`ವಿದ್ಯಾರ್ಥಿ ದೇವೋಭವ’ ಎಂದ ಲಿಂ. ಜಯದೇವ ಶ್ರೀ

ಶರಣ ಸಂಸ್ಕೃತಿ ಉತ್ಸವದಲ್ಲಿ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು

ಸಾಹಿತಿ ಡಾ.ಕೆ. ಮರುಳಸಿದ್ದಪ್ಪ ಅವರಿಗೆ `ಜಯದೇವ ಶ್ರೀ’ ಪ್ರಶಸ್ತಿ,  ಶ್ರೀಮತಿ ರೂಪಾ ಡಿ.ಮೌದ್ಗಿಲ್ ಅವರಿಗೆ `ಶೂನ್ಯಪೀಠ ಅಕ್ಕನಾಗಮ್ಮ’ಪ್ರಶಸ್ತಿ, ಬಸವರಾಜಸ್ವಾಮಿ ಅವರಿಗೆ `ಶೂನ್ಯ ಪೀಠ ಅಲ್ಲಮ’ ಪ್ರಶಸ್ತಿ, ಪ್ರೊ.ಹೆಚ್.ಲಿಂಗಪ್ಪ ಅವರಿಗೆ  `ಶೂನ್ಯಪೀಠ ಚನ್ನಬಸವ’ ಪ್ರಶಸ್ತಿ  ಪ್ರದಾನ

ಜಗದ್ಗುರು ಎಂದ ಮೇಲೆ ಎಲ್ಲಾ ಜಾತಿಗಳಿಗೆ ಗುರುವಾಗಿರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಮಠಾಧೀಶರು ಜಗದ್ಗುರುಗಳು ಎಂದು ಕರೆಯಿಸಿಕೊಂಡು ಕೇವಲ ಒಂದು ಜಾತಿ-ಉಪಜಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಅವರು ಜಗದ್ಗುರು ಎಂದು ಕರೆಯಿಸಿಕೊಳ್ಳುವುದನ್ನು ಕೈ ಬಿಡಬೇಕು ಎಂದು `ಜಯದೇವ ಶ್ರೀ’  ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಡಾ.ಕೆ. ಮರುಳಸಿದ್ದಪ್ಪ ಹೇಳಿದರು.

ದಾವಣಗೆರೆ, ಫೆ. 28 – ವಿದ್ಯಾರ್ಥಿ ದೇವೋಭವ ಎಂದ ಏಕೈಕ ಜಗದ್ಗುರು ಲಿಂ.ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮೀಜಿ ಎಂದು ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠದ ಶೂನ್ಯ ಪೀಠಾಧ್ಯಕ್ಷರಾದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ಶಿವಯೋಗಿ ಮಂದಿರದ ಆವರಣದಲ್ಲಿ ಭಾನುವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಲಿಂ. ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 64ನೇ ಸ್ಮರಣೋತ್ಸವ ಹಾಗೂ ಜಯದೇವ ಶ್ರೀ ಮತ್ತು ಶೂನ್ಯ ಪೀಠ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಶರಣರು ಆಶೀರ್ವಚನ ನೀಡಿದರು.

ಆಚಾರ್ಯ ದೇವೋಭವ ಎನ್ನುತ್ತಿದ್ದ ಕಾಲದಲ್ಲಿ ಆಚಾರ್ಯ ಪರಂಪರೆಯನ್ನು ಮೀರಿಸುವಂತೆ ಜಯದೇವ ಶ್ರೀಗಳು ಶೈಕ್ಷಣಿಕ ಕ್ರಾಂತಿ ಮಾಡಿದರು. 

ಧರ್ಮ ಪೀಠಗಳು ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಸೀಮಿತವಾ ಗಿದ್ದ ಸಂದರ್ಭದಲ್ಲಿ ಜಯದೇವ ಶ್ರೀಗಳು ಧಾರ್ಮಿಕ ನೇತಾರ ರಾಗಿ, ನಾಡಿನಾದ್ಯಂತ ಜಯದೇವ ಪ್ರಸಾದ ನಿಲಯಗಳನ್ನು ಸ್ಥಾಪಿಸುವ ಮೂಲಕ ಲಕ್ಷೋಪಲಕ್ಷ ವಿದ್ಯಾರ್ಥಿಗಳ ಬದುಕು ಕಟ್ಟಿಕೊಳ್ಳಲು ನೆರವಾದ ಧೀಮಂತ ಜಗದ್ಗುರು ಎಂದು ಬಣ್ಣಿಸಿದರು.

