ಸಾಮಾಜಿಕ ಸೇವಾ ಚಟುವಟಿಕೆಗಳಿಂದಾಗಿ ದಾನ ಮಾಡಲು ಪ್ರೇರಕ ಶಕ್ತಿಯಾಗಿ ಲಯನ್ಸ್ ಸಂಸ್ಥೆಯು ಅನೇಕರನ್ನು ದಾನಿಗಳನ್ನಾಗಿ ರೂಪಿಸಿದೆ.
– ಡಾ. ಬಿ.ಎಸ್. ನಾಗಪ್ರಕಾಶ್, ಲಯನ್ಸ್ ಜಿಲ್ಲಾ ವಿಶ್ರಾಂತ ರಾಜ್ಯಪಾಲರು
ದಾವಣಗೆರೆ,ಅ.20- ದಾನ-ಧರ್ಮಗಳ ಮೂಲಕ ಸಮಾಜದ ವಿವಿಧ ಸ್ತರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಲಯನ್ಸ್ ಸಂಸ್ಥೆಯು ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ಜಿಲ್ಲಾ ಲಯನ್ಸ್ 317ಸಿ ರಾಜ್ಯಪಾಲ ವಿಶ್ವನಾಥ ಶೆಟ್ಟಿ ಅವರು ತಿಳಿಸಿದರು.
ನಗರದ ಲಯನ್ಸ್ ಭವನದಲ್ಲಿ ಕಳೆದ ವಾರ ನಡೆದ ಲಯನ್ಸ್ ಪ್ರಾಂತ್ಯ 9ರ ಪ್ರಾಂತೀಯ ಮಟ್ಟದ ಲಯನ್ಸ್ ಪದಾಧಿಕಾರಿಗಳ ತರಬೇತಿ ಶಿಬಿರವನ್ನು ಜ್ಯೋತಿ ಬೆಳಗಿಸು ವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜಕ್ಕೆ ಸೇವೆ ಸಲ್ಲಿಸುವುದರ ಜೆೊತೆ-ಜೊತೆಗೆ, ತನ್ನ ಸದಸ್ಯರನ್ನು ಸಮಾಜದ ಉನ್ನತ ಸ್ಥಾನ ಮಾನಕ್ಕೆ ಕೊಂಡೊಯ್ದು ಭವಿಷ್ಯದ ನಾಯಕರನ್ನಾಗಿ ರೂಪಿಸುವ ಕಾರ್ಯವನ್ನೂ ಲಯನ್ಸ್ ಸಂಸ್ಥೆ ಮಾಡುತ್ತಿದೆ ಎಂದು ಉದಾಹರಣೆಗಳೊಂದಿಗೆ ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಲಯನ್ಸ್ ಉಪ ರಾಜ್ಯಪಾಲರುಗಳಾದ ಕೆ.ಸಿ. ವೀರಭದ್ರ ಹಾಗೂ ಡಾ. ನೇರಿ ಕರ್ನಿಯೋ ಅವರುಗಳು ಮಾತನಾಡಿ, ಲಯನ್ಸ್ ಸಂಸ್ಥೆಯ ಸಾಮಾಜಿಕ ಸೇವೆಯಿಂದಾಗಿ ವಿಶ್ವದ ಯಾವುದೇ ಮೂಲೆಗೆ ಹೋದರೂ ಲಯನ್ಸ್ ಸದಸ್ಯರಿಗೆ ಆತ್ಮೀಯ ಗೌರವ ಸಿಗುತ್ತಿದೆ ಎಂದು ತಮ್ಮ ಅನುಭವಗಳನ್ನು ಸಭಿಕರೊಂದಿಗೆ ಹಂಚಿಕೊಂಡರು.
ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಹಿರಿಯ ವೈದ್ಯರೂ, ಲಯನ್ಸ್ ಪ್ರಾಂತ್ಯ 9ರ ಮಾರ್ಗದರ್ಶಕರೂ ಆದ ಡಾ. ಬಿ.ಎಸ್. ನಾಗಪ್ರಕಾಶ್ ಮಾತನಾಡಿ, ಲಯನ್ಸ್ ಸಂಸ್ಥೆಯು ಮಾಡುತ್ತಿರುವ ಸಾಮಾಜಿಕ ಸೇವಾ ಚಟುವಟಿಕೆಗಳಿಂದಾಗಿ ದಾನ ಮಾಡಲು ಪ್ರೇರಕ ಶಕ್ತಿಯಾಗಿ ಅನೇಕ ದಾನಿಗಳನ್ನಾಗಿ ರೂಪಿಸಿದ ಉದಾಹರಣಗಳಿವೆ ಎಂದು ವಿವರಿಸಿದರು.
