ದಾವಣಗೆರೆ, ಏ.28- ಕೊರೊನಾ ಕರ್ಫ್ಯೂಗೆ ಬೆಳಿಗ್ಗೆ 10ರ ನಂತರ ನಗರ ಸಂಪೂರ್ಣ ಸ್ತಬ್ಧವಾಗಿತ್ತು. ಜನತೆ ಸ್ವ ಇಚ್ಛೆಯಿಂದಲೇ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸರ್ಕಾರದ ಆದೇಶಕ್ಕೆ ಸ್ಪಂದಿಸಿದರು.
ವಹಿವಾಟು ಇಲ್ಲದೆ ಸಂಪೂರ್ಣ ನಗರ ಮೌನವಾಗುತ್ತಿರುವ ಬೆನ್ನಲ್ಲೇ ಸಮಸ್ಯೆಗಳೂ ಅನಾವರಣಗೊಳ್ಳಲಾರಂಭಿಸಿವೆ.
ಬುಧವಾರ ಲಾರೀ ಮಾಲೀಕರು ಸಾಗಾಣಿಕೆ ಸಮಯದಲ್ಲಿ ಲಾರಿಗಳು ಪಂಕ್ಚರ್ ಆದರೆ ಗ್ಯಾರೇಜ್ಗಳು ಬೇಕು ಎಂದರೆ, ಎಪಿಎಂಸಿ ವರ್ತಕರು 10 ಗಂಟೆ ಒಳಗಾಗಿ ಟೆಂಡರ್ ಪ್ರಕ್ರಿಯೆಗಳನ್ನು ಮುಗಿಸಲು ಸಾಧ್ಯವಿಲ್ಲ ಎಂದರು.
ಹೀಗೆ ಹಲವು ಸಮಸ್ಯೆಗಳು ಕರ್ಫ್ಯೂ ಯಶಸ್ವಿಯ ಬೆನ್ನಲ್ಲೇ ಉದ್ಭವಿಸಲಾರಂಭಿಸಿವೆ.
ಬೆಳಿಗ್ಗೆ 6 ರಿಂದ 10ರವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅನುಮತಿ ನೀಡಿದ್ದರಿಂದ ಹಾಲು-ತರಕಾರಿ, ದಿನಸಿ, ಹಣ್ಣುಗಳನ್ನು ಜನತೆ ಮುಗಿ ಬಿದ್ದು ಕೊಂಡುಕೊಂಡರು.
ನಗರದ ಕೆ.ಆರ್. ಮಾರುಕಟ್ಟೆ ಹಾಗೂ ತಹಶೀಲ್ದಾರ್ ಕಚೇರಿ ಬಳಿಯ ತರಕಾರಿ ಮಾರು ಕಟ್ಟೆಗಳಲ್ಲಿ ಬೆಳಿಗ್ಗೆ ಹೋಲ್ಸೆಲ್ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ತಳ್ಳು ಗಾಡಿಯವರು ಹೆಚ್ಚಾಗಿ ತರಕಾರಿ ಕೊಳ್ಳುತ್ತಿದ್ದುದು ಕಂಡು ಬಂತು. ಮಾರುಕಟ್ಟೆ ರಸ್ತೆಯಲ್ಲಿ ರೀಟೆಲ್ ತರಕಾರಿ ಮಾರಲು ಅವಕಾಶವಿರಲಿಲ್ಲ.
ಬಾರದ ಲಸಿಕೆ, ಜನತೆ ತಳಮಳ
ಲಸಿಕೆ ಇದ್ದಾಗ ಜನ ಬರಲಿಲ್ಲ, ಜನ ಬಂದಾಗ ಲಸಿಕೆ ಇಲ್ಲ
ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ಉಲ್ಬಣಿಸುತ್ತಿರುವಂತೆಯೇ ಲಸಿಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಮೊದಲೆಲ್ಲಾ ಲಸಿಕೆಗೆ ಬನ್ನಿ ಎಂದು ಪ್ರಚಾರ ಮಾಡಬೇಕಿತ್ತು. ಈಗ ಜನ ತಾವಾಗಿಯೇ ಲಸಿಕಾ ಕೇಂದ್ರಗಳಿಗೆ ಧಾವಿಸುತ್ತಿದ್ದಾರೆ. ಆದರೆ, ಲಸಿಕೆಯೇ ಲಭ್ಯವಾಗುತ್ತಿಲ್ಲ !
ಮಂಗಳವಾರ ಮೋತಿ ವೀರಪ್ಪ ಕಾಲೇಜಿನ ಲಸಿಕಾ ಕೇಂದ್ರದಲ್ಲಿ ಸಾಕಷ್ಟು ಜನರಿಗೆ ಲಸಿಕೆ ಸಿಕ್ಕಿರಲಿಲ್ಲ. ಬುಧವಾರವಂತೂ ಲಸಿಕೆಯೇ ಬಂದಿರಲಿಲ್ಲ. ಮತ್ತೆ ಯಾವಾಗ ಲಸಿಕೆ ಬರಲಿದೆ ಎಂಬ ಬಗ್ಗೆ ಸ್ಪಷ್ಟನೆಯೂ ಸಿಕ್ಕಿಲ್ಲ. ಒಟ್ಟಾರೆ ಲಸಿಕೆ ಇದ್ದಾಗ ಜನರು ಬರಲಿಲ್ಲ, ಜನ ಬಂದಾಗ ಲಸಿಕೆ ಇಲ್ಲ ಎಂಬ ಪರಿಸ್ಥಿತಿ ಉಂಟಾಗಿದೆ.
