ರೈತರ ಹತ್ಯೆ ಖಂಡಿಸಿ ಪ್ರತಿಭಟನೆ : ಪ್ರಧಾನಿ ಭಾವಚಿತ್ರ ಪ್ರದರ್ಶನಕ್ಕೆ ನಿರಾಕರಣೆ – ಖಂಡನೆ
ದಾವಣಗೆರೆ, ಅ.18- ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಹತ್ಯೆ ಖಂಡಿಸಿ ನಗರದಲ್ಲಿ ಇಂದು ಪ್ರತಿಭಟಿಸುತ್ತಿದ್ದ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರುಗಳ ಭಾವಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡುವ ವಿಚಾರವಾಗಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯ ಮುಖಂಡರು ಮತ್ತು ಪೊಲೀಸರ ಮಧ್ಯೆ ಪರಸ್ಪರ ತಳ್ಳಾಟ, ನೂಕಾಟದ ಜೊತೆಗೆ ವಾಗ್ವಾದ ನಡೆಯಿತು.
ಜಯದೇವ ವೃತ್ತದಿಂದ ಗಾಂಧಿ ವೃತ್ತದತ್ತ ಪ್ರತಿಭಟನಾಕಾರರು ಪ್ರಧಾನಿ ಮೋದಿ ಹಾಗೂ ಸಚಿವ ಅಮಿತ್ ಶಾ ಭಾವಚಿತ್ರ ವಿರೂಪಗೊಳಿಸಿ, ಮೆರವಣಿಗೆ ನಡೆಸಲು ಮುಂದಾಗಿದ್ದರು.
ಒಂದು ಕಡೆ ಪ್ರತಿಭಟನಾಕಾರರು ಮೋದಿ ಮತ್ತು ಅಮಿತ್ ಷಾ ಅವರ ಫೋಟೋ ಹಿಡಿದು ಮೆರವಣಿಗೆ ಹೋಗುತ್ತೇವೆ ಎಂದು ಹಠ ಹಿಡಿದರೆ, ಇತ್ತ ಪೊಲೀಸ್ ವೃತ್ತ ನಿರೀಕ್ಷಕ ಸುರೇಶ್ ಸಗರಿ ಅವರು ಮೆರವಣಿಗೆಗೆ ಮಾತ್ರ ಅವಕಾಶವಿದೆ. ಭಾವಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ನಿರಾಕರಿಸಿದರು.
ಇದರಿಂದ ತಾಳ್ಮೆ ಕಳೆದುಕೊಂಡ ಪ್ರತಿಭಟನಾಕಾ ರರು, ಧರಣಿ ಕುಳಿತರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಆವರಗೆರೆ ಉಮೇಶ್, ಆವರಗೆರೆ ಚಂದ್ರು,
ಡಾ. ಸುನಿತ್‍ಕುಮಾರ್, ಮಂಜುನಾಥ ಕುಕ್ಕುವಾಡ ಅವರನ್ನು ಎತ್ತಿ, ಪೊಲೀಸರ ಜೀಪಿಗೆ ಹಾಕಲು ಮುಂದಾದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ತಳ್ಳಾಟ, ನೂಕಾಟ ನಡೆಯಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆ ಜಿಲ್ಲಾ ಸಂಚಾಲಕ ಹೆಚ್.ಜಿ. ಉಮೇಶ್ ಮಾತನಾಡಿ, ಬಿಜೆಪಿಯವರು ಬೈಕ್ ರಾಲಿ ನಡೆಸಲು,
ಮೆರವಣಿಗೆ ನಡೆಸಲು, ಸಭೆ-ಸಮಾರಂಭ
ಮಾಡಲು ಅವಕಾಶ ನೀಡುತ್ತೀರಿ. ನಮಗೇಕೆ ಭಾವಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ. ನಮಗೆ ಭಾವಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಲೇಬೇಕು ಎಂದು ಹಠ ಹಿಡಿದರು.
ನೀವು ಖಾಕಿ ಸಮವಸ್ತ್ರ ಬಿಟ್ಟು, ಕೇಸರಿ ಸಮವಸ್ತ್ರ ಹಾಕಿಕೊಳ್ಳಿ, ಸರ್ಕಾರ ಪೊಲೀಸ್ ಯಂತ್ರಾಂಗ ಬಳಸಿಕೊಂಡು ಹೋರಾಟ ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಪೊಲೀಸರು ದೌರ್ಜನ್ಯ ನಡೆಸುವುದು ಸರಿಯಲ್ಲ. ಪ್ರತಿಭಟನೆ ನಡೆಸುವುದು ನಮ್ಮ ಸಂವಿಧಾನಬದ್ಧ ಹಕ್ಕು. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸಿಪಿಐ ಗುರುಬಸವರಾಜ್, ಟ್ರಾಫಿಕ್ ಪಿಐ ತಿಮ್ಮಣ್ಣ ಅವರುಗಳು ಪ್ರಧಾನಿ ಭಾವಚಿತ್ರ ಪ್ರದರ್ಶನಕ್ಕೆ ಮತ್ತು ದಹನಕ್ಕೆ ಅವಕಾಶವಿಲ್ಲ. ಮೆರವಣಿಗೆ ಬೇಕಾದರೆ ಮಾಡಿಕೊಳ್ಳಿ ಎಂದು ಪ್ರತಿಭಟನಾ ನಿರತರ ಮನವೊಲಿಸಲು ಯತ್ನಿಸಿದರು.
ಆಗ ಪ್ರತಿಭಟನಾಕಾರರು ತಮ್ಮ ಕೈಗಳಲ್ಲಿದ್ದ ಭಾವಚಿತ್ರಗಳನ್ನು ಪೊಲೀಸರಿಗೆ ಹಸ್ತಾಂತರಿಸಿ, ಕೊನೆಗೆ ಜಯದೇವ ವೃತ್ತದಿಂದ ಗಾಂಧಿ ವೃತ್ತದವರೆಗೆ ಮೆರವಣಿಗೆ ನಡೆಸಿ, ಮೋದಿ, ಅಮಿತ್ ಶಾ ಮತ್ತು ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಆವರಗೆರೆ ಉಮೇಶ್, ಆವರಗೆರೆ ಚಂದ್ರು, ಡಾ. ಸುನಿತ್ ಕುಮಾರ್, ಮಂಜುನಾಥ ಕುಕ್ಕುವಾಡ, ಐರಣಿ ಚಂದ್ರು, ಭಾರತಿ, ಮಧು ತೊಗಲೇರಿ, ಪರಶುರಾಮ್, ರಂಗನಾಥ್, ಆದಿಲ್‍ಖಾನ್ ಸೇರಿದಂತೆ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.