ದಾವಣಗೆರೆ, ಜು.21- ಮಾಯಕೊಂಡ ವನ್ನು ಗುಡಿಸಲು ಮುಕ್ತ ಕ್ಷೇತ್ರವನ್ನಾಗಿಸಿ ಮಾಡುವಂತೆ ಒತ್ತಾಯಿಸಿ, ಕೆಪಿಸಿಸಿ ಸದಸ್ಯ ಹೆಚ್.ದುಗ್ಗಪ್ಪ ಅವರು ಗೃಹ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮಾಯಕೊಂಡ ಕ್ಷೇತ್ರದಲ್ಲಿ ಹತ್ತಾರು ಸಾವಿರ ಗುಡಿಸಲು ಮನೆಗಳಿದ್ದು, ಕುರುಬ, ನಾಯಕ, ಮಾದಿಗ, ಚೆಲುವಾದಿ, ಲಂಬಾಣಿ, ಉಪ್ಪಾರ, ಕೊರಮ ಸೇರಿದಂತೆ ಎಲ್ಲಾ ಜನಾಂಗದ ಬಡ ಕುಟುಂಬಗಳು ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ.
ಬಿಸಲು, ಮಳೆ, ಗಾಳಿಗೆ ರಕ್ಷಣೆಯಿಲ್ಲದೇ ಜೀವನ ನಡೆ ಸಲು ಪರದಾಡುತ್ತಿದ್ದಾರೆ. ಮಳೆಗಾಲ ಬಂದರೆ, ಮನೆಯೊ ಳಗೆ ನೀರು ನುಗ್ಗಿ ಸೋರುವ ಮನೆಗಳಲ್ಲಿ ಜೀವನ ಮಾಡುವ ಪರಿಸ್ಥಿತಿ ಇದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ವಸತಿ ಸಚಿವರಾಗಿದ್ದ ದಿ. ಅಂಬರೀಶ್ ಅವರು ಇಡೀ ರಾಜ್ಯವನ್ನು ಗುಡಿಸಲು ಮುಕ್ತ ಮಾಡಲು ಹಾಗೂ ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ದಾವಣಗೆರೆ ಜಿಲ್ಲೆಯನ್ನು ಗುಡಿಸಲು ಮುಕ್ತ ಜಿಲ್ಲೆಯನ್ನಾಗಿಸಲು ಶಪಥ ಮಾಡಿದ್ದರು. ಅದರಂತೆಯೇ ಜಿಲ್ಲೆಯಲ್ಲಿ ಬಡವರಿಗೆ 15 ಸಾವಿರ ಆಶ್ರಯ ಮನೆಗಳ ನಿರ್ಮಾಣ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೆ ಆಶ್ರಯ ಮನೆಗಳು ನಿರ್ಮಾಣವಾಗದೇ ಸ್ಥಗಿತಗೊಂಡಿವೆ ಎಂದು ಅವರು ತಿಳಿಸಿದ್ದಾರೆ.
ಈಗ ಮಳೆಗಾಲವಾದ್ದರಿಂದ ಹೆಂಚಿನ ಮನೆಗಳು, ಗುಡಿಸಲುಗಳು ಸೋರುವುದರಿಂದ ಬಡಜನತೆಯ ಜೀವನ ಅಸ್ತವ್ಯಸ್ತವಾಗಿದೆ. ಅವರಿಗೆ ತಾತ್ಕಾಲಿಕ ವಾಸಕ್ಕೆ ಶೆಡ್ ವ್ಯವಸ್ಥೆ ಮಾಡಿ, ನಂತರ ಈಗ ವಾಸವಾಗಿರುವ ಅದೇ ಜಾಗದಲ್ಲಿ ಆರ್ಸಿಸಿ ಮನೆಗಳನ್ನು ನಿರ್ಮಾಣ ಮಾಡಿಕೊಡುವುದು ಅವಶ್ಯಕವಾಗಿದೆ. ಜಿಲ್ಲೆಯಲ್ಲಿರುವ ಎಲ್ಲಾ ಗುಡಿಸಲು ಮನೆಗಳನ್ನು ಆರ್ಸಿಸಿ ಮನೆ ನಿರ್ಮಾಣ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.