ದಾವಣಗೆರೆ, ಜು.16- ಆಷಾಢ ಮಾಸದ ಮೊದಲ ಶುಕ್ರವಾರ ನಗರದ ದೇವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆದವು.
ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ, ನಿಟುವಳ್ಳಿಯ ದುರ್ಗಾಂಬಿಕಾ ದೇವಸ್ಥಾನ ಸೇರಿದಂತೆ ಹಲವು ದೇವತೆಯರ ದೇವಾಲಯಗಳಲ್ಲಿ ಭಕ್ತರು ದೇವಿ ದರ್ಶನ ಪಡೆದರು.
ಆಷಾಢ ಮಾಸವೆಂದರೆ ಸಾಮಾನ್ಯವಾಗಿ ಆ ತಿಂಗಳಿನಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡಬಾರದು ಎಂಬ ನಂಬಿಕೆ. ಆದರೆ ಆಷಾಢ ಶುಕ್ರವಾರದ ಪೂಜೆಗೆ ತುಂಬಾನೇ ಮಹತ್ವವಿದೆ. ಆಷಾಢ ಶುಕ್ರವಾರದೆಂದು ದೇವಿಯರನ್ನು ಆರಾಧಿಸಲಾಗುತ್ತದೆ. ಜೊತೆಗೆ ಲಕ್ಷ್ಮಿ ವ್ರತ ಆಚರಿಸುವ ಪದ್ದತಿಯೂ ಕೆಲವೆಡೆ ಇದೆ.
ಲಕ್ಷ್ಮಿ ಪೂಜೆ ಮಾಡುವುದರಿಂದ ದರಿದ್ರತನ, ಸಾಲಭಾಬಾಧೆ ಹಾಗೂ ಇತರೆ ತೊಂದರೆಗಳು ನಿವಾರಣೆಯಾಗಲಿವೆ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ.
ಅಂದ ಹಾಗೆ ನಿಂಬೆಹಣ್ಣಿನ ದೀಪವನ್ನು ಪಾರ್ವತಿ ಸ್ವರೂಪರಾದ ಅಂಬಾಭವಾನಿ, ಕಾಳಿಕಾದೇವಿ, ಚೌಡೇಶ್ವರಿ, ಮಾರಿಯಮ್ಮ, ದುರ್ಗಿದೇವಿ ಹಾಗೂ ಶಕ್ತಿ ದೇವಸ್ಥಾನಗಳಲ್ಲಿ ಹಚ್ಚುವುದು ಒಳ್ಳೆಯದು ಎಂಬ ನಂಬಿಕೆ ಭಕ್ತರಲ್ಲಿದ್ದು, ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಭಕ್ತರು ನಿಂಬೆ ಹಣ್ಣಿನ ದೀಪ ಹಚ್ಚಿದರು.