ಕೊರೊನಾ ಎರಡನೇ ಅಲೆಯಿಂದಾಗಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದಂತೆ ಮುನ್ನೆಚ್ಚರಿಕೆಯಾಗಿ ಲಸಿಕೆ ಪಡೆಯಲು ಜನತೆ ದುಂಬಾಲು ಬೀಳುತ್ತಿದ್ದಾರೆ. ಆದರೆ ಲಸಿಕೆ ಖಾಲಿಯಾಗಿರುವುದು ಜನರಲ್ಲಿ ಆತಂಕವನ್ನುಂಟು ಮಾಡಿದೆ.
ಕಳೆದ ವಾರದವರೆಗೂ ಲಸಿಕೆ ಎಂದರೆ ಮೂಗು ಮುರಿಯುತ್ತಿದ್ದ ಜನತೆ. ಇದೀಗ ಲಸಿಕೆ ಎಲ್ಲಿ ಸಿಗುತ್ತಿದೆ, ಯಾವಾಗ ಸಿಗುತ್ತದೆ ಎಂದು ಪರದಾಡಲಾರಂಭಿಸಿದ್ದಾರೆ.
ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗಾಗಿ ಉಚಿತವಾಗಿ ಲಸಿಕೆ ನೀಡುವುದಾಗಿ ಈಗಾಗಲೇ ಸರ್ಕಾರ ಭರವಸೆ ನೀಡಿದೆ. ಆದರೆ ಈಗಾಗಲೇ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕೊರತೆ ಉಂಟಾಗಿದೆ. ಇನ್ನು 18 ವರ್ಷ ಮೇಲ್ಪಟ್ಟ ಎಲ್ಲರೂ ಲ ಸಿಕೆ ಪಡೆಯಲು ಮುಂದಾದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.
2ನೇ ಡೋಸ್ಗಾಗಿ ಪರದಾಟ: ಈಗಾಗಲೇ ಲಸಿಕೆಯ ಮೊದಲ ಡೋಸ್ ಪಡೆದವರು ಇದೀಗ ಎರಡನೇ ಡೋಸ್ಗಾಗಿ ಪರದಾಡುವ ದುಃಸ್ಥಿತಿ ಜಿಲ್ಲೆಯಲ್ಲೂ ನಿರ್ಮಾಣವಾಗಿದೆ. ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿದಾಗ ಲಸಿಕೆ ಇಲ್ಲ ಎಂಬ ಉತ್ತರ ಬರುತ್ತಿದೆ ಎಂದು ನಿಟುವಳ್ಳಿಯ ಹಿರಿಯ ನಾಗರಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಸ್ಪತ್ರೆ, ತಾಲ್ಲೂಕು ಆರೋಗ್ಯ ಕೇಂದ್ರಗಳು ಹಾಗೂ ಉಪ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ಪಡೆಯಲು ಟೋಕನ್ ಸಿಸ್ಟಂ ಮಾಡಲಾಗಿದೆ. ಆದರೂ ಜನತೆ ದಿನಗಟ್ಟಲೇ ಲಸಿಕೆಗಾಗಿ ಕಾಯಬೇಕಾಗಿದೆ.
ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಇಲ್ಲಿಯವರೆಗೆ 1,55,204 ಜನರಿಗೆ ಲಸಿಕೆ ನೀಡಲಾಗಿದೆ. 1,86,667 ಆರೋಗ್ಯ ಮತ್ತು ಫ್ರಂಟ್ಲೈನ್ ಉದ್ಯೋಗಿಗಳಿಗೆ ಲಸಿಕೆ ನೀಡಲಾಗಿದೆ.
ಜಿಲ್ಲೆಯಲ್ಲಿ ಜನರು ಸ್ವಯಂಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಲಸಿಕೆ ಪಡೆಯಲು ಬರುತ್ತಿದ್ದು, ಪ್ರಸ್ತುತ ದಿನಕ್ಕೆ 13 ಸಾವಿರ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ 20 ಸಾವಿರದವರೆಗೆ ಲಸಿಕೆ ನೀಡಲು ಅಗತ್ಯವಾದ ಲಸಿಕೆಗಳನ್ನು ಸರಬರಾಜು ಮಾಡಬೇಕೆಂದು ಅಧಿಕಾರಿಗಳು ಉಸ್ತುವಾರಿ ಸಚಿವರಲ್ಲಿ ಕೋರಿದ್ದಾರೆ.
ಬೆಳಿಗ್ಗೆ 10 ರೊಳಗೆ ಎಪಿಎಂಸಿ ಬಂದ್
ದಾವಣಗೆರೆ, ಏ. 28- ರಾಜ್ಯ ಸರ್ಕಾರದ ಆದೇಶ ಹಾಗೂ ಮಾರ್ಗಸೂಚಿಗಳನ್ವಯ ಏ.28 ರಿಂದ ಮೇ 12 ರವರೆಗೆ ಲಾಕ್ಡೌನ್ ಜಾರಿಯಲ್ಲಿರುವುದರಿಂದ ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವಿವಿಧ ಮಾರುಕಟ್ಟೆ ಪ್ರಾಂಗಣಗಳಲ್ಲಿ ನಡೆಯುವ ಕೃಷಿ ಹುಟ್ಟುವಳಿ ವ್ಯಾಪಾರ ವಹಿವಾಟಿನ ಸಮಯವನ್ನು ಬೆಳಿಗ್ಗೆ 6 ರಿಂದ 10 ರವರೆಗೆ ನಿಗದಿಪಡಿಸಲಾಗಿದೆ.
ಈ ಸಮಯದಲ್ಲೇ ಎಲ್ಲಾ ವ್ಯಾಪಾರ ವಹಿವಾಟಿನ ಚಟುವಟಿಕೆಗಳನ್ನು ಸಂಪೂರ್ಣ ಮುಗಿಸಿ ಅಂಗಡಿಗಳನ್ನು ಬಂದ್ ಮಾಡಿ ಸಹಕರಿಸಬೇಕೆಂದು ಎಪಿಎಂಸಿ ಪ್ರಕಟಣೆ ತಿಳಿಸಿದೆ.
ಹೈಸ್ಕೂಲ್ ಮೈದಾನದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಖಾಸಗಿ ಹಾಗೂ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳು ಖಾಲಿಯಾಗಿ ದ್ದವು. ಅಡ್ಡಲಾಗಿ ಬ್ಯಾರಿಕೇಡ್ ಹಾಕಲಾಗಿತ್ತು.
ಔಷಧಿ ಅಂಗಡಿಗಳು ಹಾಗೂ ಪೆಟ್ರೋಲ್ ಬಂಕ್ಗಳು ದಿನಪೂರ್ತಿ ತೆರೆಯಲ್ಪಟ್ಟಿದ್ದವು. ಆದರೆ ಗ್ರಾಹಕರ ಸಂಖ್ಯೆ ವಿರಳವಾಗಿತ್ತು.
ಬೆಳಿಗ್ಗೆ ಕೃಷಿ ಚಟುವಟಿಕೆ ಹಾಗೂ ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ಸಂಬಂಧಿಸಿದ ಮಳಿಗೆಗಳು ತೆರೆಯಲ್ಪಟ್ಟಿದ್ದವಾದರೂ ನಂತರ ಅವುಗಳನ್ನೂ ಮುಚ್ಚಿಸಲಾಯಿತು. ಅನಗತ್ಯವಾಗಿ ಜನತೆ ಅಡ್ಡಾಡದಂತೆ ಪೊಲೀಸರು ನಿಗಾ ವಹಿಸಿದ್ದರು. ವಾಹನ ಸವಾರರನ್ನು ತಡೆದು ಕಾರಣ ಕೇಳುತ್ತಿದ್ದರು.
ಮಂಡಿಪೇಟೆ, ಗಡಿಯಾರ ಕಂಬ, ಪಿ.ಬಿ. ರಸ್ತೆ, ಕಾಳಿಕಾದೇವಿ ರಸ್ತೆ, ಹದಡಿ ರಸ್ತೆ, ಜಯದೇವ ವೃತ್ತ, ಅಶೋಕ ರಸ್ತೆ ಸೇರಿದಂತೆ ಪ್ರಮುಖ ರಸ್ತೆ, ವೃತ್ತಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.
ಕಬ್ಬಿಣ, ಸಿಮೆಂಟ್ ಅಂಗಡಿ ಮಾಲೀಕರಲ್ಲಿ ಗೊಂದಲ: ಕಬ್ಬಿಣ-ಸಿಮೆಂಟ್ ಸೇರಿದಂತೆ ಕಟ್ಟಡ ನಿರ್ಮಾಣ ಸಾಮಗ್ರಿಗಳ ಮಳಿಗೆ ತೆರೆಯಲು ಅನುಮತಿ ಇದೆ ಎಂದು ಮಳಿಗೆ ತೆರೆದು ವ್ಯಾಪಾರ ಆರಂಭಿಸಿದ್ದರು. ಆದರೆ ಪೊಲೀಸರು ಮಳಿಗೆ ಮುಚ್ಚಿಸುತ್ತಿದ್ದಾರೆ ಎಂದು ಕೆಲ ವ್ಯಾಪಾರಸ್ಥರು ಆರೋಪಿಸಿದರು. ಬಡಾವಣೆಗಳ ಒಳಗಡೆ ಕಟ್ಟಡ ನಿರ್ಮಾಣ ಕಾಮಗಾರಿಗಳು ಎಂದಿನಂತೆ ನಡೆದವು. ಬ್ಯಾಂಕುಗಳು ಬದಲಾದ ಸಮಯದಲ್ಲಿ ಹಾಗೂ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.