ಮಾನ್ಯರೇ,
ದಾವಣಗೆರೆ ಮಹಾನಗರ ಪಾಲಿಕೆಯು ಮನೆ ಹಾಗೂ ನೀರಿನ ಕಂದಾಯ ಕಟ್ಟಲು ಶೇ.5 ತೆರಿಗೆ ವಿನಾಯಿತಿ ಅಂತ ಹೇಳಿ ದಿನಾಂಕ ನಿಗದಿ ಮಾಡಿತ್ತು. ಆದರೆ, ಜನರಿಂದ ಅಷ್ಟು ಸಮಯದ ಒಳಗೆ ಕಂದಾಯ ಕಟ್ಟಿಸಿಕೊಳ್ಳಲು ಸಾಧ್ಯವಾ ಎಂಬುದನ್ನು ಚಿಂತಿಸಲಿಲ್ಲ.
ಲಾಕ್‌ಡೌನ್ ತೆರವಾದ ಮರು ದಿನವೇ ಪಾಲಿಕೆ ಯಿಂದ ಕಂದಾಯ ವಸೂಲಿ ಶುರುವಾಯಿತು. ಆದರೆ, ಪಾಲಿಕೆ ಬಳಿ ಜನರು ಕ್ಯೂ ನಿಂತು ನಿಂತು ಸಾಕಾಗಿ ಪ್ರಶ್ನೆ ಕೇಳಿದ್ರೆ ಸರ್ವರ್ ಡೌನ್ ಇದೆ ಚಲನ್ ಕೊಡೋಕೆ ಆಗೋದಿಲ್ಲ ಎಂದು ಗಂಟೆಗಟ್ಟಲೆ ಕಾಯ್ದ ಜನಕ್ಕೆ, ಬೇಕಾಬಿಟ್ಟಿ ಉತ್ತರ ಕೊಟ್ಟು, ಅವರ ಶ್ರಮಕ್ಕೆ ಎಳ್ಳುಷ್ಟೂ ಮರ್ಯಾದೆ ಇಲ್ಲದೇ ವಾಪಸ್ ಕಳಿಸಿ ಬಿಟ್ಟರು.
ಇದೀಗ ಝೋನಲ್ ವೈಸ್ ಕಂದಾಯ ಕಟ್ಟಬೇಕು ಎಂದು ಹೇಳಲಾಗುತ್ತದೆ. ಆದರೆ ಜನರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ.
ಇದೀಗ ಮತ್ತೊಂದು ರಾಗ ಶುರುವಾಗಿದೆ. ಎಷ್ಟೆಷ್ಟು ಟ್ಯಾಕ್ಸ್ ಕಟ್ಟಬೇಕು ಅನ್ನೋ ಸ್ಲ್ಯಾಬನ್ನೇ ಪಾಲಿಕೆಯವರು ರೆಡಿ ಇಟ್ಟುಕೊಂಡಿಲ್ಲ. ದಿನಾಂಕ 29.6.2021 ರಿಂದ 3.7.2021 ರ ವರೆಗೂ ಎಷ್ಟು ಬಾರಿ ಹೋಗಿ ಕೇಳಿದರೂ ಹಲವಾರು ಬಡಾವಣೆ ಗಳು, ವಾರ್ಡ್‍ಗಳ ಕಂದಾಯ ಸ್ಲ್ಯಾಬ್ ತಯಾರಾಗಿಲ್ಲ.
ಜನರು ಪದೇ ಪದೇ ದುಡ್ಡು ಕಟ್ಟಲು ಹೋಗಿ ಕೆಲಸವಾಗದೆ ವಾಪಸ್ ಬಂದಿದದಾರೆ. ನಾನು ಕೂಡ ಈ ನೋವು ಅನುಭವಿಸಿದವಳೇ. ಜನರಿಗೆ ಕೂತುಕೊಳ್ಳಲು ಕುರ್ಚಿ ಇಲ್ಲ, ಕುಡಿಯಲು ನೀರಿನ ವ್ಯವಸ್ಥೆ ಇಲ್ಲ ಆದರೂ ಕಂದಾಯ ಮಾತ್ರ ಕಟ್ಟೋದು ತಪ್ಪಲ್ಲ.
ಜನತೆ ಏನಾದರೂ ಮಾಹಿತಿ ಕೇಳಿದರೆ ಸಿಬ್ಬಂದಿಗಳು ಮರ್ಯಾದೆ ನೀಡದೆ ಉಡಾಫೆ ಉತ್ತರ ನೀಡುತ್ತಾರೆ.
ಆಯುಕ್ತರು, ಉಪಾಯುಕ್ತರು ಛೇಂಬರ್‍ನಲ್ಲಿ ಇರೋದೇ ಇಲ್ಲ, ಈ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸಬೇಕಿದೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಅನ್ನೋ ಮೂಲ ಸಂವಿಧಾನ ಕರಡು ಪಾಲಿಕೆಯವರು ಮರೆತು ಬಿಟ್ಟಿದ್ದೀರಾ?
ದಯವಿಟ್ಟು ಮಂತ್ರಿಗಳು, ಸಂಸದರು ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ನಾಗರಿಕರಿಗಾಗಿ ಒಂದು ಸಹಾಯ ವಾಣಿಯನ್ನು ನಿರ್ಮಿಸಿ, ಅಷ್ಟೇ ಅಲ್ಲದೆ ಪ್ರತಿನಿತ್ಯ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಹೊಸ ಬದಲಾವಣೆ ಬಗ್ಗೆ ಮಾಹಿತಿಯನ್ನು ನೀಡಿ ಇದರಿಂದ ನಾಗರಿಕರಿಗೆ ಆಗುವ ತೊಂದರೆಯನ್ನು ತಡೆಯಬೇಕಾಗಿ ವಿನಂತಿ.
– ವಸುಂಧರಾ ಜಿ.ಸಿ., ವಕೀಲರು, ದಾವಣಗೆರೆ