`ಝೀಕಾ ವೈರಸ್’ ಸಾಂಕ್ರಾಮಿಕ ರೋಗಕ್ಕೆ ಯಾವುದೇ ಲಸಿಕೆ ಇಲ್ಲ. ಹೀಗಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳುವುದೇ ಇದರ ನಿಯಂತ್ರಣಕ್ಕೆ ಇರುವ ದಾರಿ.
– ಮಹಾಂತೇಶ್ ಬೀಳಗಿ, ಜಿಲ್ಲಾಧಿಕಾರಿ
ದಾವಣಗೆರೆ, ಜು.18- ನೆರೆಯ ರಾಜ್ಯ ಕೇರಳದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಝೀಕಾ ವೈರಸ್ ‘ಈಡಿಸ್ ಈಜಿಪ್ಟೈ’ ಎನ್ನುವ ಸೊಳ್ಳೆ ಕಚ್ಚುವುದರಿಂದ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸೊಳ್ಳೆಗಳ ಲಾರ್ವಾ ಪತ್ತೆ ಹಚ್ಚುವ ಸಮೀಕ್ಷೆ ಕಾರ್ಯ ಕೈಗೊಳ್ಳಲು ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಝೀಕಾ ವೈರಸ್ ಹರಡುವುದನ್ನು ತಪ್ಪಿಸಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಿನ್ನೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆರೋಗ್ಯ ಇಲಾಖೆಯು ಈಡಿಸ್ ಜಾತಿಯ ಸೊಳ್ಳೆಗಳು ಅಭಿವೃದ್ಧಿಯಾಗದಂತೆ ಲಾರ್ವಾ ಸಮೀಕ್ಷೆ ಕೈಗೊಂಡು, ಸೊಳ್ಳೆಗಳ ಲಾರ್ವಾ ಪತ್ತೆ ಯಾದಲ್ಲಿ ಕೂಡಲೇ ನಾಶಕ್ಕೆ ಕ್ರಮ ಕೈಗೊಳ್ಳುವುದರ ಜೊತೆಗೆ ಅಂತಹ ಪ್ರದೇಶಗಳಲ್ಲಿ ತೀವ್ರ ನಿಗಾ ಇರಿಸಬೇಕು. ಘನ ತ್ಯಾಜ್ಯ ವಸ್ತುಗಳನ್ನು ಮಹಾನಗರಪಾಲಿಕೆಯೂ ಸೇರಿದಂತೆ, ಆಯಾ ನಗರ, ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಕಡ್ಡಾಯವಾಗಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕು.
ರೋಗ ಲಕ್ಷಣ ಪ್ರಕರಣ ಪತ್ತೆಯಾದಲ್ಲಿ, ಅದರ ಸೀರಂ ಮಾದರಿಯನ್ನು ಝೀಕಾ ವೈರಸ್ ಮತ್ತು ಡೆಂಗ್ಯೂ ಪರೀಕ್ಷೆಗಾಗಿ ಜಿಲ್ಲಾ ಸರ್ವೇಕ್ಷಣಾ ಘಟಕ, ಡಿಪಿಹೆಚ್ಎಲ್ ಪ್ರಯೋಗ ಶಾಲೆಗೆ ಸೂಕ್ತ ವಿವರಣೆಗಳೊಂದಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಡಿಹೆಚ್ಒ ಡಾ. ನಾಗರಾಜ್ ಅವರು ಝೀಕಾ ವೈರಸ್ ಕುರಿತು ಮಾಹಿತಿ ನೀಡಿ, ಈ ರೋಗವು ಸೋಂಕಿತರ ರಕ್ತದ ವರ್ಗಾವಣೆ, ಅಸುರಕ್ಷಿತ ಲೈಂಗಿಕತೆ ಮೂಲಕವೂ ಸೋಂಕು ಹರಡುತ್ತದೆ. ಜ್ವರ, ಕಣ್ಣು ಕೆಂಪಾಗುವುದು, ಸ್ನಾಯು ಮತ್ತು ಕೀಲು ನೋವು, ತಲೆನೋವು, ಆಯಾಸ ಮತ್ತು ಹೊಟ್ಟೆ ನೋವು ಇದರ ರೋಗ ಲಕ್ಷಣಗಳಾಗಲಿವೆ. ಗರ್ಭಿಣಿಯರು ಸೋಂಕಿಗೆ ಒಳಗಾದರೆ ಹುಟ್ಟಲಿರುವ ಮಗು ಕೂಡ ಸೋಂಕಿಗೆ ಒಳಗಾಗಿ ‘ಮೈಕ್ರೋಸೆಫಾಲಿ’ ರೋಗಕ್ಕೆ ತುತ್ತಾಗುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಸೊಳ್ಳೆ ಕಚ್ಚುವಿಕೆಯಿಂದ ಪಾರಾಗುವುದೇ ಇದರ ತಡೆಗೆ ಸೂಕ್ತ ವಿಧಾನವಾಗಿದೆ ಎಂದು ಹೇಳಿದರು.
