ರಾಣೇಬೆನ್ನೂರು, ಜು.16- ತಾಲ್ಲೂಕಿನ ಕೆರೆಗಳಲ್ಲಿ ನಿಗದಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗದ್ದರಿಂದ ತುಂಗಭದ್ರಾ ನದಿಯಿಂದ 18 ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ಹೆಚ್ಚಿಸುವ ಹಾಗೂ ಆಯಾ ವ್ಯಾಪ್ತಿಯ ದನಕರುಗಳಿಗೆ ಕುಡಿಯುವ ನೀರು ಒದಗಿಸುವ 206 ಕೋಟಿ ರೂ. ವೆಚ್ಚದ ಯೋಜನೆಗೆ ನಿನ್ನೆಯ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಲಿ ದ್ದಾರೆ ಎಂದು ಶಾಸಕ ಅರುಣಕುಮಾರ ಪೂಜಾರ ತಿಳಿಸಿದ್ದಾರೆ.
ನನ್ನ ಪ್ರಾರಂಭದ ಕನಸನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಜಿಲ್ಲಾ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನಸು ಮಾಡಿದ್ದಾರೆ ಎಂದು ಇಂದಿಲ್ಲಿ ತಮ್ಮ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂತಸ ಹಂಚಿಕೊಂಡರು.
ತಾಲ್ಲೂಕಿನ ಮೆಡ್ಲೇರಿ ದೊಡ್ಡ ಕೆರೆ ಹಾಗೂ ರಾಹುತನಕಟ್ಟೆ ಕೆರೆಗಳಿಗೆ ನದಿಯಿಂದ ನೀರು ತುಂಬಿಸಲು ಮೊದಲನೆ ಹಂತದಲ್ಲಿ 120 ಕೋಟಿ ರೂ., ಎರಡನೇ ಹಂತದಲ್ಲಿ 86 ಕೋಟಿ ವೆಚ್ಚದ ಕಾಮಗಾರಿಗಳ ಯೋಜನೆ ರೂಪಿಸಿದ್ದು, ಟೆಂಡರ್ ಪ್ರಕ್ರಿಯೆ ಸದ್ಯದಲ್ಲಿಯೇ ಪೂರ್ಣಗೊ ಳ್ಳಲಿದೆ. ಉದ್ಘಾಟನೆಯನ್ನು ತಾವೇ ಮಾಡುವು ದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ಅರುಣಕುಮಾರ ಹೇಳಿದರು.
ವಿಧಾನಸೌಧಕ್ಕೂ ಹೋಗಿದ್ದಿಲ್ಲ, ಮಂತ್ರಿನು ಆಗಿದ್ದಿಲ್ಲ…
ನಾನು ಶಾಸಕನಾಗುತ್ತಲೇ ಕ್ಷೇತ್ರದ ಅಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳನ್ನು ತರಬೇಕು. ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ ಮಾಡಬೇಕು ಎಂದು ಕನಸು ಕಟ್ಟಿಕೊಂಡು ಆಗಿನಿಂದಲೇ ಸರ್ಕಾರದ ಕಛೇರಿಗಳಿಗೆ ಅಲೆದಾಡಿದೆ. ಇದಕ್ಕಾಗಿ ನಾನು ಬಹಳಷ್ಟು ಕಷ್ಟಪಟ್ಟಿದ್ದೇನೆ. ನನ್ನ ಅಲೆದಾಟಕ್ಕೆ ಹಿರಿಯ ಅಧಿಕಾರಿಗಳು ಕನಿಕರ ಪಟ್ಟಿದ್ದಾರೆ. ನಾನು ಪ್ರಯತ್ನ ನಡೆಸಿದಾಗ ಟೀಕಿಸುವವರು ವಿಧಾನಸೌಧಕ್ಕೂ ಹೋಗಿದ್ದಿಲ್ಲ, ಮಂತ್ರಿನೂ ಆಗಿದ್ದಿಲ್ಲ ಎಂದು ಸಚಿವ ಶಂಕರ್ ಹೆಸರು ಹೇಳದೆ ಶಾಸಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮವರೇ ಟೀಕಿಸುವುದು ನೋವುಂಟು ಮಾಡುತ್ತಿದೆ..
ನಾವು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಾಂಗ್ರೆಸ್ನವರು ಯಾವುದೇ ಟೀಕೆ ಮಾಡಲ್ಲ. ನಮ್ಮ ಕೆಲಸಗಳನ್ನು ಮೆಚ್ಚಿಕೊಂಡು ಸುಮ್ಮನಿದ್ದಾರೆ. ಆದರೆ ನಮ್ಮವರೇ ಅಂದರೆ ಬಿಜೆಪಿಯವರೇ ನಮ್ಮನ್ನು ಟೀಕಿಸುತ್ತಾರೆ. ಇದು ನನಗೆ ಬಹಳಷ್ಟು ನೋವುಂಟು ಮಾಡುತ್ತಿದೆ ಎಂದು ಶಾಸಕರು ತಮ್ಮ ಬೇಸರ ಹೊರ ಹಾಕಿದರು.
