ಜಿಲ್ಲಾ ಚಿಗಟೇರಿ ಆಸ್ಪತ್ರೆ ಬದಲಾಗಿ ಮೋತಿ ವೀರಪ್ಪ ಕಾಲೇಜು ಆವರಣದಲ್ಲಿ ಲಸಿಕೆ ನೀಡಲಾಗುತ್ತಿತ್ತು.
ಸೋಂಕಿತರು ಹೆಚ್ಚಾಗುತ್ತಿದ್ದ ಕಾರಣ 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ಸಾಲುಗಟ್ಟಿ ನಿಂತಿದ್ದರು.
ಮಧ್ಯಾಹ್ನ 12 ಗಂಟೆಯ ವರೆಗೂ ಲಸಿಕೆ ನೀಡಲಾಯಿತು. ನಂತರ ಲಸಿಕೆ ಇಲ್ಲ. ನಾಳೆ ಬನ್ನಿ ಎಂದು ಹೇಳಿ ಕಳುಹಿಸಲಾಯಿತು.
ನಾಳೆ ನೀಡುವಿರಾ ಎಂಬ ಸಾರ್ವಜನಿಕರ ಪ್ರಶ್ನೆಗೆ ಸಮರ್ಪಕವಾಗಿ ಉತ್ತರಿಸದ ಅಧಿಕಾರಿಗಳು, ಸದ್ಯ ಲಸಿಕೆ ಖಾಲಿಯಾಗಿದೆ. ರಾತ್ರಿ 12ರ ನಂತರ ನಾಳೆ ಲಸಿಕೆ ಸಿಗುತ್ತದೋ ಇಲ್ಲವೋ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಇದ್ದಾಗ ಲಸಿಕೆ ಪಡೆಯಲು ನಿರ್ಲಕ್ಷಿಸಿದವರು ಸೋಂಕು ಹೆಚ್ಚಾಗುತ್ತಿದ್ದಂತೆ ಲಸಿಕೆಗಾಗಿ ಮುಗಿ ಬೀಳಲಾರಂಭಿಸಿದ್ದಾರೆ. ಪರಿಣಾಮ ಜಿಲ್ಲೆಯಲ್ಲಿ ಲಸಿಕೆಯ ಕೊರತೆ ಕಾಡಲಾರಂಭಿಸಿದೆ. ನಿತ್ಯ ಕನಿಷ್ಠ 600 ರಿಂದ ಗರಿಷ್ಠ 800 ಜನರಿಗೆ ಲಸಿಕೆಯನ್ನು ಹಾಕುತ್ತಿದ್ದಾರೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭೇಟಿ ನೀಡಿ, ಲಸಿಕೆ ಹಾಕಿಸಿಕೊಂಡ ಹಾಗೂ ಹಾಕಿಸಿಕೊಳ್ಳಲು ಕಾದು ಕುಳಿತಿದ್ದ ಜನರನ್ನು ಆತ್ಮೀಯತೆಯಿಂದ ಮಾತನಾಡಿಸಿದರು. ನಿಮ್ಮ ಜೀವ ರಕ್ಷಣೆ ಮಾಡಿಕೊಳ್ಳುವುದಕ್ಕಾದರೂ ಲಸಿಕೆಗಳನ್ನು ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಸಾಕಷ್ಟು ಪಾಸಿಟಿವ್ ಕೇಸ್ಗಳು ಸಹ ಬಂದಿವೆ. ಹೀಗಾಗಿ, ಜನರು ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳುತ್ತಿದ್ಧಾರೆ. ಇದು ನಮಗೂ ಸಾಕಷ್ಟು ಖುಷಿ ತಂದಿದೆ ಎಂದರು.