ಅಶೋಕ ಟಾಕೀಸ್ ಬಳಿ ವಾಹನಗಳನ್ನು ಪರಿಶೀಲಿಸುತ್ತಿರುವ ಪೊಲೀಸರು.
ದಾವಣಗೆರೆ, ಏ.25- ನಗರದಲ್ಲಿ ಬೆಳಿಗ್ಗೆ ಮಾರುಕಟ್ಟೆಯಲ್ಲಿ ಅವಸರದ ತರಕಾರಿ ಖರೀದಿ, ಮಹಾವೀರ ಜಯಂತಿ ಇದ್ದರೂ ಮಾಂಸದ ವ್ಯಾಪಾರ ನಡೆದದ್ದು ಹೊರತುಪಡಿಸಿದರೆ ವಾರಾಂತ್ಯದ ಕರ್ಫ್ಯೂ ಯಶಸ್ವಿಯಾಗಿದೆ.
ಬೆಳಿಗ್ಗೆ 10ರಿಂದ ನಗರ ಮತ್ತೊಮ್ಮೆ ಸ್ತಬ್ಧವಾಗಿತ್ತು. ಭಾನುವಾರವೂ ಆಗಿದ್ದರಿಂದ ಜನತೆ ರಸ್ತೆಗಿಳಿಯದೆ, ಗೃಹಬಂಧಿಗಳಾಗಿಯೇ ದಿನ ಕಳೆದರು.
ಸಂಜೆ 6ರ ನಂತರ ಬಡಾವಣೆಗಳಲ್ಲಿ ಜನ ಮನೆಮುಂದೆ ಅಡ್ಡಾಡುತ್ತಿದ್ದರು. ದ್ವಿಚಕ್ರ ವಾಹನಗಳ ಓಡಾಟವೂ ಹೆಚ್ಚಾಗಿತ್ತು. ಬೆಳಿಗ್ಗೆ ಪೊಲೀಸರು ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ಪ್ರಶ್ನಿಸುತ್ತಿದ್ದರು. ಮಧ್ಯಾಹ್ನದ ವೇಳೆಗೆ ದಣಿವಾರಿಸಿಕೊಳ್ಳುತ್ತಿದ್ದ ಪೊಲೀಸರು ಸಂಜೆ ವೇಳೆಗೆ ಮರೆಯಾಗಿದ್ದರು. ಪೊಲೀಸರ ಭಯವಿಲ್ಲದೆ ವಾಹನಗಳು ಸಂಚರಿಸಿದವು.
ನಗರದ ವ್ಯಾಪಾರ, ವಹಿವಾಟು ಎಲ್ಲವೂ ಸ್ಥಗಿತಗೊಂಡಿದ್ದರೂ ಜನತೆ ಎಲ್ಲಿಂದ ಎಲ್ಲಿಗೆ ಓಡಾಡುತ್ತಿದ್ದಾರೆ ಎಂಬುದೇ ಪ್ರಶ್ನಾರ್ಹವಾಗಿತ್ತು.
ತರಕಾರಿ ಖರೀದಿಗೆ ಮುಗಿ ಬಿದ್ದ ಜನತೆ: ಸೋಮವಾರದ ನಂತರವೂ ಕರ್ಫ್ಯೂ ಮುಂದುವರೆಯಬಹುದು ಎನ್ನುವ ಸುದ್ದಿ ಕೇಳಿದ ಜನತೆ ಭಾನುವಾರ ಮುಂಜಾನೆ ಕೆ.ಆರ್. ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಮುಗಿ ಬಿದ್ದ ಘಟನೆ ನಡೆಯಿತು. ಬೇಡಿಕೆ ಹೆಚ್ಚಾಗಿತ್ತು. ಆದರೆ ಕಡಿಮೆ ತರಕಾರಿ ಇದ್ದದ್ದರಿಂದ ನಾ ಮುಂದು ತಾ ಮುಂದೆ ಎಂದು ಖರೀದಿಗೆ ಮುಂದಾಗಿದ್ದರು.
