ಕೋವಿಡ್ ನಿಂದ ಜೈಲು ಹಕ್ಕಿಗಳ ರಕ್ಷಣೆಯೇ ಸವಾಲು

ಜಿಲ್ಲಾ ಕಾರಾಗೃಹದಲ್ಲಿ 219 ವಿಚಾರಣಾಧೀನ ಖೈದಿಗಳು, ಸ್ಥಳದ ಅಭಾವ

ದಾವಣಗೆರೆ, ಏ.29- ತನ್ನ ಕಬಂಧ ಬಾಹುಗಳನ್ನು ಎಲ್ಲೆಡೆ ಚಾಚುತ್ತಿರುವ ಕೊರೊನಾ ಮಹಾಮಾರಿಯಿಂದ ಜಿಲ್ಲಾ ಕಾರಾಗೃಹದಲ್ಲಿನ ವಿಚಾರಣಾಧೀನ ಖೈದಿಗಳನ್ನು ರಕ್ಷಿಸುವುದೇ ಸವಾಲಿನ ಕೆಲಸವಾಗಿದೆ.

ಹೌದು, ಒಂದೆಡೆ ದಿನೇ ದಿನೇ ಹೆಚ್ಚಾಗುತ್ತಿರುವ ಕೋವಿಡ್ ಸೋಂಕು. ಮತ್ತೊಂದೆಡೆ ಸ್ಥಳಾವಕಾಶದ ಕೊರತೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವಿಚಾರಣಾಧೀನ ಖೈದಿಗಳ ಜೀವ ರಕ್ಷಿಸುವುದು ನಮ್ಮ ಹೊಣೆ. ಅದಕ್ಕಾಗಿ ಹಗಲು ಇರುಳು ಶ್ರಮಿಸುತ್ತಿದ್ದೇವೆ ಎಂಬುದು ಜಿಲ್ಲಾ ಕಾರಾಗೃಹದ ಸಹಾಯಕ ಅಧೀಕ್ಷಕ ಕರ್ಣ ಬಿ. ಕ್ಷತ್ರಿ ಅವರ ಮಾತು.

 `ಜನತಾವಾಣಿ’ ಯೊಂದಿಗೆ ಕಾರಾಗೃಹದ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಮಾತನಾಡಿದ ಅವರು,  ಕೊರೊನಾದಂತಹ ಸಾಂಕ್ರಾಮಿಕ ರೋಗಗಳು ಬಂದಾಗ  ಕಾರಾಗೃಹಗಳನ್ನು ನಿಭಾಯಿಸುವುದು ಸುಲಭದ ಮಾತಲ್ಲ ಎಂದರು.

ನಗರದ ಮಧ್ಯ ಭಾಗದಲ್ಲಿ ಕಾರಾಗೃಹ ಇರುವ ಕಾರಣ ದಿನದ 24 ಗಂಟೆಗಳ ಕಾಲವೂ ಸಿಬ್ಬಂದಿಗಳ ಸರ್ಪಗಾವಲು ಹಾಕಲಾಗಿದೆ ಎಂದು ಹೇಳಿದರು.

ಕಾರಾಗೃಹದಲ್ಲಿ ಅಧಿಕೃತವಾಗಿ 170 ಜನ ಖೈದಿಗಳಿಗೆ ಇರಲು ಸ್ಥಳಾವಕಾಶ ಇದೆ. ಆದರೆ, ಸದ್ಯ 219 ಮಂದಿ ವಿಚಾರಣಾಧೀನ ಖೈದಿಗಳಿದ್ದಾರೆ. ಸಣ್ಣಪುಟ್ಟ ವಿಚಾರಣೆ ಇದ್ದರೆ ಬೇಗನೇ ವಿಚಾರಣೆ ಮುಗಿದು ಕಾರಾಗೃಹದಿಂದ ಮುಕ್ತರಾಗುತ್ತಾರೆ. ದೊಡ್ಡ ವಿಚಾರಣೆಗಳಿದ್ದ ಖೈದಿಗಳು ಆ ವಿಚಾರಣೆ ಮುಗಿಯುವವರೆಗೂ ಇರಬೇಕಾಗುತ್ತದೆ ಎಂದರು.

ಖೈದಿಗಳ ಸಂಖ್ಯೆಗೆ ಅನುಗುಣವಾಗಿ ಸ್ಥಳಾವಕಾಶ ಇಲ್ಲದ ಕಾರಣ ಎಲ್ಲರನ್ನೂ ಒಂದೇ ಕಡೆ ಇರಿಸಬೇಕಾಗುತ್ತದೆ. ಇದರಿಂದಾಗಿ ಅವರು ದೈಹಿಕ ಅಂತರ ಕಾಪಾಡಿಕೊಳ್ಳುವುದು ಕಷ್ಟ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲೂ ಸದ್ಯಕ್ಕೆ ಯಾವುದೇ ಖೈದಿಗಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿಲ್ಲ ನಾವು ಕೋವಿಡ್  ಮಾರ್ಗಸೂಚಿಯನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದೇವೆ ಎಂದರು.

