ಮಳೆ..ಮಳೆ…ಮಳೆ…

ಎರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ವರುಣ

ತುಂಬಿದ ಹಳ್ಳಗಳು, ಕೆರೆಗಳಲ್ಲಿ ನೀರು ಹೆಚ್ಚಳ, ರೈತರ ಹರ್ಷ

ದಾವಣಗೆರೆ, ಜು. 18- ಕಳೆದ ಎರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆ, ಹೊಲಗಳು, ರಸ್ತೆಗಳು ಜಲಾವೃತ, ತುಂಬಿ ಹರಿದ ಹಳ್ಳ, ಕೆರೆಗಳು. ನಗರದಲ್ಲಿ ವ್ಯಾಪಾರಕ್ಕೆ ಪೆಟ್ಟು.

ಆರಂಭದಲ್ಲಿ ನಿರಾಶೆ ಮೂಡಿಸಿದ್ದ ಪುನರ್ವಸು ಮಳೆ, ಅಂತ್ಯದ ದಿನಗಳಲ್ಲಿ ಭರ್ಜರಿಯಾಗಿ ಸುರಿಯಿತು.  ಶನಿವಾರ ಸಂಜೆಯಿಂದ ಆರಂಭವಾದ ಮಳೆ ಭಾನುವಾರ ಮುಂಜಾನೆ ಕೆಲ ಹೊತ್ತು ಮಾತ್ರ ಬಿಡುವು ನೀಡಿ, ಮತ್ತೆ ತಡರಾತ್ರಿವರೆಗೆ ಸುರಿದಿದೆ. ರೈತಾಪಿ ವರ್ಗ ಮಳೆಗೆ ಹರ್ಷ ವ್ಯಕ್ತಪಡಿಸಿದೆ. 

ಇತ್ತ ದಾವಣಗೆರೆ ನಗರದಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಮಳೆಯ ರಭಸ ಕಡಿಮೆ ಇದ್ದುದರಿಂದ  ನಗರ ಪ್ರದೇಶದಲ್ಲಿ ಅಷ್ಟಾಗಿ ಆಸ್ತಿ-ಪಾಸ್ತಿಗೆ ನಷ್ಟವಾಗಿಲ್ಲ. ಆದರೆ ವ್ಯವಹಾರಕ್ಕೆ ಹೆಚ್ಚಿನ ಪೆಟ್ಟು ಬಿದ್ದಿದೆ.

ಕೊರೊನಾ ಸಂಕಷ್ಟದಿಂದ ಚೇತರಿಕೆ ಹಾದಿಯ ಲ್ಲಿದ್ದ ವ್ಯಾಪಾರ-ವಹಿವಾಟು ಶನಿವಾರ ಸಂಜೆಯಿಂದ ಭಾನುವಾರ ಇಡೀ ದಿನ ಮಂದಗತಿಯಲ್ಲಿಯೇ ನಡೆದಿದೆ.

ಬೀದಿ ಬದಿ ವ್ಯಾಪಾರಿಗಳು, ಬಟ್ಟೆ ಅಂಗಡಿಗಳು, ಜ್ಯೂವೆಲರಿ ಅಂಗಡಿಗಳು ಹೋಟೆಲ್‌ಗಳು ಗ್ರಾಹಕರಿಲ್ಲದೆ ಬಣಗುಡುತ್ತಿದ್ದವು. ಭಾನುವಾರವಾಗಿ ದ್ದರಿಂದ ಜನರು ಮನೆ ಬಿಟ್ಟು ಹೊರ ಬರಲು ಇಷ್ಟಪಡದ  ಕಾರಣ, ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು.  ಸಂತೆಯ ದಿನವಾಗಿದ್ದರಿಂದ ಕೆ.ಆರ್. ಮಾರುಕಟ್ಟೆ, ಗಡಿಯಾರ ಕಂಬ, ಕಾಳಿಕಾದೇವಿ ರಸ್ತೆ, ಚೌಕಿಪೇಟೆ ಮುಂತಾದ ಕಡೆ ಮುಂಜಾನೆ ಜನರ ಓಡಾಟ ವಿರಳವಾಗಿತ್ತು. ಆದರೆ ಮಧ್ಯಾಹ್ನದ ನಂತರ ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆ ತುಸು ಮಟ್ಟಿಗೆ ಏರಿಕೆಯಾಗಿತ್ತು.

ತುಂಬಿದ ಮಾಗಾನಹಳ್ಳಿ ಹಳ್ಳ: ಮಾಗಾನಹಳ್ಳಿ ಹಳ್ಳ ತುಂಬಿ ಹರಿದ ಪರಿಣಾಮ ದಾವಣಗೆರೆ-ಕಂಚಿಕೆರೆ ರಸ್ತೆಯಲ್ಲಿ ನೀರು ನಿಂತು ಕೆಲ ಕಾಲ ಸಂಚಾರ ಅಸ್ತವ್ಯಸ್ಥವಾಗಿತ್ತು. 

ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು-ಅಪಘಾತ: ರಾಷ್ಟ್ರೀಯ ಹೆದ್ದಾರಿ ಎನ್‌-ಹೆಚ್.4ನಲ್ಲಿ ಆನಗೋಡು ಬಳಿ ರಸ್ತೆಯ ಒಂದು ಭಾಗದಲ್ಲಿ ನೀರು ನಿಂತು ಬೆಂಗಳೂರಿನಿಂದ ದಾವಣಗೆರೆ ಮಾರ್ಗವಾಗಿ ಬರುವ ವಾಹನಗಳು ಅಪಘಾತಕ್ಕೊಳಗಾದ ಬಗ್ಗೆ ವರದಿಯಾಗಿದೆ.