ತಹಶೀಲ್ದಾರ್ ಗಿರೀಶ್ ನಿನ್ನೆಯಂತೆ ಇಂದೂ ಸಹ ಮಾರುಕಟ್ಟೆಕೆ ಭೇಟಿ ನೀಡಿ, ಹತ್ತು ಗಂಟೆ ಸಮೀಪಿಸುತ್ತಿದೆ ಶೀಘ್ರವೇ ಜಾಗ ಖಾಲಿ ಮಾಡಿ ಎಂದು ಎಚ್ಚರಿಕೆ ನೀಡುತ್ತಿದ್ದರು. ಪರಿಣಾಮ 10ರ ನಂತರ ಮಾರುಕಟ್ಟೆ ಬಹುತೇಕ ಖಾಲಿಯಾಯಿತು. ಮಾರುಕಟ್ಟೆ ಪ್ರದೇಶದ ಬಳಿ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಪೊಲೀಸರು ಬೆತ್ತ ತೋರಿಸಿ ಹೆದರಿಸುತ್ತಿದ್ದರು.
ಮಾಂಸ ಮಾರಾಟ : ಮಹಾವೀರ ಜಯಂತಿ ಅಂಗವಾಗಿ ಮಾಂಸ ಮಾರಾಟಕ್ಕೆ ನಿಷೇಧವಿದ್ದಾಗ್ಯೂ ನಗರದ ಹಲವೆಡೆ ಮಾಂಸ ಮಾರಾಟ ನಡೆಯಿತು. ಮಾಂಸದ ಅಡುಗೆ ಮಾಡಿ ವೀಕೆಂಡ್ ಆಚರಣೆ ಮಾಡುವವರು ಬೆಳಿಗ್ಗೆಯೇ ಮಾಂಸದ ಅಂಗಡಿಗೆ ಮುಗಿ ಬಿದ್ದಿದ್ದರು. ಖರೀದಿ ವೇಳೆ ಮಾಸ್ಕ್, ಸಾಮಾಜಿಕ ಅಂತರ ಮರೆಯಾಗಿತ್ತು. ಮುಂದೆ ಲಾಕ್‌ಡೌನ್ ಮುಂದುವರೆದು ಮಾಂಸ ಸಿಗದೇ ಇರಬಹುದೆಂಬ ಕಾರಣವೂ ಖರೀದಿ ಹೆಚ್ಚಳಕ್ಕೆ ಕಾರಣವಾಗಿತ್ತು.
ವಿನೋಬ ನಗರದಲ್ಲಿ ಮಾಂಸ ಖರೀದಿಸಲು ಮುಗಿ ಬಿದ್ದ ಜನತೆಯನ್ನು ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳು ಚದುರಿಸಬೇಕಾಯಿತು. 10 ಗಂಟೆ ನಂತರ ಪೊಲೀಸರು ಅಂಗಡಿಗಳನ್ನು ಮುಚ್ಚಿಸಿ, ಅಂಗಡಿ ಬಾಗಿಲು ತೆರೆದರೆ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಮಾಂಸದ ಅಂಗಡಿಯೊಂದರ ಒಳಗಿದ್ದವರನ್ನು ಪೊಲೀಸರು ಹೊರ ಕರೆದು ಅಂಗಡಿಗೆ ಬೀಗ ಹಾಕಿಸಿದರು.
ಹೋಟೆಲ್‌ಗಳು ಬಂದ್ ಆಗಿದ್ದರ ಹಿನ್ನೆಲೆಯಲ್ಲಿ ನಿನ್ನೆಯಂತೆ ಇಂದೂ ಸಹ ವಿದ್ಯಾರ್ಥಿಗಳು, ನೌಕರರು ಉಪಹಾರ ಹಾಗೂ ಊಟಕ್ಕಾಗಿ ಪರದಾಡಬೇಕಾಯಿತು.
ಮದ್ಯಪ್ರಿಯರ ಪರದಾಟ: ಬಾರ್‌ಗಳು ಬಾಗಿಲು ಮುಚ್ಚಿದ್ದರೂ ಸಹ ಬಾರ್‌ಗಳು ಸುತ್ತ ಮದ್ಯಪ್ರಿಯರು ಸುತ್ತಾಡುತ್ತಿದ್ದುದು ಕಂಡು ಬಂತು. ಕೆಲ ಬಾರ್‌ಗಳು ಹಿಂಭಾಗಿಲು ಅಥವಾ ಸಮೀಪದಲ್ಲಿ ಹೆಚ್ಚಿನ ದರಕ್ಕಾದರೂ ಮದ್ಯ ಸಿಗುತ್ತದೆ ಎಂಬ ವಿಶ್ವಾಸದಲ್ಲಿ ಸುತ್ತಾಡುತ್ತಿದ್ದರು.