ದಾವಣಗೆರೆ, ಜು.15 – ಕೋವಿಡ್-19 ಸಂಪೂರ್ಣ ವಾಗಿ ನಿರ್ಮೂಲನೆಯಾಗಿಲ್ಲ, ಈಗಾಗಲೆ 3ನೇ ಅಲೆ ಶೀಘ್ರ ದಲ್ಲೇ ಆತಂಕ ಸೃಷ್ಟಿಸುವ ಸಂಭವವಿದ್ದು, ಸಾರ್ವಜನಿಕರು ಮೈಮರೆತು ಕೋವಿಡ್‍ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಓಡಾಡುತ್ತಿದ್ದಾರೆ. ಹೀಗಾಗಿ ನಿಯಮಗಳನ್ನು ಗಾಳಿಗೆ ತೂರಿ ಬೇಜವಾಬ್ದಾರಿಯಾಗಿ ವರ್ತಿಸುವ ಸಾರ್ವಜನಿಕರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಸಹಾಯಕರಾಗಿ ಕನಿಷ್ಟ 4 ಗಂಟೆ ಸೇವೆ ಸಲ್ಲಿಸುವ ಶಿಕ್ಷೆ ನೀಡುವ ವ್ಯವಸ್ಥೆ ಜಾರಿಗೊಳಿಸಲು ಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಎಚ್ಚರಿಸಿದ್ದಾರೆ.
ಕೋವಿಡ್‍ನ 3ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ವೈದ್ಯಕೀಯ ತಜ್ಞರ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಲಹಾ ಸಮಿತಿಯ ಸದಸ್ಯರುಗಳಾದ ತಜ್ಞ ವೈದ್ಯರುಗಳು ಕೋವಿಡ್ 2ನೇ ಅಲೆಯ ಅವಧಿಯಲ್ಲಿ ಜಿಲ್ಲೆಯಲ್ಲಿ ಗರಿಷ್ಟ 1349 ಪ್ರಕರಣಗಳ ಒಂದೇ ದಿನ ವರದಿಯಾಗಿದ್ದವು. ಈ ಪ್ರಮಾಣಕ್ಕೆ ಹೋಲಿಸಿದಾಗ 3ನೇ ಅಲೆ ಸಂದರ್ಭದಲ್ಲಿ ದಿನವೊಂದಕ್ಕೆ ಗರಿಷ್ಟ 2200 ಪ್ರಕರಣಗಳು ವರದಿಯಾಗುವ ಸಂಭವವಿದೆ. ಇದರಲ್ಲಿ ಶೇ. 10 ರಷ್ಟು ಸೋಂಕಿತರಿಗೆ ಆಸ್ಪ ತ್ರೆಗೆ ದಾಖಲಿಸಬೇಕಾಗಬಹುದು, ಅಲ್ಲದೇ ತೀವ್ರವಲ್ಲದ ಸೋಂ ಕಿತರನ್ನು ಕೋವಿಡ್ ಕೇರ್ ಸೆಂಟರ್‍ಗೆ ದಾಖಲಿಸಬೇಕಾಗುತ್ತದೆ.
ಮಾಸ್ಕ್ ಧರಿಸದವರು, ಸಾಮಾಜಿಕ ಅಂತರ ಕಾಯ್ದುಕೊ ಳ್ಳದಿರುವುದು ಹಾಗೂ ಕೋವಿಡ್ ನಿಯಂತ್ರಣ ಮಾರ್ಗಸೂಚಿ ಯನ್ನು ಉಲ್ಲಂಘಿಸುವ ವರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಪಿಪಿಇ ಕಿಟ್ ಧರಿಸಿ, ಸಹಾಯಕರಾಗಿ ಕನಿಷ್ಟ 4 ಗಂಟೆ ಸೇವೆ ಸಲ್ಲಿಸುವ ಶಿಕ್ಷೆ ವಿಧಿಸುವುದು ಸೂಕ್ತ. ವೈದ್ಯರು, ಆಸ್ಪತ್ರೆ ಸಿಬ್ಬಂದಿಗಳು ಜೀವದ ಹಂಗು ತೊರೆದು ಕೋವಿಡ್ ಸೋಂಕಿ ತರಿಗೆ ಚಿಕಿತ್ಸೆ ನೀಡುತ್ತಾರೆ ಎಂಬ ಅರಿವು ಅವರಿಗೂ ಬರಲಿ ಎಂದು ಸಲಹಾ ಸಮಿತಿಯ ಸದಸ್ಯರು ಸಲಹೆ ನೀಡಿದರು.
ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಬೀಳಗಿ ಅವರು, ಸರ್ಕಾರ ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ಬಡವರು, ವ್ಯಾಪಾರಿಗಳು, ಕೂಲಿಕಾರರು ಆರ್ಥಿಕ ನಷ್ಟ ಅನುಭವಿಸದಿರಲಿ ಎಂದು ಲಾಕ್‍ಡೌನ್ ತೆರವುಗೊಳಿಸಿದೆ. ಇದನ್ನು ಅರ್ಥ ಮಾಡಿಕೊಳ್ಳದ ಜನರು ಮೈಮರೆತು, ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ವರ್ತಿಸುತ್ತಿದ್ದಾರೆ. ಇದೇ ರೀತಿ ಆದಲ್ಲಿ, ಭೀಕರ ಪರಿಸ್ಥಿತಿ ಕೇವಲ ಎರಡು ತಿಂಗಳ ಒಳಗಾಗಿ ಜಿಲ್ಲೆಗೆ ಬರುವ ಸಾಧ್ಯತೆಗಳಿವೆ. ದಿನಕ್ಕೆ ಗರಿಷ್ಠ 2 ಸಾವಿರ ಪ್ರಕರಣಗಳು ಬರುವ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು, ಅದಕ್ಕೆ ಅನುಗುಣವಾಗಿ ಜಿಲ್ಲೆಯಲ್ಲಿ ವೈದ್ಯಕೀಯ ವ್ಯವಸ್ಥೆ ಹಾಗೂ ಕೋವಿಡ್ ಕೇರ್ ಸೆಂಟರ್‍ಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್, ಕೋವಿಡ್ ನೋಡಲ್ ಅಧಿಕಾರಿ ಪ್ರವೀಣ್ ನಾಯಕ್, ಡಿಹೆಚ್‍ಒ ಡಾ. ನಾಗರಾಜ್, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ, ಸರ್ವೆಲೆನ್ಸ್ ಮೆಡಿಕಲ್ ಅಧಿಕಾರಿ ಡಾ. ಶ್ರೀಧರ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮತ್ತು ಇತರರು ಸಭೆಯಲ್ಲಿ ಭಾಗವಹಿಸಿದ್ದರು.