ಪ್ರವರ್ಗ-1 ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಿ.ಟಿ.ಶ್ರೀನಿವಾಸ್
ದಾವಣಗೆರೆ, ಅ. 23- ಪ್ರವರ್ಗ 1ರಡಿಯಲ್ಲಿ ಬರುವ 95 ಜಾತಿಗಳು, 171 ಉಪ ಜಾತಿಗಳು ಸಂಘಟಿತರಾಗಿ, ಈಗಿರುವ ಶೇ.4ರಷ್ಟು ಮೀಸಲಾತಿ ಉಳಿಸಿಕೊಳ್ಳುವ ಹಾಗೂ ಮೀಸಲಾತಿಯನ್ನು ಶೇ.10ಕ್ಕೆ ಹೆಚ್ಚಿಸಿಕೊಳ್ಳಲು ಹೋರಾಟಕ್ಕೆ ಮುಂದಾಗದಿದ್ದರೆ ಮತ್ತಷ್ಟೂ ತುಳಿತಕ್ಕೆ ಒಳಗಾಗಬೇಕಾಗುತ್ತದೆ ಎಂದು ಕರ್ನಾಟಕ ಪ್ರವರ್ಗ-1 ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಿ.ಟಿ.ಶ್ರೀನಿವಾಸ್ ಹೇಳಿದರು.
ಕರ್ನಾಟಕ ರಾಜ್ಯ ಪ್ರವರ್ಗ-1 ಜಾತಿಗಳ ಒಕ್ಕೂಟ ಹಾಗೂ ದಾವಣಗೆರೆ ಜಿಲ್ಲಾ ಪ್ರವರ್ಗ-1 ಜಾತಿಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಭಾನುವಾರ ನಗರದ ಉದಯ ಮಾಲ್ ಕನ್ವೆನ್ಷನ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಅನೇಕ ಪ್ರಬಲ ಜಾತಿಗಳು ಮೀಸಲಾತಿಗಾಗಿ ಹೋರಾಟ ನಡೆಸುತ್ತಿವೆ. ಪ್ರವರ್ಗ 1ಕ್ಕೆ ಪ್ರತ್ಯೇಕವಾಗಿ ಮೀಸಲಾತಿ ನೀಡಿದರೆ ನಮ್ಮ ಅಸ್ತಿತ್ವ ನಾವು ರೂಪಿಸಿಕೊಳ್ಳಬಹುದು. ಕಳೆದ 75 ವರ್ಷಗಳಿಂದ ತುಳಿತಕ್ಕೆ ಒಳಗಾಗಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ಮೀಸಲಾತಿ ಹೆಚ್ಚಳದ ಹೋರಾಟಕ್ಕಾಗಿ ಗ್ರಾಮ, ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಹಂತಗಳಲ್ಲಿ ಸಂಘಟನೆ ನಡೆಸಿ, ಬೃಹತ್ ಶಕ್ತಿ ಪ್ರದರ್ಶನ ನಡೆಸುವ ಅಗತ್ಯವಿದೆ ಎಂದು ಹೇಳಿದರು.
