ಕಿಡಿ ಕಾರಿದ ನಗರ ಪಾಲಿಕೆ ಹಿರಿಯ ಸದಸ್ಯ ಎ.ನಾಗರಾಜ್
ದಾವಣಗೆರೆ,ಫೆ.28- ನಗರ ಪಾಲಿಕೆ ಸದಸ್ಯತ್ವಕ್ಕೆ ದೇವರಮನೆ ಶಿವಕುಮಾರ್ ನೀಡಿದ ರಾಜೀನಾಮೆಯಿಂದಾಗಿ ಮಹಾನಗರ ಪಾಲಿಕೆ ಚುಕ್ಕಾಣಿ ಹಿಡಿಯುವಲ್ಲಿ ಕಾಂಗ್ರೆಸ್ ಗೆ `ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು’ ಎಂದು ನಗರ ಪಾಲಿಕೆಯ ಹಿರಿಯ ಸದಸ್ಯರೂ ಆಗಿರುವ ಕಾಂಗ್ರೆಸ್ ಮುಖಂಡ ಎ.ನಾಗರಾಜ್ ವ್ಯಾಕುಲತೆ ವ್ಯಕ್ತಪಡಿಸಿದ್ದಾರೆ.
`ಜನತಾವಾಣಿ’ಯೊಂದಿಗೆ ಮಾತನಾಡಿದ ಅವರು, ಈ ಬಾರಿ ನಗರಪಾಲಿಕೆ ಗದ್ದುಗೆ ಹಿಡಿಯಲೇಬೇಕೆಂಬ ಛಲದಿಂದಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂಬ ದೃಢ ವಿಶ್ವಾಸವೂ ಇತ್ತು. ಆದರೆ, ಕೊನೆ ಕ್ಷಣದಲ್ಲಿ ದೇವರಮನೆ ಕೈಗೊಂಡ ಏಕಾಏಕಿ ನಿರ್ಧಾರದಿಂದಾಗಿ ಮಾಡಿದ ಎಲ್ಲಾ ಪ್ರಯತ್ನಗಳು ನೀರಿನಲ್ಲಿ ಹುಣಸೇ ಹಣ್ಣು ತೊಳೆದಂತಾಯಿತು ಎಂದು ಅವರು ವಿಷಾದಿಸಿದ್ದಾರೆ.
ನಮ್ಮ ಪಕ್ಷದ ವರಿಷ್ಠರು ದೇವರಮನೆಗೆ ಮೇಯರ್ ಪಟ್ಟ ಕಟ್ಟಬೇಕೆಂದು ತೀರ್ಮಾನಿಸಿದ್ದರು. ವರಿಷ್ಠರ ನಿರ್ಧಾರದಂತೆ ಪಾಲಿಕೆ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ಪಾಲಿಕೆಯ ಎಲ್ಲಾ ಕಾಂಗ್ರೆಸ್ ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೆವು. ಈ ಕೆಲಸದಲ್ಲಿ ದೇವರಮನೆ ಕೂಡಾ ಭಾಗಿಯಾಗಿದ್ದರು. ಆದರೆ, ಮೇಯರ್ ಚುನಾವಣೆಯ ಕ್ಷಣ ಗಣನೆಯಲ್ಲಿ ಎಲ್ಲರೊಂದಿಗಿದ್ದ ಅವರು ಬರುತ್ತೇನೆ ಎಂದಷ್ಟೇ ಹೇಳಿ ಹೋದವರು ನೇರ ಬಿಜೆಪಿ ಕದ ತಟ್ಟಿದ್ದಾರೆ ಎಂದು ನಾಗರಾಜ್
ಅವರು ಹೇಳಿದ್ದಾರೆ.
