ಬರೋರ್ ಬಂದ್ರು.. ಹೋಗೋರ್ ಹೋದ್ರು..

ರಾಜ್ಯದಾದ್ಯಂತ 14 ದಿನಗಳ ಕೊರೊನಾ ಕರ್ಫ್ಯೂ ಹಿನ್ನೆಲೆ

ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿ ಜೋರು

ದಾವಣಗೆರೆ, ಏ.27- ಇಂದಿನಿಂದ 14 ದಿನಗಳ ಕಾಲ ರಾಜ್ಯ ಸರ್ಕಾರ ಕೊರೊನಾ ಕರ್ಫ್ಯೂ ವಿಧಿಸಿರುವುದರಿಂದ ನಗರದಲ್ಲಿ ಅಗತ್ಯ ವಸ್ತುಗಳ ಖರೀದಿ ಭರಾಟೆ ಹೆಚ್ಚಾಗಿತ್ತು. ಪರಿಣಾಮ ಮುಂಜಾನೆಯಿಂದ ಸಂಜೆ ವರೆಗೂ ಮಾರುಕಟ್ಟೆಯಲ್ಲಿ ಜನರ ಜಾತ್ರೆ.

ನಗರ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ದಿನಸಿ ಅಂಗಡಿಗಳ ಮಾಲೀಕರು, ತಾವು ಮಾರಲು ಬೇಕಾದ ವಸ್ತು ಗಳನ್ನು ಖರೀದಿಸಿ ಕೊಂಡೊಯ್ದರು. ಕೆ.ಆರ್. ಮಾರ್ಕೆಟ್, ಗಡಿಯಾರ ಕಂಬ, ಕಾಳಿಕಾದೇವಿ ರಸ್ತೆ, ವಿಜಯಲಕ್ಷ್ಮಿ ರಸ್ತೆ, ಚೌಕಿಪೇಟೆ, ಮಂಡಿಪೇಟೆ  ಹೀಗೆ ಮಾರುಕಟ್ಟೆ ಪ್ರದೇಶಗಳಲ್ಲಿ ವಾಹನ ದಟ್ಟಣೆ ಅತಿಯಾಗಿ ಕಂಡು ಬಂತು.

ಬೆಳಿಗ್ಗೆ ತಹಶೀಲ್ದಾರ್ ಕಚೇರಿ ಬಳಿಯ ತರಕಾರಿ ಮಾರುಕಟ್ಟೆಯಲ್ಲಿ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊಡು-ಕೊಳ್ಳುವಿಕೆಯಲ್ಲಿ ತೊಡಗಿಕೊಂಡಿದ್ದರು. ಬುಧವಾರದಿಂದ ಬೆಳಿಗ್ಗೆ 6 ರಿಂದ 10ರವರೆಗೆ ಹೋಲ್ ಸೇಲ್ ತರಕಾರಿ ಮಾರಾಟಕ್ಕೆ ಮಾತ್ರ ಅವಕಾಶವಿರುವುದಾಗಿ ಜೀಪ್‌ಗಳ ಮೂಲಕ ಎಪಿಎಂಸಿ ಅಧಿಕಾರಿಗಳು ಘೋಷಣೆ ಮಾಡುತ್ತಿದ್ದರು.

ಹಣ್ಣು-ತರಕಾರಿ, ಮಾಂಸದ ಅಂಗಡಿಗಳು, ಪೆಟ್ರೋಲ್ ಬಂಕ್‌ಗಳು, ಹೋಟೆಲ್‌ ಗಳು, ಬಾರ್ ಗಳು ತೆರೆಯಲ್ಪಟ್ಟಿದ್ದವು. ಬಾರ್ ಹಾಗೂ ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಅವಕಾಶವಿತ್ತು. ಬಟ್ಟೆ, ಚಿನ್ನಾಭರಣ, ಪಾತ್ರೆ, ಫ್ಯಾನ್ಸಿ ಸ್ಟೋರ್,  ಸಿನಿಮಾ ಮಂದಿರ ಮುಚ್ಚಲ್ಪಟ್ಟಿದ್ದವು.

ರಾಜ್ಯಾದ್ಯಂತ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಸ್ಸು, ರೈಲುಗಳ ಮೂಲಕ ಜನತೆ ದಾವಣಗೆರೆ ಪ್ರವೇಶಿಸಿತು. ನಗರದಲ್ಲಿದ್ದ ಕಾರ್ಮಿಕರು, ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ತೆರಳಿದರು. ಕೆಎಸ್ಸಾ ರ್ಟಿಸಿ ಬಸ್ ನಿಲ್ದಾಣದಲ್ಲಿ ಪರ ಊರುಗಳಿಗೆ ತೆರಳಬೇಕಾದವರು ಬಸ್‌ಗಳಿಗಾಗಿ  ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಹೊಸದುರ್ಗದಲ್ಲಿದ್ದ ಮಹಿಳೆ ಹಾಗೂ ಪುರುಷ ಕಾರ್ಮಿಕರ ಗುಂಪೊಂದು ಉತ್ತರ ಪ್ರದೇಶಕ್ಕೆ ತೆರಳಲು ರೈಲ್ವೇ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದರು. ಜೊತೆಗೆ ದಾವಣಗೆರೆಯಲ್ಲಿ ಐಸ್ ಮಾರುತ್ತಿದ್ದ ತಂಡವೊಂದು ಸಹ ಉತ್ತರ ಪ್ರದೇಶಕ್ಕೆ ತೆರಳಲು ಸಿದ್ಧವಾಗಿ ಕುಳಿತಿತ್ತು.

error: Content is protected !!