ನಮಗೆ ಮೀಸಲಾತಿ ಹೆಚ್ಚಿಸಿದರೆ, ಪ್ರಬಲ ಜಾತಿಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಉದ್ದೇಶದಿಂದ ಯಾವೊಬ್ಬ ಶಾಸಕರು, ಸಂಸದರು ಮೀಸಲಾತಿ ಬಗ್ಗೆ ದನಿ ಎತ್ತುತ್ತಿಲ್ಲ. ಜಾತಿಗಳ ಸೇರ್ಪಡೆ, ಮಾರ್ಪಾಡು, ಬದಲಾವಣೆ ಮಾಡಿ ನಮ್ಮ ಸಮಾಜ ಮುಂದೆ ತರಲು ಯಾರೂ ಧೈರ್ಯ ಮಾಡುತ್ತಿಲ್ಲ. ಆದ್ದರಿಂದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 224 ಸ್ಥಾನಗಳ ಪೈಕಿ ಕನಿಷ್ಟ 15 ಸ್ಥಾನಗಳಿಂದಾದರೂ ನಮ್ಮ ಜನ ಚುನಾಯಿತರಾಗಬೇಕಿದೆ. ಆಗ ಮೀಸಲಾತಿ ಹೋರಾಟಕ್ಕೆ ಶಕ್ತಿ ಬಂದಂತಾಗುತ್ತದೆ ಎಂದು ಅಭಿಪ್ರಾಯಿಸಿದರು
ಕಡಿಮೆ ಸಂಖ್ಯೆ ಜನ ಹೊಂದಿರುವ ಯಾವುದೇ ಜಾತಿ ಪ್ರತ್ಯೇಕವಾಗಿ ಹೋರಾಟ ನಡೆಸಿ ಮೀಸಲಾತಿ ಪಡೆಯಲು ಸಾಧ್ಯವಿಲ್ಲ. ಜನ ಸಂಖ್ಯೆ ನೋಡಿ ರಾಜಕಾರಣಿಗಳು ಜಾತಿಗಳಿಗೆ ಪ್ರಾಧಾನ್ಯತೆ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಸತತ 1 ವರ್ಷಗಳ ಕಾಲ ಸುತ್ತಾಡಿ ಪ್ರವರ್ಗ1 ರ ಒಕ್ಕೂಟ ರಚನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಸಂಘಟಿತರಾಗಿ ಉಗ್ರ ಹೋರಾಟಕ್ಕೆ ಅಣಿಯಾಗಬೇಕಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಶೋಷಿತ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಆರಂಭಿಸಲು ಚಿಂತನೆ ನಡೆಸಿದೆ ಎಂದು ಹೇಳಿದ ಶ್ರೀನಿವಾಸ್, ಹಿಂದುಳಿದ ವರ್ಗದ ಯುವಕರು ಪ್ರಬಲ ಜಾತಿ ನಾಯಕರ ಮದ್ಯದ ಬಾಟಲಿಗೆ ಮದ್ಯ ತುಂಬುವ ಕೆಲಸಕ್ಕಷ್ಟೇ ಸೀಮಿತರಾಗದೇ ಉತ್ತಮ ವಿದ್ಯಾಭ್ಯಾಸ ಮಾಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ, ಉತ್ತಮ ಹುದ್ದೆಗಳನ್ನು ಪಡೆಯಬೇಕು ಎಂದು ಕಿವಿ ಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್, ಮುಂದುವರಿದ ಜಾತಿಯ ಜನರಿಗೆ ಉಪ್ಪು ಬೇಕಿದೆ. ಆದರೆ ಉಪ್ಪಾರರು ಬೇಕಿಲ್ಲ. ಹಾಲು, ಮೊಸಲು ಬೇಕಿದೆ ಆದರೆ ಗೊಲ್ಲರು ಬೇಕಿಲ್ಲ. ಇತಿಹಾಸವಿರುವ ಇಂತಹ ಸಮುದಾಯಗಳು ಇಂದು ಮೀಸಲಾತಿಗಾಗಿ ಭಿಕ್ಷೆ ಬೇಡುತ್ತಿರುವುದು ದುರಂತ. ಪ್ರವರ್ಗ1ರಡಿ ಬರುವ ಎಲ್ಲಾ ಜಾತಿಗಳು ಸಂಘಟಿತರಾದರೆ ಮಾತ್ರ, ನಮ್ಮ ಬಲಾಬಲ ತೋರಿಸಲು ಸಾಧ್ಯವಾಗುತ್ತದೆ ಎಂದರು.
ಒಕ್ಕೂಟದ ಕಾರ್ಯಾಧ್ಯಕ್ಷ ಹೆಚ್.ಬಿ. ಬಂಡಿ, ಪ್ರಧಾನ ಕಾರ್ಯದರ್ಶಿ ಎ.ಬಿ.ಲೋಕೇಶ್, ವಿವಿಧ ಸಮಾಜಗಳ ಮುಖಂಡರುಗಳಾದ ಜಗದೀಶ್, ವಿಠಲ ಯಾದವ್, ಉಮಾಶಂಕರ್, ಎಸ್.ಬಸವರಾಜಪ್ಪ, ತಿಪ್ಪೇಸ್ವಾಮಿ, ಮುರುಗಣ್ಣ. ಜಯರಾಂ, ಮಣಿಕಂಠ, ಪೂರ್ಣಿಮಾ, ನರಸಿಂಹಮೂರ್ತಿ ಇತರರು ಉಪಸ್ಥಿತರಿದ್ದರು.