ಬೆಂಗಳೂರು, ಮಾ. 3 – ರಾಸಲೀಲೆ ಹಗರಣದಲ್ಲಿ ರಮೇಶ್ ಜಾರಕಿಹೊಳಿ ಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿ ಪಟ್ಟಕ್ಕಾಗಿ ಪರ್ಯಾಯ ನಾಯಕತ್ವ ರೂಪಿಸಿಕೊಳ್ಳುತ್ತಿದ್ದ ಬೆಳಗಾವಿಯ ಸಕ್ಕರೆ ದೊರೆ ಕಾಮಕಾಂಡದಲ್ಲಿ ಸಿಲುಕಿದ್ದಾರೆ.
ಜಾರಕಿಹೊಳಿ ರಾಜೀನಾಮೆಯಿಂದ ಯಡಿಯೂರಪ್ಪ ಸಂಪುಟದ ಗಾತ್ರ 34ಕ್ಕೆ ಇಳಿದಿದೆ. ಇತ್ತೀಚಿನ ದಿನಗಳಲ್ಲಿ ರಾಸಲೀಲೆ ಪ್ರಕರಣಕ್ಕೆ ಸಿಲುಕಿ ಮಂತ್ರಿ ಸ್ಥಾನ ಕಳೆದುಕೊಂಡ ಮೊದಲಿಗರಾಗಿದ್ದಾರೆ.
ಹಿಂದಿನ ಸಿದ್ದರಾಮಯ್ಯ ಸಂಪುಟದಲ್ಲಿ ಇದೇ ಆರೋಪದಲ್ಲಿ ಅಂದಿನ ಅರಣ್ಯ ಸಚಿವ ಹೆಚ್.ವೈ ಮೇಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು, ನಂತರದ ವಿಧಾನಸಭೆ ಚುನಾವಣೆಯಲ್ಲಿ ಜನ ಅವರನ್ನು ಮನೆಗೆ ಕಳುಹಿಸಿದ್ದರು.
ಜಾರಕಿಹೊಳಿ ವಿರುದ್ಧ ರಾಸಲೀಲೆ ಪ್ರಕರಣ ಹೊರಬೀಳುತ್ತಿದ್ದಂತೆ ಸರ್ಕಾರ ಇಕ್ಕಟ್ಟಿಗೆ ಸಿಲುಕಿತು. ಅಷ್ಟೇ ಅಲ್ಲ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ದೊಡ್ಡ ಮುಜುಗರ ಉಂಟು ಮಾಡಿತ್ತು.
ಹಗರಣಕ್ಕೂ ತಮಗೂ ಸಂಬಂಧವೇ ಇಲ್ಲ, ತಮ್ಮ ರಾಜಕೀಯ ಬೆಳವಣಿಗೆ ಸಹಿಸದವರು ಬೇರೆ ಚಿತ್ರಕ್ಕೆ ನನ್ನ ಚಿತ್ರ ಅಂಟಿಸಿ ತಮ್ಮ ಚಾರಿತ್ರ್ಯವಧೆ ಮಾಡಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಮುಖ್ಯಮಂತ್ರಿ ಅವರನ್ನು ಒತ್ತಾಯಿಸುತ್ತೇನೆ. ನಾನು ಸಂಪುಟಕ್ಕೆ ರಾಜೀನಾಮೆ ನೀಡುವುದಿಲ್ಲ. ರಾಜೀನಾಮೆ ನೀಡಿದರೆ ತಪ್ಪು ಒಪ್ಪಿಕೊಂಡಂತಾಗು ತ್ತದೆ ಎಂದು ಮುಂಜಾನೆವರೆಗೂ ಜಾರಕಿಹೊಳಿ ವಾದ ಮಂಡಿಸಿದ್ದರು.
ಮಂಗಳವಾರ ರಾತ್ರಿಯೇ ದೆಹಲಿಗೆ ತೆರಳಿ ಪಕ್ಷದ ವರಿಷ್ಠರಿಗೆ ಘಟನೆಯ ಎಲ್ಲಾ ವಿವರಗಳನ್ನು ತಿಳಿಸುವುದಾಗಿಯೂ ಹೇಳಿದ್ದರು.
ಆದರೆ, ಲೈಂಗಿಕ ಪ್ರಕರಣ ಕೇಂದ್ರದ ವರಿಷ್ಠರಿಗೆ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತೀವ್ರ ಮುಜುಗರ ಉಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ತಮ್ಮ ಬೆಳಗಿನ ಕಾರ್ಯಕ್ರಮಗಳನ್ನು ರದ್ದುಪಡಿಸಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಹಿರಿಯ ಸಚಿವರನ್ನು ಕರೆಸಿಕೊಂಡು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದೇನು ಮಾಡಬೇಕು ಎಂದು ಸಮಾಲೋಚನೆ ನಡೆಸಿದರು.
ಕಲ್ಲಹಳ್ಳಿ ವಿರುದ್ಧ ದೂರು
ಬೆಂಗಳೂರು, ಮಾ. 3 – ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣವಾದ ಸಿ.ಡಿ. ಪ್ರಕರಣ ಹೊಸ ತಿರುವು ಪಡೆದಿದ್ದು, ಜಾರಕಿಹೊಳಿ ವಿರುದ್ಧ ದೂರು ನೀಡಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿರುದ್ಧವೇ ದೂರು ದಾಖಲಾಗಿದೆ.
