ದಿನಾಂಕ : 28.02.2021ರಂದು ನೆರವೇರಲಿರುವ ಬಸವ ಚೇತನ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಲಿಂ. ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 64ನೇ ಸರಳ ಸ್ಮರಣೋತ್ಸವ 2021 ಹಾಗೂ ಜಯದೇವ ಶ್ರೀ ಮತ್ತು ಶೂನ್ಯ ಪೀಠ ಪ್ರಶಸ್ತಿ ಪ್ರದಾನ ಶರಣ ಸಂಸ್ಕೃತಿ ಉತ್ಸವ.
ಹನ್ನೆರಡನೇ ಶತಮಾನ ಕರ್ನಾಟಕದ ಜನ ಜೀವನದಲ್ಲಿ ರೋಮಾಂಚನಕಾರಿ ಯಾದ ಕಾಲ. ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ವಿಪ್ಲವಗಳಿಂದ ಕಂಗಾ ಲಾಗಿದ್ದ ಜನತೆಗೆ ಅತೃಪ್ತಿಯ ಜೀವನವನ್ನು ಎದುರಿಸಿ, ಸಮಸ್ತರೂ ಸಮಾನರು, ಮನುಷ್ಯ ಮಾತ್ರರಲ್ಲಿ ಯಾವುದೇ ರೀತಿಯ ಭಿನ್ನ ಭಾವನೆಗಳಿಗೆ ಎಡೆಯಿಲ್ಲ ಎಂಬುದನ್ನು ಆಚಾರದಲ್ಲಿ ಆಚರಿಸಿ ತೋರಿಸಿದವರು ಭಕ್ತಿ ಭಂಡಾರಿ ಬಸವಣ್ಣನವರು.
ಸನಾತನವಾಗಿ ನಡೆದು ಬಂದಿದ್ದ ಜಾತ್ಯಾಂಧತೆಯ ಸೋಗಿನಲ್ಲಿ ದಡಕ್ಕೆ ಚಿಮ್ಮಿದ ಮೀನಿನಂತೆ ವಿಲವಿಲ ಒದ್ದಾಡುತ್ತಿದ್ದ ಸಮಾಜ ಜೀವನದಲ್ಲಿ ಆಮೂಲಾಗ್ರ ಬದ ಲಾವಣೆಯನ್ನು ತರಲು, ತಾವು ಹಮ್ಮಿಕೊಂಡ ಕಾರ್ಯಗಳನ್ನು ನಿಜ ಜೀವನದಲ್ಲಿ ಅಳವಡಿಸಲು ತಮ್ಮ ಮಹಾಮನೆಯಲ್ಲಿಯೇ ಅನುಭವ ಮಂಟಪವನ್ನು ನಿರ್ಮಿಸಿ, ಅದರಲ್ಲಿ ಅತ್ಯಾಶ್ಚರ್ಯಕರವಾದ ಶೂನ್ಯ ಸಿಂಹಾಸನವನ್ನು ಸ್ಥಾಪಿಸಿ, ಅದರಲ್ಲಿ ಅಲ್ಲಮಪ್ರಭು ದೇವರನ್ನು ಮೂರ್ತಗೊಳಿಸಿ ತಮ್ಮ ಕಾರ್ಯಕ್ರಮಗಳನ್ನು ನಿರ್ವಹಿಸಿದರು.
ಈ ಶೂನ್ಯಪೀಠ ಪರಂಪರೆಯಲ್ಲಿ ಬಂದ ಶ್ರೀ ಜಯದೇವ ಜಗದ್ಗುರುಗಳು ತಮ್ಮ ಪರಮ ಪವಿತ್ರ ಜೀವನದಿಂದ ಸಮಾಜವನ್ನು ಬೆಳಗಿ, ಪ್ರತಿಯೊಬ್ಬರ ಹೃದಯ ಮಂದಿರ ದಲ್ಲಿ ತಾವು ವಿರಾಜಮಾನರಾಗಿ ಶೂನ್ಯ ಸಿಂಹಾಸನದ ಗೌರವವನ್ನು ಬಸವಣ್ಣನವರ ಆಶಯದಂತೆ ನಡೆಸಿಕೊಂಡು ಬಂದ ಮಹಾನ್ ಚೇತನ.
