ದಾವಣಗೆರೆ, ಜು.15- ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡದೆ ಹಾಲಿ ದರದಲ್ಲಿಯೇ ತೆರಿಗೆ ಪಾವತಿಗೆ ಅವಕಾಶ ಮಾಡಿಕೊಡುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರಿಗೆ ಮನವಿ ಸಲ್ಲಿಸಿದೆ.
ಈಗಾಗಲೇ ಜನತೆ ಕೋವಿಡ್ನಿಂದ ನಲುಗಿ ಹೋಗಿದ್ದಾರೆ. ಕಳೆದ ಸುಮಾರು ಒಂದೂವರೆ ವರ್ಷಗಳಿಂದ ಎಲ್ಲಾ ವರ್ಗದ ವ್ಯಾಪಾರೋದ್ಯಮಗಳು ಲಾಕ್ಡೌನ್ ಪರಿಣಾಮ ಸ್ಥಗಿತಗೊಂಡು ಜೀವನ ನಡೆಸುವುದು ದುಸ್ತರವಾಗಿದೆ.
ಆರ್ಥಿಕವಾಗಿ ಬಹಳಷ್ಟು ಜನರು ಝರ್ಜರಿತರಾಗಿದ್ದು, ಕಾರಣ, ಹಾಲಿ ಇರುವ ಆಸ್ತಿ ತೆರಿಗೆಯನ್ನೇ ಪಾವತಿಸುವುದು ಕಷ್ಟಕರವಾಗಿದೆೆ. ಹಿಂದಿನ ತೆರಿಗೆಗಿಂತ ಈಗಿನ ಹಾಲಿ ನಿಗದಿ ಪಡಿಸಿದ ತೆರಿಗೆ ಕೆಲ ವರ್ಗಗಳಿಗೆ 5-10 ಪಟ್ಟು ಹೆಚ್ಚಾಗಿದೆ.
ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಸರಿಪಡಿಸುವಂತೆ ಕೋರಲಾಗಿದೆ. ಶೀಘ್ರವೇ ತೆರಿಗೆ ಪಾವತಿದಾರರ ಸಭೆ ಕರೆದು ತೆರಿಗೆ ಹೆಚ್ಚಳದ ಆದೇಶ ಹಿಂಪಡೆಯಬೇಕೆಂದು ಮಾಜಿ ಶಾಸಕರೂ ಆಗಿರುವ ಛೇಂಬರ್ ಅಧ್ಯಕ್ಷ ಯಜಮಾನ್ ಮೋತಿ ವೀರಣ್ಣ, ಕಾರ್ಯದರ್ಶಿ ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ ಮನವಿಯಲ್ಲಿ ಒತ್ತಾಯಿಸಿದ್ದಾರೆ.