ಸಿಲಿಂಡರ್ ಹೊತ್ತು, ಕಟ್ಟಿಗೆ ಒಲೆ ಹಚ್ಚುವ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ
ದಾವಣಗೆರೆ, ಫೆ.28- ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ, ನಗರದಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ನ ದಕ್ಷಿಣ ವಲಯದ ವತಿಯಿಂದ ಪಕ್ಷದ ಮುಖಂಡರುಗಳ ನೇತೃತ್ವದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.
ದಕ್ಷಿಣ ವಲಯದ ಅಧ್ಯಕ್ಷ ಅಯೂಬ್ ಪೈಲ್ವಾನ್ ನೇತೃತ್ವದಲ್ಲಿ ದರ್ಗಾಕ್ಕೆ ತೆರಳಿ ಪೂಜೆ ಸಲ್ಲಿಸಿ, ನಂತರ ವೀರ ಮದಕರಿ ನಾಯಕ ವೃತ್ತ (ಹೊಂಡದ ಸರ್ಕಲ್)ದಲ್ಲಿ ಜಮಾಯಿಸಿದ್ದ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಸಿಲಿಂಡರ್ ಇಟ್ಟು, ಕಟ್ಟಿಗೆ ಒಲೆ ಹಚ್ಚಿ ಅಡುಗೆ ಮಾಡುವುದರ ಮೂಲಕ ಸಿಲಿಂಡರ್ ಬೆಲೆಯನ್ನು ಏರಿಸುತ್ತಾ ಹೋದರೆ ಬಡವರು ಪುನಃ ಕಟ್ಟಿಗೆ ಒಲೆಯಲ್ಲೇ ಅಡುಗೆ ಮಾಡಬೇಕಾದ ಪರಿಸ್ಥಿತಿ ಬರಲಿದೆ ಎಂದು ಕೇಂದ್ರದ ಬಿಜೆಪಿ ಸರ್ಕಾರದ ಬೆಲೆ ಏರಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಅಲ್ಲಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಮುಖಾಂತರ ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನದ ಬಳಿ ತೆರಳಿ ಪಾಲಿಕೆ ಸದಸ್ಯ ಜಿ.ಡಿ. ಪ್ರಕಾಶ್ ನೇತೃತ್ವದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರತಿಭಟಿಸಿ, ಹೋರಾಟವನ್ನು ಸಂಪನ್ನಗೊಳಿಸಲಾಯಿತು. ಮೆರವಣಿಗೆಯಲ್ಲಿ ಕಾರ್ಯಕರ್ತರು ಸಿಲಿಂಡರ್ ತಲೆ ಮೇಲೆ ಹೊತ್ತು ಸಾಗಿದರು. ಇದಕ್ಕೂ ಮುನ್ನ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನಿತಾಬಾಯಿ ಮಹಾಂತೇಶ್ ಅವರ ನೇತೃತ್ವದಲ್ಲಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಜನಸಮಾನ್ಯರಿಗೆ ‘ಅಚ್ಛೇ ದಿನ್’ ತರುತ್ತೇವೆ ಎಂದು ಹೇಳಿಕೊಂಡು ಕೇಂದ್ರ ಸರ್ಕಾರ ದೇಶದ ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಅಗತ್ಯ ವಸ್ತುಗಳ ಬೆಲೆಗಳು ಗಗನಮುಖಿಯಾಗಿದ್ದು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಆಕಾಶಕ್ಕೆ ಜಿಗಿದಿವೆ. ಇದು ಅಚ್ಛೇ ದಿನ್ ಅಲ್ಲ `ಭೂರೇ (ಕೆಟ್ಟ) ದಿನ್’ ಎಂದು ಹರಿಹಾಯ್ದರು.