ಇಲ್ಲಿನ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ನೀಡಿರುವ ಕನ್ನಡ ಪರ ಒಕ್ಕೂಟದ ಅಧ್ಯಕ್ಷ ಪುಟ್ಟೇಗೌಡ, ಇದು ಬ್ಲಾಕ್‌ಮೇಲ್ ಪ್ರಕರಣವಾಗಿದೆ ಎಂದು ಹೇಳಿದ್ದಾರೆ.
ದಿನೇಶ್ ಕಲ್ಲಹಳ್ಳಿಗೂ ರಾಸಲೀಲೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಯುವತಿಗೆ ಅನ್ಯಾಯವಾಗಿದ್ದರೆ ಅವರು ಏಕೆ ದೂರು ನೀಡಿಲ್ಲ? ಇದೊಂದು ಬ್ಲಾಕ್‌ಮೇಲ್ ರಾಜಕಾರಣ ಎಂದು ಪುಟ್ಟೇಗೌಡ ನೀಡಿದ ದೂರಿನಲ್ಲಿ ಹೇಳಲಾಗಿದೆ.
ವಿಡಿಯೋಗಳನ್ನು ವೀಕ್ಷಿಸಿದರೆ ಸಮ್ಮತಿ ಲೈಂಗಿಕ ಕ್ರಿಯೆ ಥರ ಕಾಣುತ್ತಿದೆ. ಆದರೆ, ಇದನ್ನು ಬಳಸಿಕೊಂಡು ಜಾರಕಿಹೊಳಿ ತೇಜೋವಧೆ ಮಾಡುತ್ತಿರುವುದು ಸರಿಯಲ್ಲ. ಈ ಬ್ಲ್ಯಾಕ್ ಮೇಲ್ ರಾಜಕಾರಣಕ್ಕೆ ಸಂಬಂಧಿಸಿದಂತೆ ದಿನೇಶ್ ಕಲ್ಲಹಳ್ಳಿಯನ್ನು ತನಿಖೆ ನಡೆಸಬೇಕಿದೆ ಎಂದು ಪುಟ್ಟೇಗೌಡ ಒತ್ತಾಯಿಸಿದ್ದಾರೆ.
ಅಷ್ಟೇ ಅಲ್ಲ, ಸಭೆಗೆ ರಮೇಶ್ ಸೋದರ ಬಾಲಚಂದ್ರ ಜಾರಕಿಹೊಳಿ ಅವರನ್ನು ಕರೆಸಿಕೊಂಡು ಪ್ರಕರಣದಿಂದ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರವಾಗಿದೆ. ತನಿಖೆ ಪೂರ್ಣಗೊಳ್ಳುವವರಿಗೂ ಅವರು ಮಂತ್ರಿಮಂಡಲದಿಂದ ಹೊರಗಿರಲಿ. ಪಕ್ಷದ ವರಿಷ್ಠರು ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮೊಂದಿಗೆ ಸಮಾಲೋಚಿಸಿದ್ದು, ಜಾರಕಿಹೊಳಿ ಅವರ ರಾಜೀನಾಮೆ ಪಡೆಯುವಂತೆ ಸೂಚಿಸಿದ್ದಾರೆ. ನೀವು ಅವರ ರಾಜೀನಾಮೆ ಪಡೆದು ತನ್ನಿ ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡೋಣ ಎಂಬ ಭರವಸೆ ನೀಡಿದರು. ಅದಾದ ನಂತರ ಮಧ್ಯಾಹ್ನದ ವೇಳೆಗೆ ರಮೇಶ್ ಸಹೋದರನ ಮೂಲಕವೇ ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಅವರಿಗೆ ಕಳುಹಿಸಿಕೊಟ್ಟರು. ಜಾರಕಿಹೊಳಿ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ.
ರಮೇಶ್ ಜಾರಕಿಹೊಳಿ ಅವರ ವಿರುದ್ಧ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಅವರು ಪೊಲೀಸ್ ಕಮೀಷನರ್ ಅವರಿಗೆ ದೂರು ನೀಡಿದ ಸ್ವಲ್ಪ ಹೊತ್ತಿನಲ್ಲೇ ರಾಸಲೀಲೆಯ ವಿಡಿಯೋ ದೆಹಲಿಯಲ್ಲಿದ್ದ ಪಕ್ಷದ ವರಿಷ್ಠರಿಗೆ ತಲುಪಿತು.
ಈ ಮಧ್ಯೆ ರಮೇಶ್ ಜಾರಕಿಹೊಳಿ ಪ್ರಕರಣ ರಾಜಕೀಯ ವಲಯಗಳಲ್ಲಿ ಭಾರೀ ಕೋಲಾಹಲವೆಬ್ಬಿಸಿದ್ದು, ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್ ನಾಯಕರು ಬಿಜೆಪಿ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದರು.
ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರು, ಮಾನ ಮರ್ಯಾದೆ ಇದ್ದವರು ಈ ರೀತಿ ಮಾಡಲು ಸಾಧ್ಯವಿಲ್ಲ ಎಂದಿದ್ದರೆ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ನನ್ನ ಸರ್ಕಾರವನ್ನು ತೆಗೆದು ರಾಮರಾಜ್ಯವನ್ನು ಸ್ಥಾಪಿಸುತ್ತೇವೆ ಎಂದವರು ಕೊಟ್ಟ ರಾಮರಾಜ್ಯ ಇದೇನೇ? ಎಂದು ಪ್ರಶ್ನಿಸಿದ್ದರು.