ಸಂಘಟನೆಯ ರಾಜ್ಯಾಧ್ಯಕ್ಷ ಸೇರಿ ಇಬ್ಬರ ಬಂಧನ
ದಾವಣಗೆರೆ, ಜು.16- ಸಂಘಟನೆಯ ಹೆಸರಿನಲ್ಲಿ ಯುವತಿಯನ್ನು ಮುಂದಿಟ್ಟು ಕೊಂಡು ಹಣಕ್ಕೆ ಬೇಡಿಕೆಯಿಟ್ಟ ಆರೋಪ ದಡಿ ಕನ್ನಡಪರ ಸಂಘಟನೆಯೊಂದರ ರಾಜ್ಯಾಧ್ಯಕ್ಷ ಸೇರಿ ನಾಲ್ವರ ವಿರುದ್ಧ ನೊಂದ ವ್ಯಕ್ತಿಯೋರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕರುನಾಡ ಸಮರ ಸೇನೆ ರಾಜ್ಯಾಧ್ಯಕ್ಷ ಅವಿನಾಶ್ (ಅಭಿ), ಅರವಿಂ ದಾಕ್ಷ, ಮಾಲಾ, ಮತ್ತೋರ್ವನ ವಿರುದ್ಧ ನೊಂದ ಕಿರಣ್ ಕುಮಾರ್ ದೂರು ದಾಖಲಿಸಿದ್ದರು. ಇದೀಗ ಅವಿನಾಶ್ (ಅಭಿ), ಅರವಿಂದಾಕ್ಷ ಈ ಇಬ್ಬರನ್ನು ಸ್ಥಳೀಯ ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ.
ನಗರದ ವಿಮಾ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿರುವ ನೊಂದ ಕಿರಣ್ ಕುಮಾರ್ ಅವರ ವಿಮೆ ಕಂಪನಿಯಲ್ಲಿ ಏಜೆಂಟ್ ಆಗಿ ಯುವತಿಯೋರ್ವಳು ಕೆಲಸ ಮಾಡುತ್ತಿದ್ದಳು. ಆಕೆ ಸ್ವಲ್ಪ ದಿನಗಳ ಬಳಿಕ ಮದುವೆಯ ಪ್ರಸ್ತಾಪ ಮುಂದಿಟ್ಟಿದ್ದಾಳೆ. ವಿವಾಹಿತರಾಗಿರುವ ಕಿರಣ್ ಕುಮಾರ್ ಅಸಮ್ಮತಿಸಿದಾಗ ಆಕೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾಳೆ ಎನ್ನಲಾಗಿದೆ. ಈ ವಿಷಯವನ್ನು ಕಿರಣ್ ಕುಮಾರ್ ಆಕೆಯ ತಂದೆ-ತಾಯಿ ಬಳಿ ತಿಳಿಸಿದ್ದು, ಅವರು ಯುವತಿಗೆ ಬೈದಾಡಿ ಸುಮ್ಮನಿರಿಸಿದ್ದಾರೆ. ಇದಾದ ಬಳಿಕ ಪ್ರಕರಣದ ಕುರಿತು ಮಧ್ಯಸ್ಥಿಕೆ ವಹಿಸಲು ಸಂಘಟನೆಯ ಮಾಲಾ ಮುಂದಾಗಿದ್ದರು. ಅವಿನಾಶ್ (ಅಭಿ), ಅರವಿಂದಾಕ್ಷ ಸೇರಿ ತಮ್ಮ ಸಂಘಟನೆಯ ದಾವಣಗೆರೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಾಲಾ ಅವರ ಮುಖೇನ ಕಿರಣ್ ಕುಮಾರ್ ಬಳಿ 10 ಲಕ್ಷ ಹಣ ವಸೂಲಿಗೆ ಯತ್ನಿಸಲಾಗಿತ್ತು. ಹಣ ನೀಡದಿದ್ದರೆ ಯುವತಿಯನ್ನು ಮುಂದಿಟ್ಟುಕೊಂಡು ಅತ್ಯಾಚಾರದ ಕೇಸ್ ಹಾಕಿಸುತ್ತೇವೆ ಎಂದು ಬೆದರಿಕೆ ಹಾಕಲಾಗಿತ್ತು.
ಕಿರಣ್ ಕುಮಾರ್ ನನ್ನು ಮಾಲಾರ ಮನೆಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿ 10 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ವೇಳೆ ಹಣ ಇಲ್ಲ ಎಂದಾಗ ಖಾಲಿ ಚೆಕ್ ನೀಡುವಂತೆ ಬೆದರಿಕೆ ಹಾಕಿದ್ದರು.
ಸಂಘಟನೆಯವರ ಹಿಂಸೆಗೆ ಮನೆಯಿಂದ ಚೆಕ್ ತರಿಸಿ ಖಾಲಿ ಚೆಕ್ ಗೆ ಸಹಿ ಮಾಡಿ ಕಿರಣ್ ಕುಮಾರ್ ಕೊಟ್ಟಿದ್ದರು. ಅವರ ಕೈಯಿಂದ ಪಾರಾಗಿ ಬಂದು ಮರು ದಿನವೇ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಕಿರಣ್ ಕುಮಾರ್ ಅವರು ಅವಿನಾಶ್, ಮಾಲಾ, ಅರವಿಂದಾಕ್ಷ ವಿರುದ್ಧ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಅವಿನಾಶ (ಅಭಿ) ಹಾಗೂ ಅರವಿಂದಾಕ್ಷ ಈ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ತಲೆಮರೆಸಿಕೊಂಡಿರುವ ಮಾಲಾ ವಶಕ್ಕೆ ಬಲೆ ಬೀಸಿದ್ದಾರೆ.
ಕಿರಣ್‍ಕುಮಾರನಿಂದ ಆರೋಪಿತರು ಪಡೆದಿದ್ದ ಚೆಕ್ಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.