ನಾನು ಕಮೀಷನ್ ಗಿರಾಕಿ ಅಲ್ಲಾ…
ನನಗೆ ಬಡತನ-ಸಿರಿತನ ಎರಡರ ಅನುಭವವೂ ಇದೆ. ನಾನು ದುಡ್ಡು ಮಾಡಲು ರಾಜಕೀಯಕ್ಕೆ ಬರಲಿಲ್ಲ. ನನಗೆ ದುಡ್ಡಿನ ಅವಶ್ಯಕತೆಯೂ ಇಲ್ಲ. ಜನರು ನನಗೆ ಅವಕಾಶ ಕೊಟ್ಟಿದ್ದಾರೆ. ಅವರ ಸೇವೆ ಮಾಡುತ್ತೇನೆ. ನಾನು ಕಮೀಷನ್ ಗಿರಾಕಿ ಅಲ್ಲ ಎಂದು ಫೇಸ್ಬುಕ್ನಲ್ಲಿ ಬಂದಿದ್ದ ಸಂದೇಶ ಪ್ರಸ್ತಾಪಿಸಿ ಶಾಸಕ ಅರುಣಕುಮಾರ ಪೂಜಾರ ತಮಗಾದ ನೋವು ತೋಡಿಕೊಂಡರು.
ಲಿಂಗದಹಳ್ಳಿ, ಮಾಳನಾಯ್ಕನಹಳ್ಳಿ, ತರೇ ದಹಳ್ಳಿ, ನಾಗೇನಹಳ್ಳಿ, ಇಟಗಿ, ಮಾಗೋಡ, ಅಂತರವಳ್ಳಿ, ಹಲಗೇರಿ, ಕುಸಗೂರು, ಬಿಲ್ಲಳ್ಳಿ, ನಿಟ್ಟೂರು, ಹಾರೋಗೊಪ್ಪ, ದಂಡಗಿಹಳ್ಳಿ, ಆಲದಕಟ್ಟಿ ಗ್ರಾಮಗಳ ಒಟ್ಟು 18 ಕೆರೆಗಳು ಈ ಯೋಜನೆಯ ವ್ಯಾಪ್ತಿಯಲ್ಲಿ ಬರಲಿವೆ ಎಂದು ಶಾಸಕರು ತಿಳಿಸಿದರು.
ಲೋಕೋಪಯೋಗಿ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಹಾಗೂ ರಾಣೇಬೆನ್ನೂರು ನಗರದ ಸಮಗ್ರ ಅಭಿವೃದ್ಧಿ ಸೇರಿದಂತೆ ನಿನ್ನೆ ನಡೆದ ಸಂಪುಟ ಸಭೆಯಲ್ಲಿ ನನ್ನ ಕ್ಷೇತ್ರದ ಒಟ್ಟು 300 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಒಪ್ಪಿಗೆ ದೊರೆತಿದೆ. ಮುಂದಿನ ದಿನಗಳಲ್ಲಿ 46 ಸಾವಿರ ಹೆಕ್ಟೇರ್ ಭೂಮಿಗೆ ಹನಿ ನೀರಾವರಿ ಯೋಜನೆ ರೂಪಿಸುವ ಕನಸು ಇದ್ದು, ಆಗ ತಾಲ್ಲೂಕು ಎಲ್ಲೆಡೆ ಹಚ್ಚ ಹಸಿರಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರಾಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ, ಸದಸ್ಯರಾದ ಗಂಗಮ್ಮ ಹಾವನೂರ, ರಾಜು ಅಡ್ಮನಿ, ಪ್ರಕಾಶ ಪೂಜಾರ, ಮಲ್ಲಪ್ಪ ಅಂಗಡಿ, ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ, ಎಪಿಎಂಸಿ ನಿರ್ದೇಶಕ ಬಸವರಾಜ ಹುಲ್ಲತ್ತಿ, ಸಾರಿಗೆ ನಿಗಮದ ನಿರ್ದೇಶಕ ಸಂತೋಷ್ ಪಾಟೀಲ, ಮುಖಂಡರಾದ ಎಸ್.ಎಸ್. ರಾಮಲಿಂಗಣ್ಣನವರ, ಮಂಜುನಾಥ ಓಲೆಕಾರ, ಬಸವರಾಜ ರೊಡ್ಡನವರ ಇನ್ನಿತರರಿದ್ದರು.