ಸಿಎಂ ಬದಲಾಯಿಸಿದರೆ ತೊಂದರೆ ಖಚಿತ

ಸಿಎಂ ಬದಲಾಯಿಸಿದರೆ ತೊಂದರೆ ಖಚಿತ - Janathavaniಚಿತ್ರದುರ್ಗ, ಜು. 20 – ರಾಜ್ಯದ ಮುಖ್ಯ ಮಂತ್ರಿಗಳು ಬದಲಾದರೆ ಯಡಿಯೂರಪ್ಪ ನವರಿ ಗೇನು ನಷ್ಟ ಇಲ್ಲ. ಆದರೆ ಪಕ್ಷಕ್ಕೆ ದೊಡ್ಡ ನಷ್ಟ ಉಂಟಾಗಬಹುದು. ಇದ್ದಕ್ಕಿದ್ದಂತೆ ಒಬ್ಬ ನಾಯಕ ಹುಟ್ಟುವುದಿಲ್ಲ. ಅದು ನಿಧಾನವಾಗಿ ಬರುವ ಪ್ರಕ್ರಿಯೆ. ಆದರೆ ಯಡಿಯೂರಪ್ಪನವರನ್ನು ಮಧ್ಯದಲ್ಲಿ ಬದಲಾಯಿಸಿದರೆ ತೊಂದರೆಯಾಗು ವುದು ಖಚಿತ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಚಿತ್ರದುರ್ಗ ಶ್ರೀ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠದಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಶ್ರೀಗಳು ಮಾತನಾಡಿದರು. 

ಯಡಿಯೂರಪ್ಪ ಅವರು ವಯಸ್ಸನ್ನು ಮೀರಿ ಯುವಕರಂತೆ ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯವೈಖರಿ ಅದ್ಭುತವಾದದ್ದು. ಅವರ ರಾಜಕೀಯ ಅನುಭವ ಅಮೋಘವಾದುದು. ಪಕ್ಷದೊಳಗೆ ತೊಂದರೆಯಾಗಬಾರದು. ಅವರು ಶಕ್ತಿ ತೋರಿಸಬಲ್ಲರು. ಅಂತಹ ಮುತ್ಸದ್ಧಿ. ಅವರೊಬ್ಬ ಮಾಸ್ ಲೀಡರ್. ಎಲ್ಲ ಧರ್ಮ, ಸಮುದಾಯದವರನ್ನು ಪ್ರೀತಿಯಿಂದ ನೋಡಿದ್ದಾರೆ. ಅದಕ್ಕೆ ಪತ್ರಿಕಾಗೋಷ್ಠಿಯಲ್ಲಿರುವ ಸ್ವಾಮೀಜಿಗಳೇ ಸಾಕ್ಷಿ. ಯಾವುದೇ ಸಂದರ್ಭದಲ್ಲಿ ಅವರ ಗೌರವ ಘನತೆಗೆ ಧಕ್ಕೆ ಬರುವಂತೆ ಮಾಡಬಾರದು. ನಿರಾತಂಕ ವಾತಾವರಣ ಸೃಷ್ಟಿಸಬೇಕು. ಅವರನ್ನು ಮುಖ್ಯಮಂತ್ರಿಗಳಾಗಿ ಮುಂದುವರೆಸಬೇಕು. ಇದು ಎಲ್ಲ ಪಕ್ಷದವರು ಸಹ ಅವರನ್ನು ಮುಂದುವರೆಸಬೇಕೆಂದು ಹೇಳಿದ್ದಾರೆ. 

