ದಾವಣಗೆರೆ, ಏ. 26- ಕೋವಿಡ್ ರೋಗವನ್ನು ಬೇಗ ಪತ್ತೆ ಹಚ್ಚಿದಲ್ಲಿ, ರೋಗಿಯ ಮರಣ ಸಾಧ್ಯತೆಯನ್ನು ಕಡಿಮೆಗೊಳಿಸಬಹುದು. ತಡವಾಗಿ ಆಸ್ಪತ್ರೆಗೆ ದಾಖಲಾಗುವವರಲ್ಲಿಯೇ ಹೆಚ್ಚಿನ ಮರಣ ಪ್ರಕರಣಗಳು ವರದಿಯಾಗಿದ್ದು, ಹೀಗಾಗಿ ರೋಗ ಲಕ್ಷಣ ಕಂಡುಬಂದಲ್ಲಿ ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು, ತಜ್ಞ ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆ ಪಡೆಯಲು ಮುಂದಾಗಬೇಕು ಎಂದು ಬಹುತೇಕ ತಜ್ಞ ವೈದ್ಯರು ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಕೋವಿಡ್ ಜಿಲ್ಲಾ ತಜ್ಞ ವೈದ್ಯರ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ತಜ್ಞ ವೈದ್ಯರು, ಜಿಲ್ಲೆಯಲ್ಲಿ ಕೋವಿಡ್‍ನಿಂದ ಸಂಭವಿಸುವ ಮರಣ ಪ್ರಕರಣಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಬರುವ 15 ದಿನಗಳಲ್ಲಿ ಕೋವಿಡ್ ಪ್ರಕರಣಗಳು ಎಷ್ಟಾಗಬಹುದು. ಇದಕ್ಕಾಗಿ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ತಜ್ಞ ವೈದ್ಯರ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಕೋವಿಡ್ 2ನೇ ಅಲೆಯಲ್ಲಿ ರೋಗಲಕ್ಷಣಗಳೂ ಕೂಡ ಕೆಲವು ರೋಗಿಗಳನ್ನು ಭಿನ್ನವಾಗಿ ಕಂಡುಬಂದಿವೆ. ಸಾಮಾನ್ಯವಾಗಿ ಜ್ವರ, ನೆಗಡಿ, ಕೆಮ್ಮು ಮುಂತಾದ ರೋಗಲಕ್ಷಣಗಳು ಕೋವಿಡ್‍ನ ಆರಂಭಿಕ ಹಂತದಲ್ಲಿ ಕಂಡುಬಂದಿತ್ತು. ಆದರೆ ಇತ್ತೀಚಿನ ಪ್ರಕರಣಗಳನ್ನು ಗಮನಿಸಿದಾಗ, ಜ್ವರ ಇಲ್ಲದಂತಹ ಪ್ರಕರಣಗಳು, ವಾಂತಿಬೇಧಿ, ಕಣ್ಣು ಕೆಂಪಾಗುವುದು, ತಲೆನೋವು, ಮೈಕೈನೋವು ರೋಗ ಲಕ್ಷಣಗಳು ಇರುವುದು ಕಂಡುಬಂದಿದೆ.
ಸಾರ್ವಜನಿಕರು ರೋಗ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಆರ್‍ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳಬೇಕು, ಸೋಂಕು ದೃಢಪಟ್ಟಲ್ಲಿ ಆತಂಕಕ್ಕೆ ಒಳಗಾಗದೆ ತಜ್ಞ ವೈದ್ಯರ ಶಿಫಾರಸ್ಸಿನಂತೆ ಚಿಕಿತ್ಸೆ ಪಡೆದುಕೊಳ್ಳಬೇಕು. ಬೇಗ ರೋಗ ಪತ್ತೆಯಾದಲ್ಲಿ, ಚಿಕಿತ್ಸೆ ಪಡೆದು ಬೇಗ ಗುಣಮುಖರಾಗಬಹುದು. ಆದರೆ ರೋಗ ಪತ್ತೆ ಮಾಡಿಸಿಕೊಳ್ಳದೆ, ಸೋಂಕು ಉಲ್ಬಣಗೊಂಡು, ಶ್ವಾಸಕೋಶದಲ್ಲಿ ಸೋಂಕು ತೀವ್ರಗೊಂಡು, ತಡವಾಗಿ ಆಸ್ಪತ್ರೆಗೆ ಬರುವುದು ರೋಗಿಗಳ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಸಾಮಾನ್ಯವಾಗಿ ಕೋವಿಡ್‍ನಿಂದ ಮರಣ ಪ್ರಕರಣಗಳನ್ನು ವಿಶ್ಲೇಷಿಸಿದಾಗ, ತಡವಾಗಿ ಆಸ್ಪತ್ರೆಗೆ ಬಂದವರಲ್ಲೇ ಹೆಚ್ಚಿನ ಮರಣ ಸಂಭವಿಸಿದೆ ಎಂದು ತಜ್ಞ ವೈದ್ಯರು ಹೇಳಿದರು.
