ಕನ್ನಡ ಭಾಷೆಯಿಂದಲೇ ಕುವೆಂಪು ದ.ರಾ.ಬೇಂದ್ರೆ ಕಾವ್ಯಗಳಿಗೆ ಶ್ರೇಷ್ಠತೆ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಮಾರೋಪದಲ್ಲಿ ಪ್ರೊ. ಕೃಷ್ಣೇಗೌಡ

ದಾವಣಗೆರೆ, ಮಾ. 2 – ಅಲ್ಲಮಪ್ರಭು, ಅಕ್ಕಮಹಾದೇವಿ ಅವರಂತಹ ಶರಣರಿಂದ ಹಿಡಿದು ಕುವೆಂಪು ಹಾಗೂ ದ.ರಾ. ಬೇಂದ್ರೆ ಅವರಂತಹ ಕವಿಗಳವರೆಗಿನ ಸಾಹಿತ್ಯ ಸಶಕ್ತವಾಗಲು ಕನ್ನಡ ಭಾಷೆಯ ಸಾಮರ್ಥ್ಯವೇ ಕಾರಣ ಎಂದು ವಾಗ್ಮಿ ಪ್ರೊ. ಎಂ. ಕೃಷ್ಣೇಗೌಡ ಅಭಿಪ್ರಾಯ ಪಟ್ಟಿದ್ದಾರೆ.

ದಾವಣಗೆರೆ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡುತ್ತಿದ್ದ ಅವರು, ಕುವೆಂಪು ಹಾಗೂ ಬೇಂದ್ರೆ ಅವರು ಜಗತ್ತಿನ ಯಾವ ಸಾಹಿತಿಗೂ ಕಡಿಮೆ ಇಲ್ಲ. ಕನ್ನಡಕ್ಕೆ ಅಂತಹ ಕಾವ್ಯ ಬರೆಸುವ ತಾಕತ್ತಿದೆ ಎಂದು ತಿಳಿಸಿದರು.

ವಿಶ್ವದಲ್ಲಿ 4,500ಕ್ಕೂ ಹೆಚ್ಚು ಭಾಷೆಗಳಿವೆ. ಇವುಗಳಲ್ಲಿ ಅನನ್ಯ ಹಾಗೂ ಸಮೃದ್ಧವಾಗಿರುವ 30 ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ. ಈ ಮಾತು ಕೇವಲ ಹೊಗಳಿಕೆಗೆ ಅಲ್ಲ, ಕನ್ನಡದಲ್ಲಿ ಅಂತಹ ಗ್ರಹಿಕೆ ಇದೆ ಎಂದು ತಿಳಿಸಿದರು.

ಇಂಗ್ಲಿಷ್‌ ಬಂದರೆ ಪ್ರಪಂಚವನ್ನೇ ತಲುಪಬಹುದು ಎಂಬ ಭಾವನೆ ಕೆಲವರಲ್ಲಿದೆ. ಆದರೆ, ಕನ್ನಡ ನಮಗೆ ರಕ್ತಗತವಾಗಿ ಮೈಗೂಡಿದೆ. ಹೀಗಾಗಿ ನಾವು ಇಂಗ್ಲಿಷಿನಲ್ಲಿ ಮಾತನಾಡಿದರೂ ನಮ್ಮ ಮನಸ್ಸು ಕನ್ನಡದ ಮೂಲಕವೇ ಅರ್ಥ ಮಾಡಿಕೊಳ್ಳುತ್ತದೆ. ಇಂಗ್ಲಿಷ್ ಬೌದ್ಧಿಕ ಭಾಷೆಯಾಗಬಹುದಷ್ಟೇ, ಭಾವನೆಯ ಭಾಷೆ ಕನ್ನಡವೇ ಆಗಿರುತ್ತದೆ ಎಂದು ಕೃಷ್ಣೇಗೌಡ ಹೇಳಿದರು.

