ಹರಿಹರ, ಫೆ.27- ಹರಿಹರದ ಐತಿಹಾಸಿಕ ಪ್ರಸಿದ್ಧ ಶ್ರೀ ಹರಿಹರೇಶ್ವರ ಸ್ವಾಮಿಯ ರಥೋತ್ಸವ ವಿವಿಧ ವಿಧಿ, ವಿಧಾನಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಇಂದು ಬೆಳಗ್ಗೆ ದೇವಸ್ಥಾನದಲ್ಲಿ ಶ್ರೀ ಗಣಪತಿ ಪೂಜೆ, ರುದ್ರಾಭಿಷೇಕ, ಅಲಂಕಾರ, ನವಗ್ರಹ ಜಪ, ಹೋಮ ಹವನಾದಿಗಳು ಮತ್ತು ಆವಾಹಿತ ದೇವತೆಗಳ ಪೂಜೆ, ಪೂರ್ಣಾಹುತಿ, ಬಲಿದಾನ, ಮಹಾಪೂಜೆ, ಅಷ್ಠಾವಧಾನ ಸೇವೆಗಳನ್ನು ಸ್ವಾಮಿಗೆ ವಿಶೇಷವಾಗಿ ನೆರವೇರಿಸಲಾಯಿತು.
ನಂತರದಲ್ಲಿ ಮಾಘ ಶುಕ್ಲ ಪೌರ್ಣಿಮೆ 11-15 ಕ್ಕೆ ವೃಷಭ ಲಗ್ನದ ಶುಭಾಂಶದಲ್ಲಿ ಶ್ರೀ ಹರಿಹರೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಅದ್ಧೂರಿಯಾಗಿ ನಡೆಯಿತು. ರಥೋತ್ಸವದಲ್ಲಿ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹರ ಹರ ಮಹಾದೇವ, ಗೋವಿಂದ, ಗೋವಿಂದ ಎಂದು ಹೇಳುತ್ತಾ ತಾವು ತಂದಿದ್ದ, ಹೂವು, ತೆಂಗಿನಕಾಯಿ, ಬಾಳೆಹಣ್ಣು, ಉತ್ತತ್ತಿ, ಕಲ್ಲು ಸಕ್ಕರೆಯನ್ನು ರಥೋತ್ಸವದ ಮೇಲೆ ಹಾಕಿ ತಮ್ಮ ಭಕ್ತಿ ಸಮರ್ಪಿಸಿದರು.
ಡೊಳ್ಳು, ಸಮಾಳ, ಬ್ಯಾಂಡ್ ಸೆಟ್ ಸೇರಿದಂತೆ ಬಾಜಾ ಭಜಂತ್ರಿಗಳೊಂದಿಗೆ ರಥೋತ್ಸವವು ರಥದ ಬೀದಿಯಿಂದ ಹೊರಟು, ದೇವಸ್ಥಾನ ರಸ್ತೆಯಿಂದ ರಾಣಿ ಚೆನ್ನಮ್ಮ ವೃತ್ತದವರೆಗೆ ಬಂದು ಪುನಃ ರಥದ ಬೀದಿಯನ್ನು ತಲುಪಿತು.
ಶ್ರೀ ಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಗಜಾನನ ಯುವಕ ಸಂಘದವರಿಂದ ಪ್ರಸಾದ ವ್ಯವಸ್ಥೆ ಮತ್ತು ನಗರದ ಹಲವು ಸಂಘ-ಸಂಸ್ಥೆಗಳಿಂದ ಅನ್ನ ಸಂತರ್ಪಣೆ, ತಂಪು ಪಾನೀಯ, ಕೋಸಂಬರಿ, ಮಜ್ಜಿಗೆಯನ್ನು ನೆರೆದಿದ್ದ ಭಕ್ತರಿಗೆ ವಿತರಿಸಿದರು.
ರಥೋತ್ಸವ ಸಂದರ್ಭದಲ್ಲಿ ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ಎಸ್. ಎಂ. ವೀರೇಶ್, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ನಗರಸಭೆ ಪೌರಾಯುಕ್ತ ಉದಯಕುಮಾರ್, ನಗರಸಭೆ ಸದಸ್ಯ ಕೆ.ಜಿ. ಸಿದ್ದೇಶ್, ಪಿ.ಎನ್. ವಿರೂಪಾಕ್ಷ, ನಿಂಬಕ್ಕ ಚಂದಾಪೂರ್, ಉಷಾ ಮಂಜುನಾಥ್, ವೇ. ಬ್ರ. ನಾರಾಯಣ ಜೋಯಿಸ್, ಮಹಜೇನಹಳ್ಳಿ ಶಾನುಭೋಗ್ ಹೆಚ್. ಗಿರೀಶ್, ಕಸಬ ಶಾನುಭೋಗ ಹರಿಶಂಕರ್, ಹೆಚ್. ವೆಂಕಟೇಶ, ಮಹಜೇನಹಳ್ಳಿ ಪಟೇಲರು ಜಿ.ಎಸ್. ಚೆನ್ನಬಸಪ್ಪ ಗೌಡ್ರು, ಕಸಬಾ ಪಟೇಲರು, ಜಿ.ಎಂ. ಲಿಂಗರಾಜ್ ಪಾಟೀಲ್, ಆನಂದ್,
ತಾ.ಪಂ. ಮಾಜಿ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ, ಶಿವಪ್ರಕಾಶ್ ಶಾಸ್ತ್ರಿ, ಅರ್ಚಕ ಗುರುಪ್ರಸಾದ್, ದಿನೇಶ್, ಸಿಪಿಐ ಸತೀಶ್ ಕುಮಾರ್, ಮಲೇಬೆನ್ನೂರು ಠಾಣೆ ಪಿಎಸ್ಐ ವೀರಬಸಪ್ಪ, ಗುತ್ತೂರು ಠಾಣೆ ಪಿಎಸ್ಐ ಡಿ. ರವಿಕುಮಾರ್, ವಿಜಯ ಮಹಂತೇಶ್ ಇನ್ನಿತರರಿದ್ದರು.