ಈಡಿಸ್ ಜಾತಿ ಸೊಳ್ಳೆಗಳು ಅಭಿವೃದ್ಧಿಯಾಗದಂತೆ ಮನೆಯ ಒಳಗೆ ಮತ್ತು ಸುತ್ತಮುತ್ತಲಿನ ನೀರಿನ ಸಂಗ್ರಹಗಳಲ್ಲಿ ಮನೆ, ಗ್ರಾಮ, ನಗರ ಪ್ರದೇಶದ ನೀರಿನ ತೊಟ್ಟಿ, ಘನತ್ಯಾಜ್ಯ ವಸ್ತುಗಳಲ್ಲಿನ ನೀರಿನಲ್ಲಿ ಮೊಟ್ಟೆ ಇಟ್ಟು ಮರಿ (ಲಾರ್ವಾ) ಮಾಡಿಕೊಳ್ಳುತ್ತವೆ. ಅಂತಹ ನೀರಿನ ಸಂಗ್ರಹಗಾರಗಳನ್ನು ಕಡ್ಡಾಯವಾಗಿ ವಾರಕ್ಕೊಮ್ಮೆ ಸ್ವಚ್ಛವಾಗಿ ತಿಕ್ಕಿ ತೊಳೆದು ಬಳಸಬೇಕು ಎಂದು ಕಿವಿಮಾತು ಹೇಳಿದರು.
ಆರೋಗ್ಯ ಇಲಾಖೆಯು ಜಿಲ್ಲೆಯಲ್ಲಿ ಈಗಾಗಲೇ ಈಡೀಸ್ ಜಾತಿ ಸೊಳ್ಳೆಗಳು ಅಭಿವೃದ್ಧಿಯಾಗದಂತೆ ಲಾರ್ವಾ ಸಮೀಕ್ಷೆಯನ್ನು ನಿರಂತರವಾಗಿ ನಡೆಸುತ್ತಿದೆ. ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುವ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್ಗಳಲ್ಲಿ ಗರ್ಭಿಣಿ ಮಹಿಳೆಯರ ಎನ್ಎನ್ಸಿ ತಪಾಸಣೆ ನಡೆಸಿದಾಗ ಮೈಕ್ರೋಸೆಫಾಲಿ ಕಂಡುಬಂದಲ್ಲಿ ಅಥವಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮೈಕ್ರೋಸೆಫಾಲಿ ಮಗುವಿನ ಜನನವಾದಲ್ಲಿ ತಕ್ಷಣ ಅಗತ್ಯ ಪರೀಕ್ಷೆಗಳಿಗಾಗಿ ಜಿಲ್ಲಾ ಸರ್ವೇಕ್ಷಣಾ ಘಟಕ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಡಿಹೆಚ್ಒ ನಾಗರಾಜ್ ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್, ಕೋವಿಡ್ ನೋಡಲ್ ಅಧಿಕಾರಿ ಪ್ರವೀಣ್ ನಾಯಕ್, ಡಿಹೆಚ್ಒ ಡಾ. ನಾಗರಾಜ್, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ, ಸರ್ವೈಲೆನ್ಸ್ ಮೆಡಿಕಲ್ ಅಧಿಕಾರಿ ಡಾ. ಶ್ರೀಧರ್, ಡಾ. ನಟರಾಜ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ಜಿಲ್ಲೆಯ ವಿವಿಧ ಆಸ್ಪತ್ರೆಗಳ ತಜ್ಞ ವೈದ್ಯರುಗಳು ಭಾಗವಹಿಸಿದ್ದರು.