ಮೊದಲ ಅಲೆಯಲ್ಲಿ ಐವರಿಗೆ ಕೊರೊನಾ: ಜೈಲಿನಲ್ಲಿ ಮುಂಜಾಗ್ರತಾ ಕ್ರಮವಾಗಿ ರೆಡ್ ಜೋನ್, ಆರೆಂಜ್ ಜೋನ್ ಹಾಗೂ ಗ್ರೀನ್ ಜೋನ್‍ಗಳನ್ನಾಗಿ ವಿಂಗಡಿಸಿ ವಿಭಾಗಗಳನ್ನು ಮಾಡಲಾಗಿದೆ.

ಈ ಹಿಂದೆ ಮೊದಲ ಅಲೆಯ ಸಂದರ್ಭದಲ್ಲಿ ಹೊರಗಿನಿಂದ ಬಂದ ಹೊಸ ಐವರು ಖೈದಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಅಂತಹ ಸಂದರ್ಭದಲ್ಲಿ ಅವರಿಗೆ 10ರಿಂದ 12 ದಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಕಾರಾಗೃಹಕ್ಕೆ ತಂದ ಮೇಲೂ ಸಹ ಇತರೆ ಖೈದಿಗಳೊಂದಿಗೆ ಬೆರೆಯಲು ಬಿಡದೇ 14 ದಿನ ಜೈಲಿನಲ್ಲೇ ಪ್ರತ್ಯೇಕ ಕೊಠಡಿಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ರೋಗದ ಲಕ್ಷಣ ಕಾಣಿಸಿಕೊಳ್ಳದೇ ಇದ್ದ ನಂತರವೇ ಅವರನ್ನು ಸಾಮಾನ್ಯ ಸೆಲ್‍ಗಳಿಗೆ ಕಳುಹಿಸಲಾಗಿತ್ತು ಎಂದು ಕರ್ಣ ಬಿ. ಕ್ಷತ್ರಿ ನೆನಪಿಸಿಕೊಂಡರು.

ಸಿಬ್ಬಂದಿಗಳಿಗೆ ವಸತಿ ಗೃಹಗಳ ಕೊರತೆ: ಕಾರಾಗೃಹದಲ್ಲಿ 42 ಮಂದಿ ಅಧಿಕಾರಿ, ಸಿಬ್ಬಂದಿಗಳಿದ್ದಾರೆ. ಅವರಲ್ಲಿ ಕೇವಲ 10 ಜನಕ್ಕೆ ಮಾತ್ರ ವಸತಿ ಗೃಹಗಳು ಲಭ್ಯವಾಗಿವೆ. ಉಳಿದ 32 ಜನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. 

ಪ್ರತಿ ಮೂರು ಗಂಟೆಗಳಿಗೊಮ್ಮೆ ಪಾಳಿ ಪದ್ದತಿಯಂತೆ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಖೈದಿಗಳಿಗೆ  ಕೋವಿಡ್ ಸೋಂಕು ತಾಕದಂತೆ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ. 

ಬಾಡಿಗೆ ಮನೆಯಲ್ಲಿನ ಸಿಬ್ಬಂದಿಗಳು ಕರ್ತವ್ಯಕ್ಕಾಗಿ ಹೊರಗಡೆಯಿಂದ ಕಾರಾಗೃಹಕ್ಕೆ ಬರುವ ಕಾರಣ ತುಸು ಆತಂಕಕ್ಕೆ ಕಾರಣವಾಗಿದೆ. ಕಾರಾಗೃಹದ ಸಮೀಪದಲ್ಲೇ ವಸತಿ ಗೃಹಗಳು ಇದ್ದರೆ ತುರ್ತು ಸೇವೆಗಳಿಗೆ ಅನುಕೂಲ ಆಗುವ ಜೊತೆಗೆ ಕೊರೊನಾ ಆತಂಕವೂ ಇಲ್ಲದಂತಾಗುತ್ತಿತ್ತು ಎಂದರು.

ಸಾಮಾನ್ಯವಾಗಿ ಕಾರಾಗೃಹಗಳು ನಗರ ಪ್ರದೇಶದಿಂದ ಹೊರ ಭಾಗದಲ್ಲಿ ಇರುತ್ತವೆ. ಆದರೆ ಜಿಲ್ಲಾ ಕಾರಾಗೃಹ ನಗರ ಮಧ್ಯದಲ್ಲಿದೆ. ಇದು  ಮತ್ತಷ್ಟು ಆತಂಕ ಸೃಷ್ಠಿಸಿದೆ. ಇದರ ಮಧ್ಯೆ ವಾಹನಗಳ ನಿಲುಗಡೆಗೂ ಸಮಸ್ಯೆ ಆಗಿದೆ ಎನ್ನುತ್ತಾರೆ ಕರ್ಣ ಅವರು.