ರೆಮ್ಡೆಸಿವಿರ್ ಔಷಧ ದುರ್ಬಳಕೆಗೆ ಕಡಿವಾಣ
ಜಿಲ್ಲೆಯಲ್ಲಿ ರೆಮ್ಡೆಸಿವಿರ್ ಚುಚ್ಚುಮದ್ದು ಅಕ್ರಮ ಬಳಕೆಗೆ ಕಡಿವಾಣ ಹಾಕಲಾಗುತ್ತಿದ್ದು, ಈಗಾಗಲೇ ಅಕ್ರಮ ಎಸಗಿದ 2 ಪ್ರಕರಣಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ರೆಮ್ಡೆಸಿವಿರ್ ಚುಚ್ಚುಮದ್ದನ್ನು ಕೋವಿಡ್ ನಿಗದಿತ ಆಸ್ಪತ್ರೆಯಲ್ಲಿ, ಅಗತ್ಯವಿರುವ ರೋಗಿಗೆ ಮಾತ್ರ ನೀಡಬೇಕು. ಕೋವಿಡ್ ಸೋಂಕಿತ ಎಲ್ಲ ರೋಗಿಗಳಿಗೂ ನೀಡಬಾರದು. ರೆಮ್ಡೆಸಿವಿರ್ ಔಷಧಿಯನ್ನು ಬೇಕಾಬಿಟ್ಟಿಯಾಗಿ ಶಿಫಾರಸ್ಸು ಮಾಡುವವರ ವಿರುದ್ಧ ಕೆಪಿಎಂಇ ಕಾಯ್ದೆ ಅನ್ವಯ ವೈದ್ಯಕೀಯ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ವಿದೇಶಿ ಪ್ರಯಾಣಿಕರಿಗೆ ಖಾಸಗಿಯಲ್ಲಿ ಟೆಸ್ಟ್
ವಿದೇಶಕ್ಕೆ ತೆರಳಬಯಸುವವರು ಅಥವಾ ಬೇರೆ ಬೇರೆ ರಾಜ್ಯಗಳಿಗೆ ಪ್ರಯಾಣ ಬೆಳೆಸುವವರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಬಯಸಿದಲ್ಲಿ, ಅಂತಹವರಿಗೆ ಸರ್ಕಾರಿ ಆಸ್ಪತ್ರೆ, ಸಂಸ್ಥೆಗಳಲ್ಲಿ ಕೋವಿಡ್ ಟೆಸ್ಟ್ ಮಾಡಬಾರದು. ಅಂತಹವರು ಅಗತ್ಯವೆನಿಸಿದಲ್ಲಿ ನಿಗದಿತ ಖಾಸಗಿ ಆಸ್ಪತ್ರೆ, ಪ್ರಯೋಗಾಲಯಗಳಲ್ಲಿ ಟೆಸ್ಟ್ ಮಾಡಿಸಿಕೊಳ್ಳಲಿ. ಕೋವಿಡ್ ಟೆಸ್ಟ್ ಅನ್ನು ಅನಗತ್ಯವಾಗಿ ಎಲ್ಲರಿಗೂ ಮಾಡಬಾರದು. ರೋಗ ಲಕ್ಷಣಗಳು ಕಂಡುಬಂದವರಿಗೆ, ಸೋಂಕಿತರ ಪ್ರಾಥಮಿಕ ಸಂಪರ್ಕಿತರಿಗೆ ಹಾಗೂ ತಜ್ಞ ವೈದ್ಯರು ಶಿಫಾರಸ್ಸು ಮಾಡುವವರಿಗೆ ಮಾತ್ರ ಕೋವಿಡ್ ಟೆಸ್ಟ್ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೆಚ್ಚುವರಿ ಆಂಬ್ಯುಲೆನ್ಸ್ ಖರೀದಿಗೆ ಆದೇಶ : ಜಿಲ್ಲೆಯಲ್ಲಿ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳು ಆಂಬ್ಯುಲೆನ್ಸ್‍ಗಳನ್ನು ಬೇಕಾಬಿಟ್ಟಿಯಾಗಿ ಬಳಸಬಾರದು. ತಜ್ಞ ವೈದ್ಯರ ಸಲಹಾ ಸಮಿತಿಯ ಶಿಫಾರಸಿನಂತೆ, ಮುಂಬರುವ ದಿನಗಳಲ್ಲಿ ಕೋವಿಡ್ ಪ್ರಕರಣಗಳ ಸಮರ್ಪಕ ನಿರ್ವಹಣೆಗಾಗಿ ಜಿಲ್ಲೆಗೆ 1 ಅಡ್ವಾನ್ಸ್ಡ್ ಲೈಫ್ ಸಪೋರ್ಟ್ ಕೇರ್ ಸಿಸ್ಟಂ ಹೊಂದಿರುವ ಆಂಬ್ಯುಲೆನ್ಸ್, 2- ಬೇಸಿಕ್ ಲೈಫ್ ಸಪೋರ್ಟ್ ಸಿಸ್ಟಂ ಇರುವ ಆಂಬ್ಯುಲೆನ್ಸ್ ಹಾಗೂ ಪ್ರತಿ ತಾಲ್ಲೂಕಿಗೆ ಒಂದು ಲೈಫ್ ಸಪೋರ್ಟ್ ಸಿಸ್ಟಂ ಆಂಬ್ಯುಲೆನ್ಸ್ ಖರೀದಿಸಲು ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಏ. 27 ರಿಂದ ಮೋತಿವೀರಪ್ಪ ಕಾಲೇಜಿನಲ್ಲಿ ಲಸಿಕೆ : ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಇದುವರೆಗೂ ಕೋವಿಡ್ ನಿರೋಧಕ ಲಸಿಕೆ ನೀಡಲಾಗುತ್ತಿತ್ತು. ಆದರೆ ಏ. 27 ರಿಂದ ಜಿಲ್ಲಾ ಆಸ್ಪತ್ರೆ ಸಮೀಪದ ಮೋತಿ ವೀರಪ್ಪ ಕಾಲೇಜಿನಲ್ಲಿ ಕೋವಿಡ್ ಸೇರಿದಂತೆ ಎಲ್ಲ ಬಗೆಯ ಲಸಿಕೆಗಳನ್ನು ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಶೇ. 75 ಹಾಸಿಗೆಗಳು ಕೋವಿಡ್‍ಗೆ ಮೀಸಲು : ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು, ಮೆಡಿಕಲ್ ಕಾಲೇಜುಗಳು ತಮ್ಮ ಹಾಸಿಗೆ ಸಾಮರ್ಥ್ಯದಲ್ಲಿ ಶೇ. 75 ರಷ್ಟು ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದು, ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುವ ಡಿಹೆಚ್‍ಒ ಅವರು, ಎಲ್ಲ ಆಸ್ಪತ್ರೆಗಳು ಸರ್ಕಾರದ ಸೂಚನೆ ಹಾಗೂ ಕೋವಿಡ್‍ನ ಎಲ್ಲ ಪ್ರೋಟೋಕಾಲನ್ನು ಪಾಲನೆ ಮಾಡುತ್ತಿರುವ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಡಿಸಿ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಸ್ಪತ್ರೆ ಸರ್ಜನ್ ಡಾ. ಜಯಪ್ರಕಾಶ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್, ಡಿಹೆಚ್‍ಒ ಡಾ. ನಾಗರಾಜ್, ತಜ್ಞ ವೈದ್ಯರ ಸಮಿತಿ ಸದಸ್ಯರುಗಳಾದ ಡಾ. ರವಿ, ಡಾ. ಬಿ.ಎಸ್. ಪ್ರಸಾದ್, ಡಾ. ಶಿವಕುಮಾರ್, ಡಾ. ಅರುಣ್‍ಕುಮಾರ್ ಸೇರಿದಂತೆ ವಿವಿಧ ತಜ್ಞ ವೈದ್ಯರು ಪಾಲ್ಗೊಂಡಿದ್ದರು.