ಸಾಹಿತ್ಯ ಅಕಾಡೆಮಿ ಐವರಿಗೆ ಗೌರವ ಪ್ರಶಸ್ತಿ

ಸಾಹಿತ್ಯ ಅಕಾಡೆಮಿ ಐವರಿಗೆ ಗೌರವ ಪ್ರಶಸ್ತಿ - Janathavaniಬೆಂಗಳೂರು, ಫೆ.26- ಕರ್ನಾಟಕ ಸಾಹಿತ್ಯ ಅಕಾಡೆಮಿಯು 2019 ಮತ್ತು 2020ನೇ ಸಾಲುಗಳ ತನ್ನ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ದಾವಣಗೆರೆಯ ಹೆಸರಾಂತ ಹಿರಿಯ ಸಾಹಿತಿ ಶ್ರೀಮತಿ ಬಿ.ಟಿ. ಜಾಹ್ನವಿ ಅವರಿಗೆ `ಸಾಹಿತ್ಯ ಶ್ರೀ’ ಮತ್ತು ದಾವಣಗೆರೆಯ ಮತ್ತೋರ್ವ ಹಿರಿಯ ಸಾಹಿತಿ ಮಲ್ಲಿಕಾರ್ಜುನ ಕಡಕೋಳ ಅವರ ಕೃತಿಗೆ `ದತ್ತಿ ಬಹುಮಾನ’ ಲಭಿಸಿದೆ.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸು ತ್ತಿರುವ ಸೇವೆಯನ್ನು ಪರಿಗಣಿಸಿ ನೀಡ ಲಾಗುವ ವಾರ್ಷಿಕ `ಗೌರವ ಪ್ರಶಸ್ತಿ’ಗಳು, `ಸಾಹಿತ್ಯಶ್ರೀ’ ಪ್ರಶಸ್ತಿ, `ಪುಸ್ತಕ ಬಹುಮಾನ’ಗಳು, `ದತ್ತಿ’ ಬಹುಮಾನಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಇಂದಿಲ್ಲಿ ಪ್ರಕಟಿಸಿದೆ.

2020ನೇ ಸಾಲಿನ  ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗಳನ್ನು ಐವರು ಸಾಹಿತಿಗಳಿಗೆ ನೀಡಲಾಗಿದೆ. ಈ ಪ್ರಶಸ್ತಿಯು 50 ಸಾವಿರ ರೂ. ನಗದು ಬಹುಮಾನವನ್ನೊಳಗೊಂಡಿರುತ್ತದೆ.

ವಿವರ : ಪ್ರೊ. ಅಮೃತ ಸೋಮೇಶ್ವರ, ವಿದ್ವಾನ್‌,ಷಣ್ಮುಖಯ್ಯ ಅಕ್ಕೂರಮಠ, ಡಾ.ಕೆ.ಕೆಂಪೇಗೌಡ, ಡಾ.ಕೆ.ಆರ್‌.ಸಂಧ್ಯಾರೆಡ್ಡಿ, ಅಶೋಕಪುರಂ ಕೆ.ಗೋವಿಂದರಾಜು ಅವರಿಗೆ ವರ್ಷದ ಗೌರವ ಪ್ರಶಸ್ತಿ ನೀಡಲಾಗುತ್ತಿದೆ.

10 ಜನ ಸಾಧಕರಿಗೆ ‘ಸಾಹಿತ್ಯಶ್ರೀ’: ಪ್ರೇಮಶೇಖರ್‌, ಡಾ.ರಾಜಪ್ಪ ದಳವಾಯಿ, ಬಿ.ಟಿ.ಜಾಹ್ನವಿ, ಪ್ರೊ.ಕಲ್ಯಾಣರಾವ್‌ ಜಿ.ಪಾಟೀಲ್‌, ಡಾ.ಜೆ.ಪಿ.ದೊಡ್ಡಮನಿ, ಡಾ.ಮೃತ್ಯುಂಜಯ ರುಮಾಲೆ, ಡಿ.ವಿ.ಪ್ರಹ್ಲಾದ್‌, ಡಾ.ಎಂ.ಎಸ್‌.ಆಶಾದೇವಿ, ಶಿವಾನಂದ ಕಳವೆ, ವೀಣಾ ಬನ್ನಂಜೆ. ಪ್ರಶಸ್ತಿಯು 25 ಸಾವಿರ ರೂಪಾಯಿ ನಗದು ಬಹುಮಾನ ಒಳಗೊಂಡಿರುತ್ತದೆ.

ಕೃತಿಗಳಿಗೆ ಬಹುಮಾನ : 2019ರಲ್ಲಿ ಪ್ರಕಟವಾದ ವಿವಿಧ 18 ಸಾಹಿತ್ಯ ಪ್ರಕಾರದ ಕೃತಿಗಳಿಗೆ ವರ್ಷದ ಅತ್ಯುತ್ತಮ ಕೃತಿ ಬಹುಮಾನ ನೀಡಲಾಗುತ್ತಿದೆ. ವಸುಧೇಂದ್ರ ಅವರ ಕಾದಂಬರಿ ‘ತೇಜೋ ತುಂಗಭದ್ರಾ’, ಸತ್ಯಮಂಗಲ ಮಹಾದೇವ ಅವರ ಕಾವ್ಯ ಸಂಕಲನ ‘ಪಂಚವರ್ಣದ ಹಂಸ’, ಲಕ್ಷ್ಮಣ ಬಾದಾಮಿ ಅವರ `ಒಂದು ಚಿಟಿಕೆ ಮಣ್ಣು’ ಸಣ್ಣಕತೆ, ಉಷಾ ನರಸಿಂಹನ್‌ ಅವರ ನಾಟಕ ‘ಕಂಚುಗನ್ನಡಿ’, ರಘುನಾಥ ಚ.ಹ. ಅವರ ‘ಬೆಳ್ಳಿತೊರೆ’ ಲಲಿತ ಪ್ರಬಂಧ ಹಾಗೂ ನವಕವಿಗಳ ಪ್ರಥಮ ಸಂಕಲನ ಪ್ರಕಾರದಲ್ಲಿ ಸುಮಿತ್ ಮೇತ್ರಿ ಅವರ ‘ಥಟ್‌ ಅಂತ ಬರೆದುಕೊಡುವ ರಶೀದಿಯಲ್ಲ ಕವಿತೆ’ ಕೃತಿ ಸೇರಿ ಒಟ್ಟು 18 ಕೃತಿಗಳಿಗೆ ಬಹುಮಾನ ದೊರೆತಿದೆ.

ಪುಸ್ತಕ ಬಹುಮಾನವು ರೂ. 25 ಸಾವಿರ ನಗದು ಬಹುಮಾನ ಒಳಗೊಂಡಿದೆ. 2019ನೇ ವರ್ಷದ ಅಕಾಡೆಮಿಯ 9 ದತ್ತಿ ಬಹುಮಾನಗಳನ್ನೂ ಪ್ರಕಟಿಸಲಾಗಿದೆ. ಅನುಪಮಾ ಪ್ರಸಾದ್‌, ನೀತಾ ರಾವ್‌, ಪ್ರಮೋದ್‌ ಮುತಾಲಿಕ್‌, ಮಲ್ಲಿಕಾರ್ಜುನ ಕಡಕೋಳ, ಡಾ|| ಬಿ. ಪ್ರಭಾಕರ ಶಿಶಿಲ, ಡಾ|| ಎಂ. ಉಷಾ, ಜಿ.ಎನ್. ರಂಗನಾಥ್‌ರಾವ್‌, ಭಾಗ್ಯಜ್ಯೋತಿ ಹಿರೇಮಠ ಮತ್ತು ಲಕ್ಷ್ಮಿಕಾಂತ್‌ ಪಾಟೀಲ್‌ ಅವರುಗಳ ಕೃತಿಗಳಿಗೆ ದತ್ತಿ ಬಹುಮಾನ ನೀಡಲಾಗಿದೆ.

ದಾವಣಗೆರೆಯ ಹೆಸರಾಂತ ಹಿರಿಯ ಸಾಹಿತಿಯಾಗಿದ್ದ ದಿ|| ಬಿ.ವಿ. ವೀರಭದ್ರಪ್ಪ ಅವರ ಹೆಸರಿನಲ್ಲಿ, ಅತ್ಯುತ್ತಮ ವೈಚಾರಿಕ ಮತ್ತು ಅಂಕಣ ಬರಹಗಳಿಗಾಗಿ ಅವರ ಕುಟುಂಬ ವರ್ಗದವರು ದತ್ತಿನಿಧಿ ಸ್ಥಾಪಿಸಿದ್ದು, ಮಲ್ಲಿಕಾರ್ಜುನ ಕಡಕೋಳ ಅವರ `ಯಡ್ರಾಮಿ ಸೀಮೆ ಕಥನಗಳು’ ಕೃತಿಗೆ `ಬಿ.ವಿ.ವಿ. ದತ್ತಿ ಪ್ರಶಸ್ತಿ’ ನೀಡಲಾಗಿದೆ.

error: Content is protected !!