ದಾವಣಗೆರೆ, ಜು.16- ಸ್ನಾತಕೋತ್ತರ ಪದವಿ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಿರುವ ದಾವಣಗೆರೆ ವಿಶ್ವವಿದ್ಯಾಲಯದ ಕ್ರಮವನ್ನು ಖಂಡಿಸಿ ದಾವಣಗೆರೆ ವಿವಿ ಎದುರು ಎಐಡಿಎಸ್ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಇಂದು ಪ್ರತಿಭಟನೆ ನಡೆಸಿದರು.
ಎಲ್ಲಾ ವಿದ್ಯಾರ್ಥಿಗಳಿಗೂ ಸರಿಯಾಗಿ ಕೋವಿಡ್ ಲಸಿಕೆ ಸಿಕ್ಕಿಲ್ಲ. ಹಾಸ್ಟೆಲ್ ಮತ್ತು ಬಸ್ ಸಂಪರ್ಕ ಇಲ್ಲ. ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಸರಿಯಲ್ಲ. ಕೂಡಲೇ ಪರೀಕ್ಷೆಯನ್ನು ಮುಂದೂಡಬೇಕು ಎಂದು ಒತ್ತಾಯಿಸಿದರು.
ಎಲ್ಲಾ ವಿದ್ಯಾರ್ಥಿಗಳಿಗೆ ಎರಡು ಡೋಸ್ ಕೋವಿಡ್ ಲಸಿಕೆ ನೀಡುವವರೆಗೂ ಆಫ್‌ಲೈನ್ ತರಗತಿ ಮತ್ತು ಪರೀಕ್ಷೆಗಳನ್ನು ನಡೆಸಬಾರದು ಎಂದು ಒತ್ತಾಯಿಸಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಡಾ. ಹೆಚ್.ಎಸ್. ಅನಿತಾ ಅವರಿಗೆ ಮನವಿ ಸಲ್ಲಿಸಿದರು.
ವಿದ್ಯಾರ್ಥಿಗಳ ಮನವಿ ಆಲಿಸಿದ ಡಾ. ಅನಿತಾ, ಸರ್ಕಾರದ ಆದೇಶದಂತೆ ವಿಶ್ವವಿದ್ಯಾಲಯ ಪರೀಕ್ಷೆ ನಡೆಸಲು ಮುಂದಾಗಿದೆ. ಸರ್ಕಾರ ಸೂಚಿಸಿದರೆ ಪರೀಕ್ಷೆ ಮುಂದೂಡಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಪೂಜಾ, ಪುಷ್ಪ, ಕಾವ್ಯ, ಕಿರಣ್, ಸೌಮ್ಯ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.