ಶ್ರೀ ಜಯದೇವ ಜಗದ್ಗುರುಗಳವರ ಕಾಲದಲ್ಲಿ ವಾಹನ ಸೌಕರ್ಯ ಇಲ್ಲದೇ ಇದ್ದುದರಿಂದ (1903 ರಿಂದ 1956) ದಮಡಿಗಾಡಿ (ಸವಾರಿ ಬಂಡಿ), ಮೇನಾ, ಪಲ್ಲಕ್ಕಿ ಇತ್ಯಾದಿಗಳಲ್ಲಿ ಸಂಚರಿಸಬೇಕಾಗಿದ್ದಿತು.
ಕರ್ತೃ ಶ್ರೀ ಗುರು ಮುರುಘೇಶನ ವಾಣಿ ಯಂತೆ ಸುತ್ತಕಟ್ಟು ಎನ್ನುವುದು ಜಯದೇವ ಜಗದ್ಗರುಗಳವರ ಮೂಲಮಂತ್ರವಾಗಿತ್ತು. ಮಠದ ನಾಲ್ಕು ಗೋಡೆಗಳ ಮಧ್ಯೆ ಲಿಂಗಾ ರ್ಚನೆ, ಪುರಾಣ, ಪ್ರವಚನಕ್ಕಷ್ಟೇ ಸೀಮಿತ ಗೊಳಿಸಿಕೊಂಡು ಕೇವಲ ಆತ್ಮೋದ್ಧಾರವನ್ನು ಮಾಡಿಕೊಂಡರೆ ಸಾಲದು. ಆತ್ಮೋದ್ಧಾರದ ಜೊತೆಗೆ ಸಮಾಜೋದ್ಧಾರವೂ ನಿರಂತರ ವಾಗಿ ನಡೆಯುತ್ತಿರಬೇಕು. ಸಮಾಜ ನಿಂತ ನೀರಾಗಬಾರದು. ಹರಿಯುವ ನದಿಯಾಗ ಬೇಕು. ಜಂಗಮಾಚರಣೆ ಎಂದರೆ, ಪಟ್ಟಣಕ್ಕೆ ಪಂಚರಾತ್ರಿ ವಾಸ್ತವ್ಯ ಮಾಡಿ, ಗ್ರಾಮಕ್ಕೆ ಏಕ ರಾತ್ರಿ ವಾಸ್ತವ್ಯ ಮಾಡಿ, ಅಜ್ಞಾನದ ಅಂಧ ಕಾರದಲ್ಲಿ ಮುಳುಗಿರುವ, ಮೌಢ್ಯ, ಕಂದಾ ಚಾರಗಳ ದಾಸರಾಗಿರುವ ಭಕ್ತರನ್ನು ಬಡಿದೆ ಬ್ಬಿಸಬೇಕು. ಅವರನ್ನು ಅಜ್ಞಾನದ ಅಂಧಕಾರ ದಿಂದ ಸುಜ್ಞಾನದ ಜ್ಯೋತಿಯೆಡೆಗೆ ಒಯ್ಯುವುದು ನಿಜವಾದ ಸೇವೆ. ನಿತ್ಯಲಿಂಗ ಪೂಜೆಗಿಂತ ಶ್ರೇಷ್ಠವಾದದ್ದು, ಭಕ್ತರು ತಲೆ ತಲಾಂತರಗಳಿಂದ ಆಚರಿಸಿಕೊಂಡು ಬಂದಂತಹ ಕಂದಾಚಾರ ಗಳನ್ನು ಸಮಾಜದಲ್ಲಿ ಬೇರೂರಿರುವ ಮೌಢ್ಯವನ್ನು ಕಿತ್ತು ಹಾಕಲು, ಅವರನ್ನು ಸುಶಿಕ್ಷಿತರನ್ನಾಗಿಸಬೇಕು. ಎಲ್ಲಿಯವರೆಗೆ ಜನತೆ ಅಕ್ಷರಸ್ಥರಾಗು ವುದಿಲ್ಲವೋ ಅಲ್ಲಿಯವರೆಗೆ ಸಮಾಜ ಉದ್ಧಾರವಾಗುವು ದಿಲ್ಲ ಎಂಬುದನ್ನು ಅರಿತಿದ್ದ ಜಯದೇವ ಜಗದ್ಗುರುಗಳು ತಮ್ಮ ಸಂಚಾರದ ಕಾಲದಲ್ಲಿ ಕೇಳುತ್ತಿದ್ದ ಮೊದಲ ಪ್ರಶ್ನೆ, ನಿಮ್ಮ ಊರಿನಲ್ಲಿ ವಾಚನಾಲಯ ಇದೆಯೇ ಎಂದು. ಆಗ ಆ ಊರಿನ ಪ್ರಮುಖರನ್ನು ಕರೆಸಿ, ಚರ್ಚಿಸಿ, ಸ್ಥಳೀಯವಾಗಿ ಚಂದಾ ವಸೂಲಿ ಮಾಡಿ, ಒಂದು ಸಮಿತಿಯನ್ನು ರಚಿಸಿ ವಾಚನಾ ಲಯ, ಗ್ರಂಥ ಭಂಡಾರ, ಶಾಲಾ-ಕಾಲೇಜು ಹಾಗೂ ಉಚಿತ ವಿದ್ಯಾರ್ಥಿ ನಿಲಯಗಳನ್ನು ಶ್ರೀ ಜಗದ್ಗುರು ಜಯದೇವ ಉಚಿತ ಪ್ರಸಾದ ನಿಲಯಗಳನ್ನು ಪ್ರಾರಂಭಿಸುವ ವ್ಯವಸ್ಥೆ ಮಾಡಿ ಮುಂದಿನ ಊರಿಗೆ ಶ್ರೀಗಳವರ ಸವಾರಿ ದಯಮಾಡಿಸುತ್ತಿತ್ತು.
ಮಠದ ನಾಲ್ಕು ಗೋಡೆಗಳ ಮಧ್ಯೆ, ಲಿಂಗಾರ್ಚನೆ, ಪುರಾಣ, ಪ್ರವಚನಕ್ಕಷ್ಟೇ ಸೀಮಿತಗೊಳಿಸಿಕೊಂಡು ಕೇವಲ ಆತ್ಮೋದ್ಧಾರವನ್ನು ಮಾಡಿಕೊಂಡರೆ ಸಾಲದು, ಆತ್ಮೋದ್ಧಾರದ ಜೊತೆಗೆ ಸಮಾಜೋದ್ಧಾರವೂ ನಿರಂತರವಾಗಿ ನಡೆಯುತ್ತಿರಬೇಕು. ಸಮಾಜ ನಿಂತ ನೀರಾಗಬಾರದು, ಹರಿಯುವ ನದಿಯಾಗಬೇಕು.
ಅನ್ನ, ಅರಿವು, ಆಶ್ರಯ ನೀಡಿದವರಲ್ಲಿ ಶ್ರೀಗಳು ಪ್ರಪ್ರಥಮ ಎಂಬುದು ಅತಿಶಯೋ ಕ್ತಿಯ ಮಾತಲ್ಲ. ಇಂದಿಗೂ ಕೂಡ ಬೆಂಗ ಳೂರು, ಮೈಸೂರು, ತುಮಕೂರು, ತಿಪ ಟೂರು, ದಾವಣಗೆರೆ, ಚಿತ್ರದುರ್ಗ, ಕೊಲ್ಲಾ ಪುರ ಇತ್ಯಾದಿಗಳಲ್ಲಿ ಪ್ರಸಾದ ನಿಲಯಗಳು ಸುವ್ಯವಸ್ಥಿತವಾಗಿ ನಡೆದುಕೊಂಡು ಬರುತ್ತಿವೆ.
