ಹರಪನಹಳ್ಳಿ, ಏ.25- ಮಿಂಚು, ಗುಡುಗು, ಬಿರುಗಾಳಿ ಸಹಿತ ಜೋರಾಗಿ ಸುರಿದ ಮಳೆಯ ಅಬ್ಬರಕ್ಕೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿ ಮನೆಯ ಮೇಲ್ಚಾವಣಿಗಳು ಹಾರಿ ಹೋದ ಪರಿಣಾಮ ಅಪಾರ ನಷ್ಟವಾಗಿದೆ.
ತಾಲ್ಲೂಕಿನ ಹುಲಿಕಟ್ಟಿ, ಮಾಡ್ಲಿಗೇರಿ, ಚಿಕ್ಕಳ್ಳಿ, ಕೂಲಹಳ್ಳಿ, ಬಂಡ್ರಿ, ತೊಗರಿಕಟ್ಟಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶನಿವಾರ ರಾತ್ರಿ ಸುರಿದ ಮಳೆಗೆ ಸುಮಾರು 15 ಕ್ಕೂ ಹೆಚ್ಚು ಮನೆಗಳ ಮೇಲ್ಚಾವಣಿ, ಹಂಚುಗಳು, ಶೀಟ್‍ಗಳು, ಹಾರಿ ಹೋಗಿ ಮನೆಗಳು ಬಿದ್ದು, ಎರಡು-ಮೂರು ಜನ ಗಾಯಗೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಗ್ರಾಮೀಣ ಪ್ರದೇಶದಲ್ಲಿ ಮಳೆ, ಗಾಳಿಯಿಂದಾಗಿ ವಿದ್ಯುತ್ ಕಡಿತ ಮಾಡಿದ್ದರಿಂದ ರಾತ್ರಿಯೆಲ್ಲ ಕತ್ತಲಲ್ಲೇ ಕಾಲ ಕಳೆಯುವಂತಾಯಿತು. ಹರಪನಹಳ್ಳಿ 4 ಎಂಎಂ, ಹಿರೆಮೇಗಳಗೇರಿ 13.2 ಎಂಎಂ, ತೆಲಿಗಿ 14.2 ಎಂಎಂ, ಉಚ್ಚಂಗಿದುರ್ಗ 4 ಎಂಎಂ ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು 35.4 ಎಂಎಂ ಸರಾಸರಿ 5.0 ಎಂಎಂ ಮಳೆಯಾಗಿರುವ ವರದಿಯಾಗಿದೆ ಎಂದು ತಹಶೀಲ್ದಾರ್ ನಂದೀಶ್ ತಿಳಿಸಿದ್ದಾರೆ. ಮುಂಗಾರು ಪೂರ್ವ ಮಳೆ ಜನರಲ್ಲಿ ನಿರೀಕ್ಷೆ ಮೂಡಿಸಿದೆ. ತಾಲ್ಲೂಕಿನ ಹೋಬಳಿಗಳಲ್ಲಿ ಮಳೆ ಜೋರಾಗಿ ಸುರಿದಿದ್ದು ರೈತರಲ್ಲಿ ಹರ್ಷ ತಂದಿದೆ.