದ ತರಕಾರಿಯ ನ್ನು ಮಂಗಳೂರು, ಉಡುಪಿ ಇನ್ನಿತರೆ ಜಿಲ್ಲೆಗಳಿಗೆ ಸರಬರಾಜು ಮಾಡಲಾಗುತ್ತದೆ. ಅಷ್ಟೇ ಅಲ್ಲದೇ ರಾಜ್ಯಾದ್ಯಂತ ಸಾಕಷ್ಟು ಜನ ರೈತರು ತರಕಾರಿ ಬೆಳೆಯುತ್ತಿದ್ದು ಲಾಕ್‌ಡೌನ್‌ ಸಮಯದಿಂದ ಅನಾನುಕೂಲ ಉಂಟಾಗಿದೆ ಎಂದು ಸಿಎಂಗೆ ಮನವರಿಕೆ ಮಾಡಿಕೊಟ್ಟರು.

ತರಕಾರಿ ಕಟಾವು ಮಾಡಲು, ಅವುಗಳನ್ನು ಲಾರಿಗಳಿಗೆ ತುಂಬಲು ಕೂಲಿ ಕಾರ್ಮಿಕರು 8 ರಿಂದ 9 ಘಂಟೆಗೆ ಆಗಮಿಸುತ್ತಾರೆ. ಇದರಿಂದಾಗಿ ರೈತರು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಂದರೆ ಖರೀದಿದಾರರು ಕಡಿಮೆ ಬೆಲೆಗೆ ತರಕಾರಿಗಳನ್ನು ಖರೀದಿ ಮಾಡುತ್ತಾರೆ. ಇದರಿಂದ ರೈತರಿಗೆ ಅನಾನುಕೂಲ ಉಂಟಾಗುತ್ತಿದೆ ಎಂದರು.

ಲಾಕ್‌ಡೌನ್‌ ಸಮಯದ ಅಭಾವದಿಂದಾಗಿ ರೈತರು ಬೆಳೆದ ತರಕಾರಿಗಳನ್ನು ಸರಿಯಾಗಿ ಸಾಗಿಸಲು ಆಗದೇ, ಸೂಕ್ತ ಬೆಲೆಯೂ ಸಿಗದೇ ತರಕಾರಿ ಬೆಳೆದ ರೈತರು ಕಂಗಾಲಾಗಿ ಹೋಗಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ರೈತರಿಗೆ ಅನುಕೂಲವಾಗುವ ನಿತಟ್ಟಿನಲ್ಲಿ ಸಮಯವನ್ನು ಬೆಳಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಿಗದಿ ಮಾಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

ಈ ಸಂದರ್ಭ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರು ರೇಣುಕಾಚಾರ್ಯರಿಗೆ ಸಾಥ್ ನೀಡಿದರು.

error: Content is protected !!