ಬಾಗಿಲು ಮುಚ್ಚಿಕೊಂಡೇ ಹೆಚ್ಚಿನ ದರಕ್ಕೆ ವಸ್ತುಗಳ ಮಾರಾಟ
ವೀಕೆಂಡ್ ಕರ್ಫ್ಯೂ ನಂತರ ನಗರದಲ್ಲಿ ಜನರ ಓಟಾಟ ಹೆಚ್ಚಳ
ದಾವಣಗೆರೆ, ಏ.27- ವಾರಾಂತ್ಯದ ಕರ್ಫ್ಯೂಗೆ ಸ್ಪಂದಿಸಿದ್ದ ದೇವನಗರಿಯಲ್ಲಿ ಸೋಮವಾರ ಮುಂಜಾನೆ ವ್ಯಾಪಾರ ವಹಿವಾಟು ಮತ್ತೆ ಗರಿಗೆದರಿ, ಸಹಜ ಸ್ಥಿತಿಗೆ ಮರಳಿತ್ತು.
ಕೊರೊನಾ ಮಾರ್ಗಸೂಚಿಯಲ್ಲಿ ವ್ಯಾಪಾರ ನಡೆಸಲು ಅನುಮತಿ ಇದ್ದ ಕೃಷಿಗೆ ಸಂಬಂಧಿಸಿದ ಅಂಗಡಿಗಳು, ಔಷಧಿ ಅಂಗಡಿಗಳು, ಬೇಕರಿಗಳು, ದಿನಸಿ ಅಂಗಡಿಗಳು ಬಾಗಿಲು ತೆರೆದಿದ್ದವು. ಬೆಳ್ಳಿ-ಬಂಗಾರದ ಅಂಗಡಿ, ಬಟ್ಟೆ ಅಂಗಡಿಗಳು, ಚಪ್ಪಲಿ ಅಂಗಡಿ ಸೇರಿದಂತೆ ಮತ್ತಿತರೆ ಅಂಗಡಿಗಳು ಮುಚ್ಚಲ್ಪಟ್ಟಿದ್ದವು.
ಆದರೆ ಕೆಲವು ಮೊಬೈಲ್ ಅಂಗಡಿಗಳು ಅರ್ಧ ಬಾಗಿಲು ಮುಚ್ಚಿಕೊಂಡು ವ್ಯಾಪಾರ ನಡೆಸಿದರೆ, ಮತ್ತೆ ಕೆಲವರು ಪೂರ್ಣ ಬಾಗಿಲು ಮುಚ್ಚಿದ್ದರೂ ಹೊರಗಡೆ ಸಿಬ್ಬಂದಿಗಳಿದ್ದರು. ಗ್ರಾಹಕರಿಗೆ ಬೇಕಾದ ಮೊಬೈಲ್, ಚಾರ್ಜರ್, ಕೇಬಲ್ ಮುಂತಾದ ಬಿಡಿ ಭಾಗಗಳಿಗೆ ದುಪ್ಪಟ್ಟು ಹಣಕ್ಕೆ ಮೊದಲೇ ಡಿಮ್ಯಾಂಡ್ ಮಾಡಿ. ನಂತರ ಒಳ ಹೊಕ್ಕು ಸಾಮಗ್ರಿ ನೀಡುತ್ತಿದ್ದರು. ಚೌಕಾಸಿಗೆ ಆಸ್ಪದವಿರಲಿಲ್ಲ.
ಕೆಲವೆಡೆ ಬಟ್ಟೆ ಹಾಗೂ ಚಪ್ಪಲಿ ಅಂಗಡಿಗಳಲ್ಲಿಯೂ ಅರ್ಧ ಬಾಗಿಲು ತೆರೆದು ವಹಿವಾಟು ನಡೆಯಿತು.
ಮತ್ತೆ ಸಂಕಷ್ಟದಲ್ಲಿ ಬಡ ಜನತೆ
ಮಧ್ಯಾಹ್ನದ ವೇಳೆಗೆ ಮಂಗಳವಾರ ಸಂಜೆಯಿಂದ ಮತ್ತೆ 14 ದಿನಗಳ ಕಾಲ ಕರ್ಫ್ಯೂ ಮುಂದುವರೆ ಯಲಿದೆ ಎಂಬ ಸುದ್ದಿ ಕೇಳಿದ ಜನತೆ ಮತ್ತೆ ಆತಂಕಕ್ಕೀಡಾದರು.
ಲಾಕ್ಡೌನ್ ನಿಂದ ನೆಲಕಚ್ಚಿದ್ದ ವ್ಯಾಪಾರ-ವಹಿ ವಾಟು ಈಗಷ್ಟೇ ಚೇತರಿಕೆ ಕಂಡಿದ್ದವು. ಮೂರ್ನಾಲ್ಕು ತಿಂಗಳುಗಳ ಕಾಲ ಕೆಲಸವಿಲ್ಲದವರು ದುಡಿಮೆ ಗೊಂದು ಮಾರ್ಗ ಕಂಡುಕೊಂಡಿದ್ದರು. ಆದರೆ ಇದೀಗ ಎರಡನೇ ಅಲೆ ಹೆಚ್ಚಾದ ಕಾರಣ ಮತ್ತೆ ಕರ್ಫ್ಯೂ ವಿಧಿಸಿರುವುದು ಬಡ ಹಾಗೂ ಮಧ್ಯಮ ವರ್ಗದ ಜನತೆಯನ್ನು ಚಿಂತೆಗೀಡು ಮಾಡಿದೆ.