ಜಗದ್ಗುರುಗಳವರ ಮೇನಾ ಸವಾರಿ ವೈಭವ ಹೇಗಿರುತ್ತಿತ್ತು ಎಂಬುದನ್ನು ಅಭಿನಯಿಸಿ ತೋರಿಸಿದರೆ ನೋಡಲೆರಡು ಕಣ್ಣುಗಳು ಸಾಲವು. ವಿಶ್ವಗುರು ಬಸವಣ್ಣನವರು ತಾವಷ್ಟೇ ಬೆಳೆಯಬೇಕು ಎಂಬ ಉದ್ದೇಶವನ್ನು ಹೊಂದಿದವರಾಗಿದ್ದಿಲ್ಲ. ಬಸವಣ್ಣನವರಿಗೆ ಎಲ್ಲರನ್ನೂ ಅಪ್ಪಿಕೊಳ್ಳುವ ಗುಣವಿತ್ತು. ಅಂತಹ ಪರಂಪರೆಯನ್ನು ಮರು ಸೃಷ್ಠಿ ಮಾಡಿದ್ದು ಶ್ರೀ ಜಯದೇವ ಜಗದ್ಗುರುಗಳು. 53 ವರ್ಷಗಳ ಕಾಲ ಶೂನ್ಯ ಪೀಠಾಧ್ಯಕ್ಷರಾಗಿ ಯಶಸ್ಸಿನ ಉತ್ತುಂಗ ಶಿಖರಕ್ಕೆ ಏರಿದವರು ಶ್ರೀ ಜಯದೇವ ಜಗದ್ಗುರುಗಳು. ಅದ್ಭುತವಾದ, ಅಪ್ರತಿಮ ವಾದ ಶಕ್ತಿ ಅವರಲ್ಲಿತ್ತು. ತಾವು ಬೆಳೆಯುವುದು ಮಾತ್ರವಲ್ಲ, ಎಲ್ಲರನ್ನೂ ಬೆಳೆಸಿದರು.
ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆಗೆ ಸಾಕ್ಷಿ ಶ್ರೀ ಜಯದೇವರು. ಹಾವೇರಿಯಲ್ಲಿ ಹರಿಜನರಿಗೆ ಹಾಸ್ಟೆಲ್ ಹಾಗೂ ಮಸೀದಿ ಯನ್ನು ಕಟ್ಟಿಕೊಳ್ಳಲು ಸಹಾಯ ಮಾಡಿದ್ದಾರೆ.
1913ರಲ್ಲಿ ಶ್ರೀ ಮೃತ್ಯುಂಜಯ ಅಪ್ಪಗಳು ಹಾಗೂ ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪನವರಿಗೆ ಅಪ್ಪಣೆ ಮಾಡಿ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಾರಂಭಿಸಿದ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ದಾವಣಗೆರೆಯಲ್ಲಿ ಪ್ರಾರಂಭಿಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ.
1934 ನೇ ಇಸವಿಯಲ್ಲಿ ನೂತನವಾಗಿ ನಿರ್ಮಿಸಿದ ದಾವಣಗೆರೆ ನಗರ ದೇವತೆ ಶ್ರೀ ದುರ್ಗಮ್ಮನ ದೇವಾಲಯದ ಪ್ರತಿಷ್ಠಾಪ ನೆಯ ಸಂದರ್ಭದಲ್ಲಿ ಶ್ರೀಗಳು ದಯಮಾಡಿ ಸಿದಾಗ ನಡೆದ ಅವರ ಅಡ್ಡಪಲ್ಲಕ್ಕಿ ಉತ್ಸವದ ಮೆರವಣಿಗೆಯನ್ನು ಕಣ್ತುಂಬಿಸಿಕೊಂಡ ಹಿರಿಯರು ಇಂದಿಗೂ ಮೆಲುಕು ಹಾಕುತ್ತಾರೆ.