ಹೆದ್ದಾರಿಯಲ್ಲಿ ಒಂದು ಅಡಿಗೂ ಹೆಚ್ಚು ನೀರು ನಿಂತ ಪರಿಣಾಮ ಎರಡು ಕಾರುಗಳು ಅಪಾಘತಕ್ಕೀಡಾಗಿವೆ. ಮಲ್ಲಾಪುರ ಶ್ರೀಧರ್ ಹಾಗೂ ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ಅವರುಗಳು ಸ್ಥಳಕ್ಕೆ ಧಾವಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರನ್ನು ಸಂಪರ್ಕಿಸಿ, ಜೆ.ಸಿ.ಬಿ ಸಹಾಯದಿಂದ ನೀರು ಸರಾಗವಾಗಿ ಹರಿಯುವಂತೆ ಮಾಡಿಕೊಟ್ಟಿದ್ದಾರೆ.

ಹೆದ್ದಾರಿ ಪ್ರಾಧಿಕಾರದವರು ನೀರು ನಿಲ್ಲುವಂತಹ ಸ್ಥಳ ಗುರುತಿಸಿ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಇದೇ ವೇಳೆ ಶ್ರೀಕಾಂತ್ ಆಗ್ರಹಿಸಿದ್ದಾರೆ.

ಮಳೆ..ಮಳೆ...ಮಳೆ... - Janathavani

ಕಾಡಜ್ಜಿ–ಆಲೂರು ಹಳ್ಳ ಭರ್ತಿ: ಬಿಡದೆ ಸುರಿದ ಮಳೆಯಿಂದಾಗಿ ಕಾಡಜ್ಜಿ–ಆಲೂರು ಹಳ್ಳ ಭರ್ತಿಯಾಗಿದ್ದು, ಕಾಡಜ್ಜಿಯ ಕೆಪಿಟಿಸಿಎಲ್ ಉಪಕೇಂದ್ರದ ಕಟ್ಟಡದಲ್ಲಿ ನೀರು ತುಂಬಿ, ಅಲ್ಲಿದ್ದ ಇಬ್ಬರು ಸಿಬ್ಬಂದಿಯನ್ನು ಅಗ್ನಿಶಾಮಕ ದಳದ ಅಧಿಕಾರಿಗಳು ರಕ್ಷಿಸಿದ್ದಾರೆ.

ಕಾಡಜ್ಜಿಯಿಂದ 1.5 ಕಿ.ಮೀ ದೂರದಲ್ಲಿದ್ದ ಕೆಪಿಟಿಸಿಎಲ್ ಉಪಕೇಂದ್ರದ ಕಟ್ಟಡ ಮುಳುಗಡೆಯಾಗಿದೆ. ಈ ವೇಳೆ ಕಚೇರಿಯಲ್ಲಿ ಸಿಲುಕಿದ್ದ ಸ್ಟೇಷನ್ ಆಪರೇಟರ್ ಸಂತೋಷ್‌ಕುಮಾರ್ ಹಾಗೂ ಸಹಾಯಕ ಕೃಷ್ಣಪ್ರಸಾದ್ ಅವರನ್ನು ಅಗ್ನಿಶಾಮಕ ದಳದ ಅಧಿಕಾರಿಗಳು ನಿರಂತರ ಎರಡು ಗಂಟೆ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಕಾಡಜ್ಜಿ ಕೃಷಿ ತರಬೇತಿ ಕೇಂದ್ರದ ಆವರಣದಲ್ಲೂ ನೀರು ತುಂಬಿಕೊಂಡಿತ್ತು. 

ಶನಿವಾರ 53.8 ಮಿ.ಮೀ. ಮಳೆ, 9.70 ಲಕ್ಷ ನಷ್ಟ: ಜಿಲ್ಲೆಯಲ್ಲಿ ಶನಿವಾರ 53.8 ಮಿ.ಮೀ. ಮಳೆಯಾಗಿದ್ದು, 9.70 ಲಕ್ಷ ರೂ. ನಷ್ಟು ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಚನ್ನಗಿರಿ ತಾಲ್ಲೂಕಿನಲ್ಲಿ 29.6 ಮಿ.ಮೀ., ದಾವಣಗೆರೆ 90.9, ಹರಿಹರ 45.57, ಹೊನ್ನಾಳಿ 33.7 ಹಾಗೂ ಜಗಳೂರು ತಾಲ್ಲೂಕಿನಲ್ಲಿ 69.5 ಮಿ.ಮೀ. ಮಳೆಯಾಗಿದೆ.

ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 8 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, 2.60 ಲಕ್ಷ ರೂ., ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 4 ಪಕ್ಕಾ ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 2 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ. ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 5 ಪಕ್ಕಾ ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 2 ಲಕ್ಷ ರೂ. , ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 4 ಪಕ್ಕಾ ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 1.60 ಲಕ್ಷ ರೂ. ಅಂದಾಜು ನಷ್ಟ ಹಾಗೂ ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 10 ಕಚ್ಚಾ ಮನೆಗಳಿಗೆ ಭಾಗಶಃ  ಹಾನಿಯಾಗಿದ್ದು, 1.50 ಲಕ್ಷ ರೂ. ಅಂದಾಜು ನಷ್ಟ ಸೇರಿ ಜಿಲ್ಲೆಯಲ್ಲಿ ಒಟ್ಟಾರೆ 9.70 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ.

error: Content is protected !!