ಹಿರಿಯ ಶಾಸಕರಾಗಿರುವ ಡಾ. ಶಾಮನೂರು ಶಿವಶಂಕರಪ್ಪ ಅವರು ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರಿಗಿಂತ ಹೆಚ್ಚಾಗಿ ದೇವರಮನೆ ಅವರನ್ನು ನಂಬಿದ್ದರು. ದೇವರಮನೆ ಕೂಡಾ, ಶಂಕ್ರಣ್ಣನವರು ನನ್ನ ಬಗ್ಗೆ ಅಪಾರ ನಂಬಿಕೆ ಇಟ್ಟಿದ್ದಾರೆ. ಹಿಂದೂ ಸಂಘಟನೆಗಳಲ್ಲಿ ನಾನು ಸಕ್ರಿಯನಾಗಿದ್ದರೂ, ನನ್ನನ್ನು ಕರೆದು ಉನ್ನತ ಸ್ಥಾನ – ಮಾನಗಳನ್ನು ನೀಡಿದ್ದಾರೆ. ನನ್ನ ಉಸಿರಿರುವವರೆಗೂ ಈ ಪಕ್ಷವನ್ನು ಮತ್ತು ಶಂಕ್ರಣ್ಣ – ಮಲ್ಲಣ್ಣನವರನ್ನು ಬಿಟ್ಟು ಹೋಗುವುದಿಲ್ಲ ಎಂದು ಆಗಾಗ್ಗೆ ಹೇಳುತ್ತಲೇ ಇದ್ದರು. ಹೀಗಿದ್ದರೂ ಅವರು ಪಕ್ಷ ಬಿಟ್ಟು ಹೋಗಿದ್ದೇಕೆ ?, ಇಲ್ಲಿ ಅಂತಹ ನೋವು ಅವರಿಗೇನಾಗಿತ್ತು ?, ದಿಢೀರ್ ನಿರ್ಧಾರ ಕೈಗೊಳ್ಳುವಂತಹದ್ದೇನಾಗಿತ್ತು ? ಎಂಬುದು ತಮಗೆ ಅರ್ಥವೇ ಆಗುತ್ತಿಲ್ಲ ಎಂದು ನಾಗರಾಜ್ ಹೇಳಿದ್ದಾರೆ.
ಅನಾಯಾಸವಾಗಿ ಕಾಂಗ್ರೆಸ್ ಗೆ ದಕ್ಕುತ್ತಿದ್ದ ಅಧಿಕಾರವನ್ನು ದೇವರಮನೆ ಕಳೆದಿದ್ದಾರೆ. ಅವರ ಏಕಾಏಕಿ ನಿರ್ಧಾರವು, ಯುದ್ಧಕ್ಕೆ ಪಟ್ಟ ಕಟ್ಟಿದಾಗ ಶಸ್ತ್ರ ತ್ಯಾಗ ಮಾಡಿದಂತಾಗಿದೆ. ಒಟ್ಟಿನಲ್ಲಿ ಬೆನ್ನಿಗೆ ಚೂರಿ ಹಾಕುವಂತಹ ಕೆಲಸ ದೇವರಮನೆ ಮಾಡಿದ್ದಾರೆ. ಅವರು ನಂಬಿಕೆಗೆ ಅನರ್ಹ ವ್ಯಕ್ತಿ ಎಂದು ಛೇಡಿಸಿರುವ ನಾಗರಾಜ್, ಇಂತಹವರು ಬಿಜೆಪಿಯಲ್ಲೂ ಸ್ಥಿರವಾಗಿ ಉಳಿಯುವುದಿಲ್ಲ ಎಂಬ ಮಾತನ್ನು ಆ ಪಕ್ಷದ ವರಿಷ್ಠರೊಬ್ಬರು ತಮ್ಮ ಮುಂದೆ ಹೇಳಿದ್ದಾರೆ ಎಂದು ತಿಳಿಸಿದರು.
ತಮಗೆ ಸೈಟು ಇಲ್ಲ ಎಂದು ಸುಳ್ಳು ಹೇಳಿ ದೂಡಾದಿಂದ ಮೂರು ಸೈಟುಗಳನ್ನು ದೇವರಮನೆ ಶಿವಕುಮಾರ್ ಸಹೋದರರು ಪಡೆದಿದ್ದಾರೆ. ಈ ಸೈಟುಗಳನ್ನು ವಾಪಸ್ ಮಾಡದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಾದೀತು ಎಂದು ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಈಚೆಗೆ ತಾಕೀತು ಮಾಡಿದ್ದರು. ಬಹುಶಃ ಈ ಸೈಟುಗಳನ್ನು ಉಳಿಸಿಕೊಳ್ಳಲು ದೇವರಮನೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಿರಬಬಹುದು ಎಂದು ನಾಗರಾಜ್ ಊಹಿಸಿದ್ದಾರೆ.