ಕರ್ತವ್ಯ ನಿರತ ವೈದ್ಯರು ಅವಶ್ಯ: ಕಾರಾಗೃಹದಲ್ಲಿನ ವಿಚಾರಣಾಧೀನ ಖೈದಿಗಳ ಆರೋಗ್ಯ ವಿಚಾರಿಸಲು ಕರ್ತವ್ಯ ನಿರತರಾಗಿ ಸೇವೆ ಸಲ್ಲಿಸುವ ವೈದ್ಯರ ಅಗತ್ಯವಿದೆ. ಸದ್ಯಕ್ಕೆ ಜಿಲ್ಲಾಸ್ಪತ್ರೆಯ ವೈದ್ಯರು ವಾರಕ್ಕೊಮ್ಮೆ ಇಲ್ಲಿಗೆ ಭೇಟಿ ನೀಡಿ ಹೋಗುತ್ತಾರೆ. ಇದೀಗ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವೈದ್ಯರು ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಲು ಸಮಯ ಸಾಕಾಗದೇ ಕಾರಾಗೃಹಕ್ಕೆ ಭೇಟಿ ನೀಡುತ್ತಿಲ್ಲ. ನಾವುಗಳೇ ಯಾವುದೇ ಸಣ್ಣಪುಟ್ಟ ಕಾಯಿಲೆಗಳಿಗೂ ಖೈದಿಗಳನ್ನು ಜಿಲ್ಲಾಸ್ಪತ್ರೆಗೆ ಕಳುಹಿಸುತ್ತಿದ್ದೇವೆ ಎಂದರು.

ದೂರವಾಣಿ, ವಿಡಿಯೋ ಕಾಲ್ ಮುಖೇನ ಸಂಪರ್ಕಾವಕಾಶ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಖೈದಿಗಳ ಸಂಬಂಧಿಕರು ನೇರವಾಗಿ ಭೇಟಿಗೆ ಅವಕಾಶ ಕಲ್ಪಿಸಿಲ್ಲ. ಕೆಲ ಖೈದಿಗಳ ಮಾನಸಿಕ ಸ್ಥೈರ್ಯ ಹೆಚ್ಚಿಸಲು ಸಂಬಂಧಿಕರ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದಂತೆ ವಾರದಲ್ಲಿ ಒಂದು ಬಾರಿ ದೂರವಾಣಿ ಅಥವಾ ವಿಡಿಯೋ ಕಾಲ್ ಮುಖಾಂತರ ಸಂಪರ್ಕದ ಅವಕಾಶ ನೀಡಲಾಗಿದೆ. ಇದಲ್ಲದೇ ವಿಚಾರಣೆ ಸಂದರ್ಭದಲ್ಲೂ ನ್ಯಾಯಾಲಯಕ್ಕೆ ಹಾಜರುಪಡಿಸದೇ ನ್ಯಾಯಾಧೀಶರ ಸೂಚನೆ ಮೇರೆಗೆ ವಿಡಿಯೋ ಕಾಲ್ ಮುಖಾಂತರವೇ ವಿಚಾರಣೆ ನಡೆಸಲಾಗುತ್ತಿದೆ ಎಂದರು.

ವಿಚಾರಣಾಧೀನ ಖೈದಿಗಳ ಭೇಟಿಗಾಗಿ ಒತ್ತಡ: ಕಾರಾಗೃಹದಲ್ಲಿನ ವಿಚಾರಣಾಧೀನ ಖೈದಿಗಳ ಭೇಟಿಗೆ ಕೊರೋನಾ ಹಿನ್ನೆಲೆಯಲ್ಲಿ ನಿಷೇಧ ಇದ್ದರೂ ಸಹ ಅವರನ್ನು ಭೇಟಿ ಆಗಲೇ ಬೇಕು ಎನ್ನುವ ಹಠದಿಂದಾಗಿ ಕೆಲವು ಸಂಬಂಧಿಕರು ಕೆಲ ಗಣ್ಯ ವ್ಯಕ್ತಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳಿಂದ ಒತ್ತಡ ಹಾಕುತ್ತಿದ್ದ ಸನ್ನಿವೇಶಗಳು ಮಾಹಿತಿ ಪಡೆಯುವ ಸಂದರ್ಭದಲ್ಲಿ ಕಾಣ ಸಿಕ್ಕವು.


– ಜಿ.ಎಸ್. ವಸಂತ್‍ಕುಮಾರ್,
[email protected]

error: Content is protected !!