ಜಿಲ್ಲಾ ಲಯನ್ಸ್ ಮಾಜಿ ರಾಜ್ಯಪಾಲ ಹೆಚ್.ಎನ್. ಶಿವಕುಮಾರ್, ಜಿಲ್ಲಾ ಲಯನ್ಸ್ ಎಲ್ ಸಿಐ ಮುಖ್ಯ ಸಂಪರ್ಕಾಧಿಕಾರಿ ಒ.ಜಿ. ರುದ್ರೇಗೌಡ, ಜಿಲ್ಲಾ ಲಯನ್ಸ್ ಜಿಎಸ್ ಟಿ ಸಂಪರ್ಕಾಧಿಕಾರಿ ಎಂ.ಕೆ.ಭಟ್ ಅವರುಗಳು ವಿವಿಧ ವಿಷಯಗಳ ಕುರಿತಂತೆ ಉಪನ್ಯಾಸ ನೀಡಿದರು.
ದಾವಣಗೆರೆ ಲಯನ್ಸ್ ಕ್ಲಬ್ ಆತಿಥ್ಯದಲ್ಲಿ ಏರ್ಪಾಡಾಗಿದ್ದ ಈ ಕಾರ್ಯಗಾರದ ಅಧ್ಯಕ್ಷತೆಯನ್ನು ಲಯನ್ಸ್ ಪ್ರಾಂತ್ಯ 9ರ ಅಧ್ಯಕ್ಷ ಇ.ಎಂ. ಮಂಜುನಾಥ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಲಯನ್ಸ್ ರಕ್ತ ಕೇಂದ್ರದ ಸಹಯೋಗದೊಂದಿಗೆ ಆಯೋಜನೆಗೊಂಡಿದ್ದ ರಕ್ತದಾನ ಶಿಬಿರವನ್ನು ಲಯನ್ಸ್ ಪ್ರಾಂತ್ಯ 9ರ ಅಧ್ಯಕ್ಷ ಇ.ಎಂ. ಮಂಜುನಾಥ ಅವರು ರಕ್ತದಾನ ಮಾಡುವುದರ ಮೂಲಕ ಉದ್ಘಾಟಿಸಿದರು. ಲಯನ್ಸ್ ವಲಯ 2ರ ಕಾರ್ಯದರ್ಶಿ ಎನ್.ಹೆಚ್. ಮೌನೇಶ್ವರ ಮತ್ತು ತಂಡದವರು ರಕ್ತದಾನ ಶಿಬಿರವನ್ನು ನಡೆಸಿಕೊಟ್ಟರು.
ಲಯನ್ಸ್ ಪ್ರಾಂತ್ಯ 9ರ ಸಲಹೆಗಾರರಾದ ಟಿ.ಎಂ. ಪಂಚಾಕ್ಷರಯ್ಯ, ಮಾಜಿ ಶಾಸಕರೂ ಆಗಿರುವ ಪ್ರಾಂ ತೀಯ ಎಲ್‌ಸಿಐಎಫ್ ಛೇರ್ಮನ್ ಟಿ.ಹೆಚ್. ಬಸವ ರಾಜಪ್ಪ, ಲಯನ್ಸ್ ಪ್ರಾಂತ್ಯ 9ರ ವಲಯಾಧ್ಯಕ್ಷರುಗಳಾದ ಎಸ್. ವೆಂಕಟಾಚಲಂ, ಡಾ. ಜಿ.ಎನ್.ಹೆಚ್. ಕುಮಾರ್, ಎಂ.ಬಿ. ಶಿವಕುಮಾರ್, ವಲಯ ಕಾರ್ಯದರ್ಶಿಗಳಾದ ಸಿ.ಆರ್. ಶಿವಾನಂದ್, ಎನ್.ಹೆಚ್. ಮೌನೇಶ್ವರ, ಆರ್.ಎಸ್. ರಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕರೂ ಆಗಿರುವ ದಾವಣಗೆರೆ ಲಯನ್ಸ್ ಕ್ಲಬ್ ನಿರ್ದೇಶಕ ಅಜಯ್ ನಾರಾಯಣ ಅವರ ಪ್ರಾರ್ಥನೆಯ ನಂತರ ದಾವಣಗೆರೆ ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್. ಓಂಕಾರಪ್ಪ ಸ್ವಾಗತಿಸಿದರು. ಜಿಲ್ಲಾ ಲಯನ್ಸ್ ಛೇರ್ಮನ್ ಬೆಳ್ಳೂಡಿ ಶಿವಕುಮಾರ್ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಪ್ರಾಂತೀಯ ಜಿಎಸ್‌ಟಿ ಕಾರ್ಯದರ್ಶಿ ಮಹಾಂತೇಶ್ ವಿ. ಒಣರೊಟ್ಟಿ ಅವರು ಧ್ವಜವಂದನೆ ನೆರವೇರಿಸಿದರು. ದಾವಣಗೆರೆ ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೋರಿ ಶಿವಕುಮಾರ್ ವಂದಿಸಿದರು.