ಆದರೆ ರಾಜ್ಯ ರಾಜಕಾರಣದಲ್ಲಿ ಒಂದಷ್ಟು ವ್ಯತ್ಯಾಸಗಳು ಏರಿಳಿತಗಳು ಆಗುತ್ತಿವೆ. ಅದು ಎಲ್ಲರಲ್ಲೂ ಗಾಬರಿ ಮತ್ತು ಆತಂಕ ಸೃಷ್ಟಿಸಿದೆ. ನಿರಾತಂಕ, ಆತಂಕರಹಿತವಾದ ಆಡಳಿತ ನೀಡಬೇಕಾಗುತ್ತದೆ. ಆಂತರಿಕ ಬೇಗುದಿ ಇರಬಾರದು. ಒಂದು ಹಂತದಲ್ಲಿ ಆಂತರಿಕ ಕಚ್ಚಾಟ ಇರಬಾರದು. ಯಡಿಯೂರಪ್ಪ ನಾಡು ಕಂಡ ಶ್ರೇಷ್ಠ ರಾಜಕೀಯ ಮುತ್ಸದ್ಧಿಯಾಗಿದ್ದಾರೆ. ಏಕವ್ಯಕ್ತಿ ಹೋರಾಟ ಆರಂಭಿಸಿ, ಸರ್ಕಾರ ರಚಿಸುವಷ್ಟರ ಮಟ್ಟಿಗೆ ಶಕ್ತಿಯನ್ನು ಪಡೆದುಕೊಂಡಿದ್ದಾರೆ. 4 ಬಾರಿ ಮುಖ್ಯಮಂತ್ರಿಯಾಗಿ ಕೊರೊನಾ ಸಂದರ್ಭದಲ್ಲಿ ಗಂಭೀರ ಪರಿಸ್ಥಿತಿಯನ್ನು ಚಾಕಚಕ್ಯತೆಯಿಂದ, ವ್ಯತ್ಯಾಸ ಬರದಂತೆ ಮಾನವೀಯತೆಯಿಂದ ಅದನ್ನು ನಿಭಾಯಿಸಿದ್ದಾರೆ. ಕೇಂದ್ರ ಸರ್ಕಾರವು ಸಹ ಮುಖ್ಯಮಂತ್ರಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದೆ. ಎಲ್ಲಿಯೂ ವಿಚಲಿತರಾಗದೆ ಮುಂಜಾಗ್ರತೆ ವಹಿಸಿ ಕೊರೊನಾವನ್ನು ನಿಯಂತ್ರಿಸಿದ್ದಾರೆ. ಈ ಸಂದರ್ಭದಲ್ಲಿ ನಾಯಕತ್ವದ ಬದಲಾವಣೆ ವಿಚಾರವು ರಾಜ್ಯದ ಜನರಲ್ಲಿ ಆತಂಕ ಸೃಷ್ಟಿಸಿದೆ. ಮುಖ್ಯಮಂತ್ರಿಗಳು ಬದಲಾದರೆ ನಾಡಿನ ಸಮಸ್ತ ಮಠಾಧೀಶರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ನೋಡೋಣ ಎಂದರು.

ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಶ್ರೀಗಳು ಮಾತ ನಾಡಿ, ದಕ್ಷಿಣ ಭಾರತದಲ್ಲಿ ಪ್ರಥಮವಾಗಿ ಪಕ್ಷವನ್ನು ಅಧಿಕಾರಕ್ಕೆ ತಂದವರು ಯಡಿಯೂರಪ್ಪನವರು. ಅವರು ಅಧಿಕಾರಕ್ಕೆ ಬಂದ ನಂತರ ಎಲ್ಲ ಶೋಷಿತ ಸಮುದಾಯದ ಮಠಗಳನ್ನು ಮೇಲೆತ್ತಿದರು. ಅಧಿಕಾರ ವಹಿಸಿಕೊಂಡ ನಂತರ ಅವರಿಗೆ ಅನೇಕ ಸಮಸ್ಯೆಗಳು ಸುತ್ತಿಕೊಳ್ಳುತ್ತಿವೆ. ಅತಿವೃಷ್ಟಿ, ಅನಾವೃಷ್ಟಿ, ಕೊರೊನಾ ಎಲ್ಲವೂ ಬಂದರೂ ಅವೆಲ್ಲವನ್ನು ಧೈರ್ಯವಾಗಿ ಎದುರಿಸಿದ್ದಾರೆ. ಈ ಅವಧಿಯನ್ನು ಸಂಪೂರ್ಣವಾಗಿ ಮುಗಿಸಲು ಅವಕಾಶ ಮಾಡಿಕೊಡಬೇಕು. ಅದನ್ನವರು ಯಶಸ್ವಿಯಾಗಿ ಪೂರೈಸುತ್ತಾರೆ. ಪಕ್ಷದ ಆಂತರಿಕ ಬೇಗುದಿ ಹೊರಬರದಂತೆ ನೋಡಿಕೊಳ್ಳಬೇಕು. ಅವರಿಗೆ ಏನಾದರೂ ತೊಂದರೆ ಆದರೆ ಅದು ಪಕ್ಷಕ್ಕೆ ಆಗುವ ತೊಂದರೆಯಾಗಲಿದೆ ಎಂದರು.

ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮಿಗಳು ಮಾತನಾಡಿ, ಎಲ್ಲ ಸಮುದಾಯದವರಿಗೆ ಮಠ ಕಟ್ಟಿಕೊಟ್ಟವರು ಮುರುಘಾ ಶರಣರು. ಆದರೆ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದವರು ಯಡಿಯೂರಪ್ಪನವರು. ಕರ್ನಾಟಕ ದಲ್ಲಿ ಬಿಜೆಪಿ ಬಂದಿದ್ದರೆ ಅದು ಯಡಿಯೂರಪ್ಪನವರ ಶ್ರಮ. ಈ ಅವಧಿ ಯಡಿಯೂರಪ್ಪನವರ ಶ್ರಮದ ಫಲ. ಎಲ್ಲ ಸಮುದಾಯವನ್ನು ತನ್ನೊಟ್ಟಿಗೆ ಕರೆದು ಕೊಂಡು ಹೋಗುತ್ತಿದ್ದಾರೆ. ಮಧ್ಯದಲ್ಲಿ ಅವರ ಗೌರವಕ್ಕೆ ಧಕ್ಕೆ ತರಬಾರದು. ಅವರನ್ನು ಮುಂದುವರೆಸಬೇಕು. ಅವರ ಜೊತೆ ನಾವೆಲ್ಲ ಇರುತ್ತೇವೆ. ಅವರಿಗೆ ನೈತಿಕ ಬೆಂಬಲ ನೀಡುತ್ತೇವೆ ಎಂದು ಹೇಳಿದರು.

ಭೋವಿ ಗುರುಪೀಠದ ಶ್ರೀ ಸಿದ್ಧರಾಮೇಶ್ವರ ಸ್ವಾಮಿಗಳು ಮಾತನಾಡಿ, ಯಡಿಯೂರಪ್ಪನವರು ಬರೀ ಲಿಂಗಾಯತ ಸಮುದಾಯದ ನಾಯಕರಲ್ಲ. ಅವರು ಸರ್ವ ಸಮುದಾಯಗಳ ನಾಯಕರು. ಅವರ ಭರವಸೆಗಳು ಸಂಪೂರ್ಣವಾಗಿ ಈಡೇರಿವೆ. ಪೂರ್ಣ ಪ್ರಮಾಣದ ಸರ್ಕಾರ ಮುಂದುವರೆಯಬೇಕು. ಕಾರಣ ಅವರ ಹಿಂದೆ ಮಠಾಧೀಶರು, ಸಮುದಾಯ, ಜನಬೆಂಬಲ ಇದೆ. ಅವರ ಮೇಲೆ ಎಲ್ಲರ ಆಶೀರ್ವಾದ ಇದೆ. ಹೈಕಮಾಂಡ್ ಕೂಡ ಯೋಚಿಸಿ ನಿರ್ಧರಿಸಬೇಕೆಂದು ಒತ್ತಾಯಿಸಿದರು.

ಇಳಕಲ್‍ನ ಗುರುಮಹಾಂತೇಶ್ವರ ಮಠದ ಶ್ರೀ ಗುರುಮಹಾಂತ ಸ್ವಾಮಿಗಳು ಮಾತನಾಡಿ, ಯಾವುದೇ ಜಾತಿ, ಧರ್ಮವನ್ನು ನೋಡದೆ ಎಲ್ಲರನ್ನೂ ಸಮಾನವಾಗಿ ಯಡಿಯೂರಪ್ಪನವರು ಕಂಡಿದ್ದಾರೆ. ಅವರನ್ನು ಅವಧಿ ಪೂರ್ಣಗೊಳಿಸಲು ಬಿಡಬೇಕೆಂದರು.

ಸುದ್ದಿಗೋಷ್ಠಿಯಲ್ಲಿ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮಿಗಳು, ಶಿರಸಿ ರುದ್ರದೇವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಸತ್ತಿಮಠದ ಸ್ವಾಮಿಗಳು, ಚಳ್ಳಕೆರೆಯ ಶ್ರೀ ಬಸವ ಕಿರಣ ಸ್ವಾಮಿಗಳು, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯ ದರ್ಶಿ ಎ.ಜೆ. ಪರಮಶಿವಯ್ಯ ಮೊದಲಾದವರಿದ್ದರು.

error: Content is protected !!