ಸರ್ಕಾರಕ್ಕೆ ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಅಧ್ಯಕ್ಷ ಜಿ. ಹನುಮಂತಪ್ಪ ಆಗ್ರಹ
ದಾವಣಗೆರೆ, ಅ.20- ನಾವು ಸರ್ಕಾರದ ಆಸ್ತಿ ಕೇಳುತ್ತಿಲ್ಲ. ಪಿಂಚಣಿ ಯೋಜನೆ ನಮ್ಮ ಮೂಲ ಭೂತ ಹಕ್ಕು. ಇದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗಲೀ, ಕಾನೂನು ತೊಡಕಾಗಲೀ ಇಲ್ಲ. ಆದ್ದರಿಂದ ಕೂಡಲೇ ಪಿಂಚಣಿ ಯೋಜನೆ ಜಾರಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಅಧ್ಯಕ್ಷ ಜಿ. ಹನುಮಂತಪ್ಪ ಸರ್ಕಾರಕ್ಕೆ ಒತ್ತಾಯಿಸಿದರು.
ನಗರದ ಗುರುಭವನದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪಿಂಚಣಿ ಹೋರಾಟದ ಕುರಿತು ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
2006ರ ಪೂರ್ವದಿಂದ ಸೇವೆ ಸಲ್ಲಿಸಿದವರಿಗೆ ನಿಶ್ಚಿತ ಮತ್ತು ನಂತರದಿಂದ ಸೇವೆ ಸಲ್ಲಿಸುತ್ತಿರುವ ಅನುದಾನಿತ ಶಾಲಾ-ಕಾಲೇಜುಗಳ ನೌಕರರಿಗೆ ನೂತನ ಪಿಂಚಣಿ ಯೋಜನೆ ಜಾರಿ ಮಾಡುವಂತೆ ಕಳೆದ 10 ವರ್ಷಗಳಿಂದ ಸಂಘಟನೆಯ ಮುಖೇನ ಹೋರಾಟ ನಡೆಸುತ್ತಲೇ ಬರುತ್ತಿದ್ದೇವೆ. ಆದರೆ, ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪಿಂಚಣಿ ಇಲ್ಲದಿದ್ದರೆ ನಿವೃತ್ತಿಯ ನಂತರ ಜೀವನಕ್ಕಾಗಿ ಕಷ್ಟಪಡುವಂತಾಗುತ್ತದೆ. ಪಿಂಚಣಿ ಕೇಳುವುದು ನಮ್ಮ ಮೂಲಭೂತ ಹಕ್ಕಾಗಿರುವುದರಿಂದ ಸರ್ಕಾರ ನಮ್ಮ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖಾಸಗಿ ಸಂಸ್ಥೆಗಳ ಹೋರಾಟಗಾರ ಜಾಲಮಂಗಲ ನಾಗರಾಜ್, ನಿಶ್ಚಿತ ಮತ್ತು ನೂತನ ಪಿಂಚಣಿ ಜಾರಿಗಾಗಿ ಪಿಂಚಣಿ ವಂಚಿತ ನೌಕರರೆಲ್ಲರೂ ಒಗ್ಗಟ್ಟಿನಿಂದ ಸಂಘಟಿತರಾಗಿ ಮತ್ತಷ್ಟು ಬಲಗೊಳ್ಳಬೇಕು. ಆ ಮುಖೇನ ಸರ್ಕಾರಕ್ಕೆ ನಮ್ಮ ಬಲದ ಶಕ್ತಿ ಪ್ರದರ್ಶಿಸುವ ಅಗತ್ಯವಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯ ಸಂಚಾಲಕ ವಿರುಪಾಕ್ಷಪ್ಪ ಮಂತ್ರೋಡಿ ಅಧ್ಯಕ್ಷತೆ ವಹಿಸಿದ್ದರು. ಬೋಧಕೇತರ ಸಂಘದ ರಾಜ್ಯಾಧ್ಯಕ್ಷ ಅರುಣಕುಮಾರ್, ಮುತ್ತುರಾಜ್ ಮತ್ತಿಕೊಪ್ಪ, ಬಿ.ಜಿ. ಕೊರಗ, ಮಂಜುನಾಥ್ ಭತ್ತದ, ಕೆ. ಈಶಾನಾಯ್ಕ್, ಮಂಜಾನಾಯ್ಕ್, ಬಿ.ಐ. ಹುಗ್ಗಿ, ಕೆ.ಸಿ. ಶ್ರೀನಿವಾಸಮೂರ್ತಿ, ಆರ್. ನಾಗೇಂದ್ರಪ್ಪ, ಗುರುಸಿದ್ದಲಿಂಗಸ್ವಾಮಿ, ಜಿ. ಹನುಮಂತಪ್ಪ ಸೇರಿದಂತೆ, ಇತರರು ಇದ್ದರು.
ಬಸವಲಿಂಗಪ್ಪ ಹುಗ್ಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಹೆಚ್. ಮಲ್ಲಮ್ಮನವರ್ ಸ್ವಾಗತಿಸಿದರು. ತಮ್ಮಣ್ಣ ಗೌಡರ್ ನಿರೂಪಿಸಿದರು. ಕುಲಕರ್ಣಿ ವಂದಿಸಿದರು.