ಯಾವುದೇ ಕಾವ್ಯದಲ್ಲಿ ಬಳಸಲಾದ ಪದದ ಅರ್ಥ ಮನಸ್ಸಿಗೆ ಆಗುವ ಮೊದಲೇ ಅದರ ಲಹರಿಯಿಂದ ಮನಸ್ಸು ತಟ್ಟಬೇಕು ಎಂದು ಉದಯೋನ್ಮುಖ ಕವಿಗಳಿಗೆ ಕಿವಿಮಾತು ಹೇಳಿದ ಅವರು, ಕುವೆಂಪು ಅವರ ದೋಣಿ ಸಾಗಲಿ, ಮುಂದೆ ಹೋಗಲಿ ಹಾಡಿನಲ್ಲಿ ದೀರ್ಘ ಸ್ವರಗಳನ್ನೇ ಹೆಚ್ಚಾಗಿ ಬಳಸಿದ್ದಾರೆ. ಇದರಿಂದ ಹಾಡಿನ ಪದಗಳಿಗಿಂತ ರಾಗದಲ್ಲೇ ಭಾವ ಮನಸ್ಸಿಗೆ ತಲುಪುತ್ತದೆ ಎಂದು ಉದಾಹರಿಸಿದರು.

ಆಧುನಿಕ ಕಾಲದಲ್ಲಿ ಭಾಷೆಯ ಬಳಕೆಯಲ್ಲೇ ಜನರು ಸೊರಗುತ್ತಿದ್ದಾರೆ ಎಂದು ವಿಷಾದಿಸಿದ ಅವರು, ನಗರಗಳ ಜನರು ತಮ್ಮ ಕಾಂಪೌಂಡ್ ಗೇಟುಗಳ ಒಳಗೆ ಸೀಮಿತರಾಗಿ ಮಾತುಗಳನ್ನೇ ಮರೆಯುತ್ತಿದ್ದಾರೆ. ಜೀವನದ ಘಟನೆಗಳನ್ನು ಸೊಗಸಾಗಿ ಬಣ್ಣಿಸುವ ಶಕ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮ್ಮೇಳನಾಧ್ಯಕ್ಷ ಎನ್.ಟಿ. ಎರಿಸ್ವಾಮಿ, ಮನುಜ ಕುಲ ಒಂದೇ ಎಂಬ ಸಂದೇಶವನ್ನು ಕನ್ನಡ ಭಾಷೆ ಸಾವಿರಾರು ವರ್ಷಗಳಿಂದ ನೀಡುತ್ತಾ ಬಂದಿದೆ. ಕುವೆಂಪು ಅವರ ಮನುಜಮತ – ವಿಶ್ವಪಥ ಸಂದೇಶ ಕನ್ನಡದ ದೃಷ್ಟಿಕೋನವಾಗಿದೆ. ಬೇರೆ ಭಾಷೆಗಳಲ್ಲಿ ಇಂತಹ ಭಾವೈಕ್ಯತೆ ದುರ್ಲಭ ಎಂದವರು ತಿಳಿಸಿದರು.

ಕನ್ನಡ ಸಾಹಿತ್ಯ  ಪರಿಷತ್ ಜಿಲ್ಲಾಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯ ಮೇಲೆ ಕರ್ನಾಟಕ ವಿ.ವಿ. ಹಾಗೂ ಕಾಲೇಜು ಅಧ್ಯಾಪಕರ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರೊ. ಸಿ.ಹೆಚ್. ಮುರಿಗೇಂದ್ರಪ್ಪ, ಜಿಲ್ಲಾ ಕ.ಸಾ.ಪ. ಮಾಜಿ ಜಿಲ್ಲಾ ಅಧ್ಯಕ್ಷರಾದ ಪ್ರೊ. ಎಸ್.ಬಿ. ರಂಗನಾಥ್, ಎಸ್.ಹೆಚ್. ಹೂಗಾರ್, ಬಿ.ಎಂ. ಸದಾಶಿವಪ್ಪ ಶ್ಯಾಗಲೆ, ಎ.ಆರ್. ಉಜ್ಜನಪ್ಪ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕನ್ನಡದ ಸಾಧಕರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎನ್.ಎಸ್. ರಾಜು ಸ್ವಾಗತಿಸಿದರೆ, ಇನ್ನೋರ್ವ ಗೌರವ ಕಾರ್ಯದರ್ಶಿ ಬಿ. ದಿಳ್ಯಪ್ಪ ವಂದಿಸಿದರು.

error: Content is protected !!