ಉಜ್ವಲ್ ಯೋಜನೆ ಅಡಿ ಮಹಿಳೆಯರಿಗೆ ಅನುಕೂಲವಾಗಲೆಂದು ಉಚಿತ `ಗ್ಯಾಸ್ ಒಲೆ, ಸಿಲಿಂಡರ್’ಗಳನ್ನು ಕೇಂದ್ರ ಸರ್ಕಾರ ನೀಡಿ, ಅಡುಗೆ ಅನಿಲದ ಬೆಲೆ 800 ದಾಟಿದೆ. ಒಂದು ತಿಂಗಳಲ್ಲೇ ಸತತ ಮೂರು ಬಾರಿ ದರ ಏರಿಕೆ ಮಾಡಲಾಗಿದೆ. ಇದರಿಂದ ಮಹಿಳೆಯರು ಮತ್ತೆ ಸೌದೆ ಒಲೆಯತ್ತ ಅಡುಗೆ ಮಾಡಲು ಮುಖ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರವಿದ್ದಾಗ ಪೆಟ್ರೋಲ್ ಬೆಲೆ 60 ರೂ. ದಾಟಿರಲಿಲ್ಲ. ಈಗ ಮೋದಿ ಸರ್ಕಾರದಲ್ಲಿ ಶತಕ ಬಾರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ದಕ್ಷಿಣ ವಲಯದ ಅಧ್ಯಕ್ಷ ಆಯೂಬ್ ಪೈಲ್ವಾನ್ ಮಾತನಾಡಿ, ಹಿಂದುತ್ವದ ಹೆಸರು ಹೇಳಿಕೊಂಡು ಅಧಿಕಾರ ಹಿಡಿದ ಬಿಜೆಪಿ ಗೋಡ್ಸೆ ಹಿಂದುತ್ವವಾದ ಅನುಸರಿಸುತ್ತಿದೆ. ಆದರೆ, ಕಾಂಗ್ರೆಸ್ ವಿವೇಕಾನಂದರ ಹಿಂದುತ್ವದ ಹಾದಿಯಲ್ಲಿದೆ. ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರಗಳು ತೈಲ, ಸಿಲಿಂಡರ್ ಬೆಲೆ ಏರಿಕೆ ಮಾಡುವುದರ ಮೂಲಕ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿವೆ. ಮನ್ ಕೀ ಬಾತ್ ನಲ್ಲಿ ರೈತರ ಪರವಾಗಿ ಮೋದಿ ಎಲ್ಲೂ ಧ್ವನಿ ಎತ್ತಿಲ್ಲ. ಬಡವರು, ರೈತರಿಗೆ ಅನ್ಯಾಯ ಮಾಡಿದ ಸರ್ಕಾರಗಳಿಗೆ ಉಳಿಗಾಲವಿಲ್ಲ. ಬಿಜೆಪಿ ಸರ್ಕಾರ ಹೀಗೆಯೇ ಬೆಲೆ ಏರಿಕೆ ಮಾಡುತ್ತಾ ಜನ ಮತ್ತು ರೈತ ವಿರೋಧಿ ನೀತಿ ಅನುಸರಿಸಿದರೆ ಜನರೇ ತಕ್ಕಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು.
ನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್ ಮಾತನಾಡಿ, ಕೇಂದ್ರ ಸರ್ಕಾರವು ತೈಲ ಮತ್ತು ಸಿಲಿಂಡರ್ ಬೆಲೆ ಏರಿಕೆ ಮಾಡುವುದರ ಮೂಲಕ ಜನಸಾಮಾನ್ಯರಿಗೆ ಬಿಸಿ ತಟ್ಟಿದೆ. ಈ ಹಿನ್ನೆಲೆಯಲ್ಲಿ ಜನರು ಬಿಜೆಪಿಗೆ ಮತ ನೀಡಿ ಪಶ್ಚಾತ್ತಾಪ ಪಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಬಿಜೆಪಿಯ ಜನವಿರೋಧಿ ನೀತಿ ಖಂಡಿಸಿ, ಜನರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಪಾಲಿಕೆಯ 45 ವಾರ್ಡ್ಗಳಲ್ಲೂ ಕೂಡ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯರಾದ ವಿನಾಯಕ ಪೈಲ್ವಾನ್, ಚಮನ್ ಸಾಬ್, ಸುಧಾ ಇಟ್ಟಿಗುಡಿ ಮಂಜುನಾಥ್, ಮುಖಂಡರಾದ ಗೌಡ್ರು ಚನ್ನಬಸಪ್ಪ, ಎಲ್.ಎಂ.ಹೆಚ್. ಸಾಗರ್, ಡೋಲಿ ಚಂದ್ರು, ಮುಜಾಹಿದ್ಧೀನ್, ಸೈಯದ್ ಚಾರ್ಲಿ, ದ್ರಾಕ್ಷಾಯಣಮ್ಮ ಸೇರಿದಂತೆ ಅನೇಕರು ಭಾಗವಹಿಸಿದ್ದರು.