ಜಾತಿ-ಉಪಜಾತಿಗಳ ಹೆಸರಿನಲ್ಲಿ ಸಮಾಜ ವಿಭಜನೆ ಯಾಗುತ್ತಿರುವುದು 21ನೇ ಶತಮಾನದ ಅನಾರೋಗ್ಯಕರ ಬೆಳವಣಿಗೆಯಾಗಿದೆ. ಬಸವಣ್ಣನ ಕಾಲ ಜೋಡಣೆಯ ಕಾಲವಾಗಿದ್ದರೆ, 21ನೇ ಶತಮಾನ ವಿಭಜನೆಯ ಕಾಲವಾಗಿದೆ. ಜಾತಿ, ಧರ್ಮದ, ಮೀಸಲಾತಿ ಹೆಸರಿನಲ್ಲಿ ಸಮಾಜ ವಿಭಜನೆ ಯಾಗುವ ಸಂದಿಗ್ಧ ಸ್ಥಿತಿ ಇಂದು ನಿರ್ಮಾಣವಾಗಿದೆ ಎಂದು ಶರಣರು ಆತಂಕ ವ್ಯಕ್ತಪಡಿಸಿದರು.

ಮಠವನ್ನೇ ಜನರ ಬಳಿ ಕೊಂಡೊಯ್ದ ಅಪೂರ್ವ ಸಾಧಕರು ಜಯದೇವ ಶ್ರೀಗಳಾಗಿದ್ದರು. ಅವರದು ಸಂಚಾರದ ಬದುಕಾಗಿತ್ತು. ವರ್ಷದಲ್ಲಿ 11 ತಿಂಗಳು ಹಳ್ಳಿ, ಪಟ್ಟಣಗಳನ್ನು ಸುತ್ತಾಡಿ, ಕೇವಲ ಒಂದು ತಿಂಗಳು ಮಾತ್ರ ಮಠಕ್ಕೆ ಬರುತ್ತಿದ್ದರು. ಶ್ರೀಗಳ ಸುತ್ತಾಟದಲ್ಲಿ ಭಕ್ತರ ಹಾಗೂ ಸಮಾಜದ ಒಡನಾಟವಾಗುತ್ತಿತ್ತು. ಒಳ ನೋಟವಿರುತ್ತಿತ್ತು ಎಂದರು.

ಶರಣ ಸಂಸ್ಕೃತಿ ಆಚರಣೆ ಹಾಗೂ ಜಯದೇವ ಶ್ರೀಗಳ ಸ್ಮರಣೆ ಮಾಡುವುದು ಬಸವಣ್ಣನವರು ಹಾಗೂ ಜಯದೇವ ಶ್ರೀಗಳಿಗೆ ಸಲ್ಲಿಸುವ ದೊಡ್ಡ ಗೌರವ ಎಂದು ನುಡಿದರು.

`ಜಯದೇವ ಶ್ರೀ’  ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಹಿತಿ ಡಾ.ಕೆ. ಮರುಳಸಿದ್ದಪ್ಪ, ಸಾಮಾಜಿಕ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ ಸಂತ ಲಿಂ.ಜಯದೇವ ಶ್ರೀಗಳು ಎಂದು ಬಣ್ಣಿಸಿದರು.

100 ವರ್ಷಗಳ ಹಿಂದೆ ಲಿಂಗಾಯತ ಸಮಾಜ ಸಂಪೂರ್ಣ ಅನಕ್ಷರಸ್ಥವಾಗಿತ್ತು. ಸಮಾಜಕ್ಕೆ ಬೆಳಕು ಸಿಗಬೇಕಾದರೆ ಶಿಕ್ಷಣ ಮುಖ್ಯ ಎಂದು ಭಾವಿಸಿದ ಶ್ರೀಗಳು ಅಕ್ಷರ ದಾಸೋಹಕ್ಕೆ ಮುಂದಾದರು. ಶಿಕ್ಷಣದ ಮೂಲಕ ಸಮಾಜವನ್ನು ಪ್ರಗತಿ ಪಥದತ್ತ ಕೊಂಡೊಯ್ದರು. ಅಂದು ಆರಂಭಿಸಿದ ಮಹಾ ಕಾರ್ಯವನ್ನು ಉಳಿದ ಮಠಗಳು, ಸಂಘ-ಸಂಸ್ಥೆಗಳು ಅನುಸರಿಸಲು ಮುಂದಾದವು ಎಂದರು.

ಜಾತಿಗೊಂದು ಮಠ ಸ್ಥಾಪನೆ ಜಾತೀಯತೆಗೆ ಕಾರಣ ಎಂದು ಹಲವರ ಭಾವನೆಯಾಗಿದೆ. ಆದರೆ ಆ ಸಮಾಜ ಅನಾಥ ಪ್ರಜ್ಞೆಯಿಂದ ಬಳಲದೆ, ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂಬ ಉದ್ದೇಶದಿಂದ ಮಠಗಳ ಸ್ಥಾಪನೆಗೆ ಮುರುಘಾ ಶರಣರು ಪ್ರೋತ್ಸಾಹಿಸುತ್ತಿರುವುದು ಉತ್ತಮ ಕಾರ್ಯ ಎಂದರು.

ಜಾತಿ ರಹಿತ ಸಮಾಜ ನಮ್ಮೆಲ್ಲರ ಗುರಿಯಾಗಿದೆ. ಆದರೆ ಅದಕ್ಕೆ ಪೂರ್ವಭಾವಿಯಾಗಿ ಜಾತಿ ಸಮಾನತೆ ಅಗತ್ಯವಿದೆ. ಅದಿಲ್ಲದಿದ್ದರೆ ಜಾತಿ ರಹಿತ  ಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂದು ಹೇಳಿದರು.

