ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ

ಜಿಲ್ಲಾಡಳಿತಕ್ಕೆ ಸಂಸದ ಸಿದ್ದೇಶ್ವರ ಸೂಚನೆ

ದಾವಣಗೆರೆ, ಏ. 29- ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಜಾರಿಗೊಳಿಸಿರುವ ಲಾಕ್‍ಡೌನ್ ವ್ಯವಸ್ಥೆಯನ್ನು ಪರಿಣಾಮಕಾರಿಯನ್ನಾಗಿಸಿ. ಜೊತೆಗೆ ಸೋಂಕಿತರ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಿ ಎಂದು  ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳೊಂದಿಗೆ ಲಾಕ್‍ಡೌನ್ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡ ಸಂಸದರು,  ನಗರದಲ್ಲಿ ಕಾರಣವಿಲ್ಲದೇ ಅಡ್ಡಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ, ಸಕಾರಣದಿಂದ ರಸ್ತೆಗಿಳಿಯುವವರಿಗೆ ಯಾವುದೇ ತೊಂದರೆ ಕೊಡಬೇಡಿ ಎಂದರು.  

ಹೋಂ ಐಸೋಲೇಷನ್ ನಲ್ಲಿರುವ 884 ಜನ ಸೋಂಕಿತರ ಬಗ್ಗೆ ಹೆಚ್ಚಿನ ನಿಗಾ ವಹಿಸಿ. ಅವರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರದಂತೆ ನೋಡಿ ಕೊಳ್ಳಿ. ಹೋಂ ಐಸೋಲೇಷನ್‍ನಲ್ಲಿರುವ ವರ ಮನೆಯ ಮುಂದೆ ಒಂದು ಚಾರ್ಟ್ ಅಂಟಿಸಿ  ಅಲ್ಲಿಗೆ ಭೇಟಿ ನೀಡುವ ಆಶಾ ಕಾರ್ಯಕರ್ತೆಯರು ಹಾಗೂ ವೈದ್ಯರು ಅದರ ಮೇಲೆ ಸಹಿ ಮಾಡಿ ಬರುವಂತೆ ಮಾಡಿ ಎಂಬ ಸಲಹೆ ನೀಡಿದರು.

ಬೆಂಗಳೂರು ನಗರ ಹಾಗೂ ಹೊರ ಜಿಲ್ಲೆಗಳಿಂದ ದಾವಣಗೆರೆ ಜಿಲ್ಲೆಗೆ ಆಗಮಿಸುವವರ ಮೇಲೆ ನಿಗಾ ಇಡುವಂತೆ ಎಸ್ಪಿ ಅವರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಅಗತ್ಯವಿರುವ ರೆಮಿಡಿಸಿವಿರ್ ಇಂಜೆಕ್ಷನ್ ದಾಸ್ತಾನು ಇದೆ. ಅಗತ್ಯವಿರುವ ರೋಗಿಗಳಿಗೆ ಮಾತ್ರ ಈ ಇಂಜೆಕ್ಷನ್ ಬಳಸಲಾಗುತ್ತದೆ .  ಜನ ಭಯಪಡುವ ಅಗತ್ಯವಿಲ್ಲ.  ಇಂದು 8000 ಕೋವಿಡ್ ವ್ಯಾಕ್ಸಿನ್ ದಾವಣಗೆರೆ ಜಿಲ್ಲೆಗೆ ಪೂರೈಕೆಯಾಗಿದೆ.ಬೇಡಿಕೆ ಹೆಚ್ಚಾಗಿರುವ ಕಾರಣ ವ್ಯಾಕ್ಸಿನ್ ಪೂರೈಕೆಯಲ್ಲಿ ಸ್ವಲ್ಪ ವ್ಯತ್ಯಯ ಉಂಟಾಗಿದೆ.  ಒಂದೆರಡು ದಿನಗಳಲ್ಲಿ ಮತ್ತೆ ವ್ಯಾಕ್ಸಿನ್ ಪೂರೈಕೆಯಾಗಲಿದೆ. ಜಿಲ್ಲೆಯ ಜನತೆ ಸಹಕರಿಸಬೇಕು ಎಂದು ಇದೇ ಸಂದರ್ಭದಲ್ಲಿ ಸಂಸದರು ಮನವಿ  ಮಾಡಿಕೊಂಡರು.   

ಎ.ಪಿ.ಎಂ.ಸಿ ಮಾರುಕಟ್ಟೆಯನ್ನು 10 ಗಂಟೆಯ ನಂತರ ವಿಸ್ತರಣೆ ಮಾಡುವ ಬಗ್ಗೆ ಇಂದು ಮುಖ್ಯಮಂತ್ರಿಗಳ ಜೊತೆ  ನಡೆದ  ವಿಡಿಯೋ ಕಾನ್ಫರೆನ್ಸ್‍ನಲ್ಲಿ ಅನುಮತಿ ಕೇಳಲಾಗಿದ್ದು, ಕೃಷಿ ಮಾರುಕಟ್ಟೆ ಸಚಿವರು ಇದಕ್ಕೆ ಅನುಮತಿ ನೀಡಲಿಲ್ಲ ಎನ್ನುವ ವಿಷಯವನ್ನು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಂಸದರ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ  ಡಾ. ನಾಗರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಇತರರು ಉಪಸ್ಥಿತರಿದ್ದರು.

error: Content is protected !!