ಶೋಷಿತರ ದನಿಯಾಗಿದ್ದ ಹೆಚ್‌ಕೆಆರ್

ಚಳವಳಿ ಮೂಲಕ ಜನ ಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ: ಅನಂತ ಸುಬ್ಬರಾವ್

ದಾವಣಗೆರೆ, ಅ.24- ಕಾರ್ಮಿಕ ಮುಖಂಡ ದಿ. ಹೆಚ್.ಕೆ. ರಾಮಚಂದ್ರಪ್ಪ ಅವರು ದುರ್ಬಲರು, ಶೋಷಿತರ ಪರ ನಡೆಸಿದ ಚಳವಳಿಗಳ ಮೂಲಕ ಜನ ಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಎಐಟಿಯುಸಿ ರಾಜ್ಯಾಧ್ಯಕ್ಷ ಹೆಚ್.ವಿ. ಅನಂತಸುಬ್ಬರಾವ್ ಹೇಳಿದರು.

ಎಐಟಿಯುಸಿ, ಸಿಪಿಐ ಜಿಲ್ಲಾ ಘಟಕಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ದಿ. ಹೆಚ್.ಕೆ. ರಾಮಚಂದ್ರಪ್ಪ ಶ್ರದ್ಧಾಂಜಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹೆಚ್‌ಕೆಆರ್ ಮಾಡಿದ ಹೋರಾಟ ಗಳು ಮುಂದಿನ ಪೀಳಿಗೆಗೆ ಸ್ಫೂರ್ತಿದಾಯಕ ವಾಗಿದ್ದು, ಅನೇಕ ಚಳವಳಿಗಳ ಮೂಲಕ ಇನ್ನೂ ಜೀವಂತವಾಗಿದ್ದಾರೆ ಎಂದರು.

ಹೆಚ್‌ಕೆಆರ್ ಅವರಲ್ಲಿ ತಾಳ್ಮೆ  ಗುಣ ಇತ್ತು. ಶಿಸ್ತಿನ ಸಿಪಾಯಿಯಾಗಿದ್ದ ಅವರು, ಕೊನೆ ಉಸಿರು ಇರುವ ತನಕ ಶೋಷಿತರು, ದುರ್ಬಲರು ಮತ್ತು ದೀನ ದಲಿತರ ಪರ ಹೋರಾಟ ನಡೆಸಿದರು. ಅವರ ಕೆಲಸದ ಬದ್ಧತೆ ಮೆಚ್ಚವಂತಹದ್ದು ಎಂದು ಹೆಚ್‌ಕೆಆರ್ ಸಾಧನೆಗಳನ್ನು ಮೆಲುಕು ಹಾಕಿದರು.

ಕೆಲವರು ಬದುಕಿರುವಾಗಲೇ ಸತ್ತಂತೆ ಇರುತ್ತಾರೆ. ಮತ್ತೆ ಕೆಲವರು ಅವರ ಸಾಧನೆಗಳ ಮೂಲಕ ಜನಮಾನಸದಲ್ಲಿ ಉಳಿಯುತ್ತಾರೆ. ಅಂತವರ ಸಾಲಿಗೆ ಹೆಚ್.ಕೆ. ರಾಮಚಂದ್ರಪ್ಪ ಸೇರುತ್ತಾರೆ ಎಂದರು.

ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಮಾತನಾಡಿ, ಪ್ರಸ್ತುತ ದುಡಿಯುವ ವರ್ಗದವರ ಪರ ಹೋರಾಟಗಳು ಬಲಿಷ್ಠವಾಗಬೇಕಾಗಿದೆ. ರಾಮಚಂದ್ರಪ್ಪ ಅವರು ಶೋಷಿತರ ಪರ ನಡೆಸಿದ ಹೋರಾಟಗಳನ್ನು ಮುಂದುವರೆಸಿಕೊಂಡು ಹೋಗುವ ಪ್ರತಿಜ್ಞೆ ಮಾಡಬೇಕಾಗಿದೆ ಎಂದು ಹೇಳಿದರು.

ದೇಶದಲ್ಲಿ ಬಡತನ ಕಾಡುತ್ತಿದ್ದು, ಹಸಿವಿನ ಸೂಚ್ಯಂಕ ಹೆಚ್ಚಾಗುತ್ತಿದೆ. ಆದರೆ ಬಂಡವಾಳಶಾಹಿಗಳ ಆದಾಯ ಮಾತ್ರ ಇಳಿಕೆಯಾಗುತ್ತಿಲ್ಲ. ಇದಕ್ಕೆ ಕಾರಣ ಕೇಂದ್ರ ಸರ್ಕಾರದ ಶ್ರೀಮಂತರ ಪರವಾದ ನೀತಿಗಳು ಎಂದು ಹೇಳಿದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಿದ್ಧಾಂತಗಳನ್ನು ಸೋಲಿಸುವ ಕೆಲಸ ಮಾಡಬೇಕಾಗಿದೆ. ದುಡಿಯುವ ವರ್ಗದವರ, ದುರ್ಬಲರ ಪರವಾದ ಹೋರಾಟಗಳನ್ನು ಗಟ್ಟಿಗೊಳಿಸುವ ಅಗತ್ಯವಿದೆ ಎಂದರು.

ಸಿಪಿಐ ಖಜಾಂಚಿ ಆನಂದರಾಜ್ ಅಧ್ಯಕ್ಷತೆ ವಹಿಸಿದ್ದರು. ಹೊಸತು ಪತ್ರಿಕೆ ಸಂಪಾದಕ ಡಾ. ಸಿದ್ಧನಗೌಡ ಪಾಟೀಲ್, ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ. ಲೋಕೇಶ್, ಕಾರ್ಮಿಕ ಮುಖಂಡರಾದ ಕೆ.ಎಸ್. ಜನಾರ್ದನ್, ಹೆಚ್.ಜಿ. ಉಮೇಶ್ ಆವರಗೆರೆ, ಪಿ.ಬಿ. ಚಂದ್ರು ಆವರಗೆರೆ, ಟಿ.ಎಸ್. ನಾಗರಾಜ್, ಆವರಗೆರೆ ವಾಸು, ವಕೀಲರಾದ ಎಲ್.ಹೆಚ್. ಅರುಣ್ ಕುಮಾರ್, ಹಾವೇರಿಯ ಹೊನ್ನಪ್ಪ ಮರೆಮ್ಮನವರ್, ಕೆ. ರಾಘವೇಂದ್ರ ನಾಯರಿ, ಎನ್. ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.

ಭಾರತೀಯ ಜನ ಕಲಾ ಸಮಿತಿ ಕಲಾವಿದರು ಜಾಗೃತಿ ಗೀತೆಗಳನ್ನು ಹಾಡಿದರು.

error: Content is protected !!