ಸಾಲ ಮಾಡಿ ಸ್ವಂತ ಉದ್ಯಮ ಮಾಡುತ್ತಿರುವವರು, ಮಳಿಗೆ ಬಾಡಿಗೆ ಕಟ್ಟಿ ವ್ಯಾಪಾರ ಮಾಡುತ್ತಿದ್ದವರು ಮತ್ತೆ ಸಂಕಷ್ಟ ಅನುಭವಿಸುವಂತಾಗಿದೆ. ಬಟ್ಟೆ ಅಂಗಡಿ, ಬಂಗಾರದ ಅಂಗಡಿಗಳಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರು ಮತ್ತೆ ಕೆಲಸ ಅಥವಾ ವೇತನ ಇಲ್ಲದೆ ಜೀವನ ಸಾಗಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಮಂಡಿಪೇಟೆ, ಅಶೋಕ ರಸ್ತೆ, ಹದಡಿ ರಸ್ತೆ ಗಡಿಯಾರ ಕಂಬ ಮುಂತಾದ ಪ್ರಮುಖ ರಸ್ತೆಗಳಲ್ಲಿನ ವಾಣಿಜ್ಯ ಮಳಿಗೆಗಳು ಮಾತ್ರ ಮಾರ್ಗಸೂಚಿಗೆ ಸೀಮಿತವಾಗಿದ್ದವು. ಬಡಾವಣೆಗಳ ಒಳಗಡೆ ಎಲ್ಲಾ ಬಗೆಯ ಅಂಗಡಿಗಳೂ ತೆರೆದಿದ್ದವು.
ಮುಖ್ಯ ರಸ್ತೆಗಳಲ್ಲಿ ಅನೇಕ ವ್ಯಾಪಾರಿಗಳು ಮಳಿಗೆ ತೆರೆಯಬೇಕೋ, ಬೇಡವೋ ಎಂಬ ಜಿಜ್ಞಾಸೆಯಲ್ಲಿದ್ದರು. ಯಾರಾದರೂ ಬಾಗಿಲು ಮುಚ್ಚಿಸಲು ಬಂದರೆ ನೋಡಿಕೊಳ್ಳೋಣ ಎಂದು ವ್ಯಾಪಾರ ಆರಂಭಿಸಿದ್ದ ಮಳೆಗೆಗಳನ್ನು ಪಾಲಿಕೆ ಸಿಬ್ಬಂದಿಗಳು ವೀಡಿಯೋ ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗುತ್ತಿತ್ತು. ಸಂಜೆ ವೇಳೆಯಂತು ವೃತ್ತ ಹಾಗೂ ರಸ್ತೆಗಳಲ್ಲಿ ಜನರ ಓಟಾಟ ಎಂದಿಗಿಂತ ಹೆಚ್ಚಾಗಿತ್ತು.
ಮಂಗಳವಾರ ರಾತ್ರಿಯಿಂದ ಕೋವಿಡ್ ಕರ್ಫ್ಯೂ ವಿಧಿಸಿ, ಬೆಳಿಗ್ಗೆ 6ರಿಂದ 10ರವರೆಗೆ ಮಾತ್ರ ತರಕಾರಿ, ದಿನಸಿ ಇತರೆ ಮಾರಾಟಕ್ಕೆ ಅವಕಾಶ ನೀಡಿರುವುದರಿಂದ ಮಾರಾಟಗಾರರು ಆ ಸಮಯದಲ್ಲಿ ಅಗತ್ಯ ವಸ್ತುಗಳನ್ನು ತರಬೇಕೇ ಅಥವಾ ಮಾರಾಟ ಮಾಡಬೇಕೇ ಎಂಬ ಜಿಜ್ಞಾಸೆಯಲ್ಲಿದ್ದಾರೆ.
ಆಪೇ ಆಟೋಗಳ ಕಾರುಬಾರು: ಕಾನೂನು, ಮಾರ್ಗಸೂಚಿ ನಮಗೆ ಅನ್ವಯಿಸುವುದೇ ಇಲ್ಲ ಎಂಬಂತೆ ಆಪೇ ಆಟೋಗಳು ಜನರನ್ನು ತುಂಬಿಕೊಂಡು ಸಂಚರಿಸುತ್ತಿದ್ದವು. ಮಾಸ್ಕ್, ಹೆಲ್ಮೆಟ್ ಇಲ್ಲದವರಿಗೆ ದಂಡ ವಿಧಿಸುತ್ತಿದ್ದ ಪೊಲೀಸರು ಆಟೋಗಳನ್ನು ಕಂಡೂ ಕಾಣದಂತಿದ್ದರು. ಸಂಜೆಯಂತೂ ಒಂದು ಆಪೇ ಆಟೋದಲ್ಲಿ 10 ರಿಂದ 12ಕ್ಕೂ ಹೆಚ್ಚು ಜನರನ್ನು ತುಂಬಿಕೊಂಡು ತೆರಳುತ್ತಿದ್ದರು.