ದಾವಣಗೆರೆ, ಜು.18- ಬೆಲೆ ಏರಿಕೆಯನ್ನು ವಿರೋಧಿಸಿ ಅಖಿಲ ಭಾರತ ಪ್ರತಿಭಟನಾ ದಿನದ ಅಂಗವಾಗಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾ ಸಮಿತಿಯಿಂದ ನಗರದ ಉಪವಿಭಾಗಾಧಿಕಾರಿ ಕಚೇರಿ ಆವರ ಣದಲ್ಲಿ ಮೊನ್ನೆ ಪ್ರತಿಭಟನೆ ನಡೆಸಲಾಯಿತು. ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಉಪವಿಭಾಗಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು.
ಪ್ರಸ್ತುತ ಇಡೀ ದೇಶವನ್ನು ವ್ಯಾಪಿಸಿರುವ ಆರ್ಥಿಕ ಬಿಕ್ಕಟ್ಟು ಮತ್ತು ಕೊರೋನಾ ಮಹಾಮಾರಿಯಿಂದಾಗಿ ಮಹಿಳೆಯರು ಹಾಗೂ ಮಕ್ಕಳನ್ನೊಳಗೊಂಡು ಇಡೀ ಜನಸಮೂಹ ಸಂಕಷ್ಟದಲ್ಲಿರುವ ಸಂದರ್ಭದಲ್ಲೂ ಎಲ್ಲಾ ಅಗತ್ಯ ವಸ್ತುಗಳ ತೀವ್ರವಾದ ಬೆಲೆ ಏರಿಕೆ ಜನ ಸಾಮಾನ್ಯರ ಬದುಕನ್ನು ಇನ್ನಷ್ಟು ಜರ್ಝರಿತ ಗೊಳಿಸುತ್ತಿದೆ. ಅಡುಗೆ ಅನಿಲ ದರವು ಕಳೆದ ಕೆಲವೇ ತಿಂಗಳಲ್ಲಿ 240 ರೂ. ದುಬಾರಿಯಾಗಿ 840 ರೂ. ಸಮೀಪ ಬಂದಿದೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭವನ್ನು ಬಳಸಿಕೊಂಡು ಸರ್ಕಾರ ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ಸ್ಥಗಿತಗೊಳಿಸಿದೆ. ಪೆಟ್ರೋಲ್, ಡೀಸೆಲ್ ದರ ಮಿತಿಮೀರುತ್ತಿದೆ. ಅಡುಗೆ ಎಣ್ಣೆ, ಬೇಳೆಕಾಳುಗಳು ತುಟ್ಟಿಯಾಗಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ದೇಶದಾದ್ಯಂತ ಅನೇಕ ಸಾಮಾಜಿಕ ಸಮಸ್ಯೆಗಳು ಹೆಚ್ಚುತ್ತಿದ್ದು ಧ್ವನಿ ಎತ್ತುವವರ ವಿರುದ್ಧ ಯುಎಪಿಎ ಹಾಗೂ ಇನ್ನಿತರೆ ಕರಾಳ ಕಾಯ್ದೆಗಳ ಮೂಲಕ ಹೋರಾಟಗಾರರು ಹಾಗೂ ಸಾಮಾಜಿಕ ಕಾಳಜಿಯುಳ್ಳ ವ್ಯಕ್ತಿಗಳ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಬಂಧಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಸಂದರ್ಭದಲ್ಲಿ ಅವರೆಲ್ಲರನ್ನೂ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷರಾದ ಜ್ಯೋತಿ ಕುಕ್ಕುವಾಡ, ಉಪಾಧ್ಯಕ್ಷ ರಾದ ಬನಶ್ರೀ, ಸಂಘಟನಾಕಾರರಾದ ಮಮತ, ಸರಸ್ವತಿ, ಪುಷ್ಪ, ಕಾವ್ಯ ಸೇರಿದಂತೆ, ಇನ್ನಿತರರು ಭಾಗವಹಿಸಿದ್ದರು.