ಕೆಲ ಪಟ್ಟಭದ್ರ ಹಿತಾಸಕ್ತಿಗಳು ಜನರಲ್ಲಿ ಮೌಢ್ಯವನ್ನು ಬಿತ್ತುತ್ತಿವೆ. ದೇವರ ವಿಚಾರದಲ್ಲಿ ಭಕ್ತಿಗಿಂತ ಭಯ ಹೆಚ್ಚಾಗಿದೆ. ದೇವರೆಂದರೆ ಲಂಚ ಕೋರ ಅಧಿಕಾರಿ ಎಂದು ಭಾವಿಸುವಷ್ಟರ ಮಟ್ಟಿಗೆ ಪ್ರಚಾರ ಮಾಡಲಾಗುತ್ತಿದೆ. ಹೆಚ್ಚು ದಕ್ಷಿಣೆ ನೀಡಿದರೆ ದೇವರ ಅನುಗ್ರಹ. ಇಲ್ಲವಾದರೆ ಶಿಕ್ಷೆ ಎಂಬಂತೆ ಸೃಷ್ಟಿಸಿ ಜನರ ದಾರಿ ತಪ್ಪಿಸಲಾಗುತ್ತಿದೆ ಎಂದರು.

`ಶೂನ್ಯಪೀಠ ಅಕ್ಕನಾಗಮ್ಮ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕರ್ನಾಟಕ ರಾಜ್ಯ ಕಲಕುಶಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ  ಶ್ರೀಮತಿ ರೂಪಾ ಡಿ.ಮೌದ್ಗಿಲ್, ಪಠ್ಯದಲ್ಲಿ ವಚನಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪ್ರತಿಪಾದಿಸಿದರು.

ಚಿಕ್ಕವರಿದ್ದಾಗಲೇ ಮಕ್ಕಳಿಗೆ ವಚನಗಳನ್ನು ಹೇಳಿಕೊಟ್ಟರೆ ಮುಂದೆ ಅವರು ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯವಿದೆ. ಆದರೆ ಪಠ್ಯದಲ್ಲಿ ಪ್ರಸ್ತುತ ಅಲ್ಲೊಂದು ಇಲ್ಲೊಂದು ವಚನಗಳಿವೆ. ಮತ್ತಷ್ಟು ವಚನಗಳನ್ನು ಪಠ್ಯದಲ್ಲಿ ಸೇರಿಸಬೇಕಿದೆ ಎಂದು ಹೇಳಿದರು.

`ಶೂನ್ಯ ಪೀಠ ಅಲ್ಲಮ’ ಪ್ರಶಸ್ತಿ ಸ್ವೀಕರಿಸಿದ ಸುದ್ದಿಮೂಲ ಪತ್ರಿಕೆ ಸಂಪಾದಕ ಬಸವರಾಜಸ್ವಾಮಿ ಮಾತನಾಡುತ್ತಾ, ನಾಡಿನ ಮಠಗಳು, ಗುರುಗಳು ಶರಣರ ವಚನಗಳ ಬಗ್ಗೆ ಸಂಶೋಧನೆ ಮಾಡಬೇಕು. ಶರಣ ಸೂತ್ರ ತಿಳಿಯಲು ಪ್ರಯತ್ನಿಸಬೇಕು ಎಂದರು.

`ಶೂನ್ಯಪೀಠ ಚನ್ನಬಸವ’ ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಪ್ರೊ.ಹೆಚ್.ಲಿಂಗಪ್ಪ ಮಾತನಾಡುತ್ತಾ, ಶರಣರ ವಚನಗಳಂತೆ ಎಲ್ಲರೂ ಬದುಕಿದರೆ ಬಸವಣ್ಣನವರ ಚಿಂತನೆಗಳಿಗೆ ನಿಜವಾದ ನ್ಯಾಯ ಕೊಡಲು ಸಾಧ್ಯ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯೆ ರುದ್ರಾಕ್ಷಿಬಾಯಿ ಹಾಗೂ ಕಲಾವಿದ ಬಸವ ಪ್ರಸಾದ ಮತ್ತು ಚಿತ್ರದುರ್ಗದ ಜಮುರಾ ಕಲಾವಿದರು ಹಾಗೂ ವಿರಕ್ತಮಠದ ಬಸವ ಕಲಾ ಲೋಕದವರು ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. 

ಅಂದನೂರು ಮುಪ್ಪಣ್ಣ, ಡಾ.ಸಿ.ಆರ್. ನಸೀರ್ ಅಹಮದ್, ವಿಜಯಣ್ಣ, ರಘುಬಾಯಿ ಪಟೇಲ್, ಡಿ.ಬಸವರಾಜ್ ಇತರರು ಉಪಸ್ಥಿತರಿದ್ದರು. ಎಂ.ಜಯಕುಮಾರ್ ಸ್ವಾಗತಿಸಿದರು. ಎಂ.ಕೆ. ಬಕ್ಕಪ್ಪ ನಿರೂಪಿಸಿದರು. 

error: Content is protected !!