ಶ್ರೀಗಳದ್ದು ಪ್ರಗತಿಪರ-ವೈಚಾರಿಕ ಮೇರು ವ್ಯಕ್ತಿತ್ವ : ಮುರುಘಾ ಮಠದ ಇತಿಹಾಸದಲ್ಲಿ `ಮಹಾಲಿಂಗ ಸ್ವಾಮಿಗಳು’ ಪ್ರಸಾದ ನಿಲಯವನ್ನು ಪ್ರಪ್ರಥಮವಾಗಿ ಬೆಳಗಾವಿಯಲ್ಲಿ ಡೆಪ್ಯೂಟಿ ಚನ್ನಬಸಪ್ಪನವರ ನೇತೃತ್ವದಲ್ಲಿ ಪ್ರಾರಂಭವಾದದ್ದು, ನಂತರದ ದಿವಸಗಳಲ್ಲಿ ಶ್ರೀ ಜಗದ್ಗುರು ಜಯದೇವ ಉಚಿತ ಪ್ರಸಾದ ನಿಲಯಗಳು ಪ್ರತಿಯೊಂದು ನಗರ ಪ್ರದೇಶಗಳಲ್ಲಿ ಪ್ರಾರಂಭವಾದದ್ದು ಶ್ರೀಗಳ ಕಾಲದಲ್ಲಿ. ಇಂತಹ ಉಚಿತ ಪ್ರಸಾದ ನಿಲಯಗಳನ್ನು ಪ್ರಾರಂಭಿಸುವುದರ ಮೂಲಕ ಅನ್ನ, ಅರಿವು, ಆಶ್ರಯ ನೀಡಿದ ಕೀರ್ತಿ ಜಯದೇವ ಜಗದ್ಗುರುಗಳಿಗೆ ಸಲ್ಲು ತ್ತದೆ. ಇಂತಹ ಮೇರು ವ್ಯಕ್ತಿತ್ವದ ಮಹಾನ್ ಚೇತನ ಗತಿಸಿ 64 ವರ್ಷಗಳು ಸಂದರೂ ಭಕ್ತಾದಿಗಳು ಅವರ ರಥೋತ್ಸವವನ್ನು ದಾವಣಗೆರೆಯಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ.
ಶ್ರೀಗಳವರ ಸ್ಮರಣೋತ್ಸವ, ಸಹಜ ಶಿವಯೋಗ ಹಾಗೂ ಶರಣ ಸಂಸ್ಕೃತಿ ಉತ್ಸವವನ್ನೂ ಪ್ರತಿವರ್ಷ ಮೂರು ದಿನಗಳ ಕಾಲ ಆಚರಿಸುತ್ತಾರೆ. ಈ ವರ್ಷ ಕೋವಿಡ್-19ರ ಕರಿನೆರಳಲ್ಲಿ ಒಂದು ದಿನದ (ದಿನಾಂಕ : 28.02.2021) ರಂದು ನೆರವೇರಿಸಿ, ಶ್ರೀಗಳವರ ನಾಮಾಂಕಿತದಲ್ಲಿ ಸ್ಥಾಪಿಸಲ್ಪಟ್ಟ ಜಯದೇವ ಶ್ರೀ ಮತ್ತು ಶೂನ್ಯಪೀಠ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಶರಣ ಸಂಸ್ಕೃತಿ ಉತ್ಸವ ನಡೆಯಲಿದೆ. ಇದು ನಿಮ್ಮ ಶ್ರೀ ಮಠದ ನಿಮ್ಮ ಮನೆಯ ಹಬ್ಬ. ಸರ್ವರೂ ಈ ಸಮಾರಂಭದಲ್ಲಿ ಭಾಗವಹಿಸಿ ಶ್ರೀಗಳ ಕೃಪೆಗೆ ಪಾತ್ರರಾಗಿ.
ಎಂ.ಕೆ. ಬಕ್ಕಪ್ಪ, ಸಹಕಾರ್ಯದರ್ಶಿ
ಶ್ರೀ ಶಿವಯೋಗಾಶ್ರಮ ಟ್ರಸ್ಟ್,
ದಾವಣಗೆರೆ. (ರಿ.) 99162 42588