ದಾವಣಗೆರೆ, ಮಾ.3 – ನಗರಕ್ಕೆ ಸಮೀಪದ ಬಾಡಾ ಕ್ರಾಸ್ ಬಳಿಯ ಶ್ರೀ ವೀರೇಶ್ವರ ಪುಣ್ಯಾ ಶ್ರಮದ ಸುತ್ತ ರಸ್ತೆ ಕಾಮಗಾರಿ ಮಾಡಿಸಿಕೊಡುವುದಾಗಿ ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್ ಭರವಸೆ ನೀಡಿದರು.
ಇತ್ತೀಚೆಗೆ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಏರ್ಪ ಡಿಸಿದ್ದ ಶಿವಾನುಭವ ಗೋಷ್ಠಿಯಲ್ಲಿ ಸನ್ಮಾನಿತರಾಗಿ ಅವರು ಮಾತನಾಡಿದರು. ಆಶ್ರಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಶಿಲಾ ಮಂಟಪ ಸುಂದರವಾಗಿದ್ದು, ದಾನಿಗಳ ಸಹಕಾರದಿಂದ 2.5 ಕೋಟಿ ರೂ. ವೆಚ್ಚದ ಶಿಲಾ ಮಂಟಪದ ಉದ್ಘಾಟನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಬರುವ ಮೇ 13ಕ್ಕೆ ಆಗಮಿಸಲಿದ್ದು, ನಗರಪಾಲಿಕೆಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಅಂಧರ ಆಶಾಕಿರಣವಾದ ಪುಟ್ಟರಾಜ ಗವಾಯಿಗಳು ತಮ್ಮ ಇಡೀ ಜೀವಮಾನವನ್ನು ಸಂಗೀತಕ್ಕೆ ಹಾಗೂ ಅಂಧ ಮಕ್ಕಳ ಕಲ್ಯಾಣಕ್ಕಾಗಿ ಮೀಸಲಾಗಿಟ್ಟಿದ್ದರು ಎಂದು ಸ್ಮರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆಶ್ರಮದ ಅಧ್ಯಕ್ಷ ಅಥಣಿ ವೀರಣ್ಣ ಅವರು ಆಶ್ರಮಕ್ಕೆ ಬರುವ ರಸ್ತೆಯ ಡಾಂಬರೀಕರಣ ಅಥವಾ ಸಿಮೆಂಟ್ ಮಾಡಿಸಿಕೊಡಲು ನಗರ ಪಾಲಿಕೆ ಮಹಾಪೌರರು ಸಮ್ಮತಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ್ದ ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು ಭಕ್ತರು ಹೆಚ್ಚಿನ ಸಹಕಾರ ನೀಡುತ್ತಾರೆ ಎಂದು ತಿಳಿಸಿದರು.
ನಗರಪಾಲಿಕೆಯ ನೂತನ ಮಹಾಪೌರ ಎಸ್.ಟಿ. ವೀರೇಶ್ ತಮ್ಮ ಅವಧಿಯಲ್ಲಿ ಉತ್ತಮ ಕಾರ್ಯವನ್ನು ಮಾಡಲೆಂದು ಶುಭ ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆಶ್ರಮದ ಕಾರ್ಯದರ್ಶಿ ಎ.ಹೆಚ್.ಶಿವಮೂರ್ತಿ ಸ್ವಾಮಿ ಅವರು, ಆಶ್ರಮವು ನಗರ ಪಾಲಿಕೆ ವ್ಯಾಪ್ತಿಗೆ ಬರುವುದರಿಂದ ಈ ಭಾಗದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈ ಗೊಳ್ಳಬೇಕೆಂದು ಮಹಾಪೌರ ವೀರೇಶ್ರವರಿಗೆ ಮನವಿ ಮಾಡಿದರು.
ಆಶ್ರಮದ ಮಕ್ಕಳಿಂದ ಹಾಗೂ ಸುನಂದಾರವರಿಂದ ಪ್ರಾರ್ಥನೆ ನಡೆಯಿತು, ಜಿ.ಹೆಚ್. ರಾಜಶೇಖರ್ ಸ್ವಾಗತಿಸಿ, ನಿರೂಪಿಸಿದರು. ಆಶ್ರಮದ ಉಪಾಧ್ಯಕ್ಷ ಟಿ.ಕೆ. ಕರಿಬಸಪ್ಪ, ಸಹಕಾರ್ಯದರ್ಶಿ ಜೆ.ಎನ್. ಕರಿಬಸಪ್ಪ, ಹಿರಿಯ ಪತ್ರಕರ್ತ ಬಕ್ಕೇಶ್ ನಾಗನೂರು ಉಪಸ್ಥಿತರಿದ್ದರು.