ದಾವಣಗೆರೆ, ಏ. 27- ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ಪತ್ರೆಯಲ್ಲಿ ಕೊರೊನಾದಿಂದ ಸಾವು ಸಂಭವಿಸಿ ಮೃತರಾದ ಶವ ಸಂಸ್ಕಾರಕ್ಕಾಗಿ ಪಾಲಿಕೆ ವತಿಯಿಂದ ಮುಕ್ತಿವಾಹಿನಿ ವಾಹನದ ಉಚಿತ ಸೇವೆ ಕಲ್ಪಿಸಿಕೊಡುವುದಾಗಿ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ತಿಳಿಸಿದ್ದಾರೆ.
ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾದಿಂದ ಮೃತರಾದ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ನಗರದ ಜನತೆ ತರಕಾರಿ ಕೊಳ್ಳಲು ಗುಂಪಾಗಿ ಸೇರುವುದನ್ನು ತಪ್ಪಿಸಲು ತಳ್ಳುಗಾಡಿಗಳ ಮೂಲಕ ಮನೆ ಬಾಗಿಲಿಗೆ ತರಕಾರಿ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಪಾಲಿಕೆ ವತಿಯಿಂದ ಕೋವಿಡ್ ಸೋಂಕಿತ ವ್ಯಕ್ತಿಯ ಮನೆ ಹಾಗೂ ಏರಿಯಾ ಸುತ್ತ ಮುತ್ತ ಸ್ಯಾನಿಟೈಸೇಷನ್ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಪಾಲಿಕೆ ಕಾರ್ಯಪಾಲಕ ಅಭಿಯಂತರರ ನೇತೃತ್ವದಲ್ಲಿ ಪಾಲಿಕೆಯ ಮೂರು ಝೋನ್‌ಗಳಿಂದ 8 ಜನರುಳ್ಳ ಮೂರು ತಂಡಗಳನ್ನು ರಚಿಸಿ, ಕೊರೊನಾ ನಿಯಮ ಉಲ್ಲಂಘಿಸುವವರಿಗೆ ದಂಡ ಹಾಕುವುದು ಹಾಗೂ ಅಚ್ಚುಕಟ್ಟಾಗಿ ನಿಯಮ ಪಾಲಿಸುವಂತೆ ಸೂಚಿಸಲಾಗಿದೆ ಎಂದರು.
ಪಾಲಿಕೆ ಸದಸ್ಯರ ನೇತೃತ್ವದಲ್ಲಿ ವಾರ್ಡ್‌ಗಳಲ್ಲಿ ಕೋವಿಡ್ ಲಸಿಕೆ ಹಾಕುವ ವ್ಯವಸ್ಥೆಯನ್ನು ಮತ್ತಷ್ಟು ಚುರುಕುಗೊಳಿಸಲು ಹೇಳಲಾಗಿದೆ. ನಾಗರಿಕರು ಅನಗತ್ಯ ವಾಗಿ ಹೊರ ಬರಬಾರದು. ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ಗೆಲ್ಲಬೇಕಿದೆ ಎಂದು ಕರೆ ನೀಡಿದರು.
ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮಾತನಾಡಿ, ಈಗಾಗಲೇ ಮದುವೆ ನಡೆಸುವ ಕಲ್ಯಾಣ ಮಂಟಪಗಳಿಗೆ ಭೇಟಿ ನೀಡಿ ಹೆಚ್ಚು ಜನ ಸೇರಿದ್ದರೆ ದಂಡ ವಿಧಿಸಲಾಗುತ್ತಿದೆ. ಈ ಕ್ರಮವನ್ನು ಮತ್ತಷ್ಟು ಬಿಗಿ ಗೊಳಿಸಲಾಗುವುದು. ಹೆಚ್ಚು ಜನರಿದ್ದರೆ ವಿಡಿಯೋ ರೆಕಾರ್ಡ್ ಮಾಡಿ ಅವರ ಮೇಲೆ ಎಫ್‌ಐಆರ್ ದಾಖಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದು, ಪಾಲಿಕೆಯಿಂದ ರಚಿಸುವ ತಂಡಗಳು ಈ ಕಾರ್ಯ ಮಾಡಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಯೋಜನೆ ಸ್ಥಾಯಿ ಸಮಿತಿ ಸದಸ್ಯೆ ಉಮಾ ಪ್ರಕಾಶ್, ಆರೋಗ್ಯ ಸ್ಥಾಯಿ ಸಮಿತಿ ಸದಸ್ಯ ಎಲ್.ಡಿ. ಗೋಣೆಪ್ಪ, ಹಣಕಾಸು ಹಾಗೂ ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾ ಶ್ರೀನಿವಾಸ್, ಸದಸ್ಯ ಪ್ರಸನ್ನಕುಮಾರ್, ಕೆ.ಎಂ. ವೀರೇಶ್, ನಾಮ ನಿರ್ದೇಶಿತ ಸದಸ್ಯರಾದ ಶಿವನಗೌಡ ಟಿ. ಪಾಟೀಲ, ಜಯಮ್ಮ ಇತರರು ಉಪಸ್ಥಿತರಿದ್ದರು.