ಕಿಟ್‌ಗೆೆ ನೂಕುನುಗ್ಗಲು: ಲಾಠಿ

ಹರಿಹರ, ಜೂ.14- ನಗರದ ಎಪಿಎಂಸಿ ಆವರಣ ದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸುವಾಗ, ನೂಕು ನುಗ್ಗಲು ಹೆಚ್ಚಾದ ಕಾರಣ ಪೊಲೀಸರು ಜನರನ್ನು ಚದುರಿಸಲು ಲಾಠಿ ಬೀಸಿದ ಘಟನೆ ಇಂದು ನಡೆದಿದೆ.

ಲಾಕ್‌ಡೌನ್‌ನಿಂದ ಕಾರ್ಮಿಕರಿಗೆ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ಎಲ್ಲಾ ಕಾರ್ಮಿಕರ ಕುಟುಂಬಕ್ಕೆ ಆಹಾರದ ಕಿಟ್ ನೀಡುವುದಕ್ಕೆ ಮುಂದಾಗಿದೆ. ಅದರ ಅನ್ವಯ ಹರಿಹರ ತಾಲ್ಲೂಕಿನಲ್ಲಿರುವ 17,500 ಕಾರ್ಮಿಕರಲ್ಲಿ ಮೊದಲ ಹಂತವಾಗಿ 5,000 ಕಾರ್ಮಿಕರಿಗೆ ಆಹಾರದ ಕಿಟ್ ವಿತರಣೆ ಮಾಡಲು ಇಲಾಖೆ ಮುಂದಾಗಿದೆ‌. 

ಹರಿಹರ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬೆಳಗಿನ ಜಾವದಲ್ಲಿಯೇ ಆಗಮಿಸಿದ್ದ ಕಾರ್ಮಿಕರು ಸರತಿ ಸಾಲಿನಲ್ಲಿ ನಿಂತಾಗ ನೂಕು ನುಗ್ಗಲು ಹೆಚ್ಚಾಯಿತು. ನಿಂತವರು ಅಂತರ ಕಾಯ್ದುಕೊಳ್ಳದ ಕಾರಣ ಅವರನ್ನು ಹತೋಟಿಗೆ ತರುವುದಕ್ಕೆ ಪಿಎಸ್ಐ ಸುನಿಲ್ ಬಸವರಾಜ್ ಇವರ ನೇತೃತ್ವದ ಪೊಲೀಸ್ ಇಲಾಖೆ ಸಿಬ್ಬಂದಿಗಳು ಸಾಕಷ್ಟು ಹರ ಸಹಸ ಮಾಡಿದರು.

ಪರಿಸ್ಥಿತಿ ಹತೋಟಿಗೆ ಬಾರದಿದ್ದಾಗ ಪೊಲೀಸರು ಕೆಲವರಿಗೆ ಲಾಠಿ ರುಚಿ ತೋರಿಸಿದರು. ತಪ್ಪಿಸಿಕೊಳ್ಳಲು ಹೋಗಿ ಚರಂಡಿಯ ಮೇಲೆ ಬಿದ್ದು ಕೆಲವರಿಗೆ ಕಾಲಿಗೆ  ಮತ್ತು ಕೈಗೆ ಪೆಟ್ಟು ಬಿದ್ದಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗಳಿಗೆ ತೆರಳಿದರು.

ಕಾರ್ಮಿಕ ಇಲಾಖೆಯ ಅಧಿಕಾರಿ ಕವಿತಾ ಮಾತನಾಡಿ,  ತಾಲ್ಲೂಕಿನಲ್ಲಿ ಇರುವ 17,500 ಕಾರ್ಮಿಕರಲ್ಲಿ 5,000, ಕಾರ್ಮಿಕರಿಗೆ ಆಹಾರದ ಕಿಟ್ ಬಂದಿದ್ದು ಅದನ್ನು ವಿತರಣೆ ಮಾಡುವುದಕ್ಕೆ ಕಾರ್ಮಿಕರ ಯೂನಿಯನ್‌ಗೆ  50 ರಿಂದ 200 ಕಾರ್ಮಿಕರನ್ನು ಕರೆತಂದು ಪಡೆದುಕೊಂಡು ಹೋಗುವಂತೆ ತಿಳಿಸಲಾಗಿತ್ತು. ಆದರೆ ಹಂಚಿಕೆ ಮಾಡುವ ವಿಚಾರ ಒಬ್ಬರಿಂದ ಒಬ್ಬರಿಗೆ ಹರಡಿ ಸುಮಾರು 3,000 ಕಾರ್ಮಿಕರು ಒಮ್ಮೆಲೇ ಆಗಮಿಸಿದ್ದರಿಂದ ನೂಕು ನುಗ್ಗಲು ಹೆಚ್ಚಾಗಲು ಕಾರಣವಾಯಿತು. 

ಹಂಚಿಕೆ ಮಾಡುವಾಗ ಅವರ ಆಧಾರ ಕಾರ್ಡ್ ಮತ್ತು ಲೇಬರ್ ಕಾರ್ಡನ್ನು ಸಿಸ್ಟಮ್‌ಗೆ ದಾಖಲಿಸಲು ಸಹ ಆಗದೆ ವಿತರಣೆ ಮಾಡುವುದನ್ನು ನಿಲ್ಲಿಸಲಾಯಿತು. ಶಾಸಕರು ಮತ್ತು ಪೊಲೀಸ್ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿ ಮುಂದಿನ ದಿನಗಳಲ್ಲಿ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿದರು. 

ಕಿಟ್ ಪಡೆಯಲು ಬಂದಿದ್ದ ಉಷಾ ಎಂಬ ಮಹಿಳೆ ಮಾತನಾಡಿ, ನಮಗೆ ಆಹಾರದ ಕಿಟ್ ಕೊಡುವುದಾಗಿ ತಿಳಿಸಿದ್ದರಿಂದ ನಾವು ಬೆಳಗಿನ ಜಾವದಲ್ಲಿ ಬಂದು ತಿಂಡಿ, ಊಟವನ್ನು ಬಿಟ್ಟು ಸರತಿ ಸಾಲಿನಲ್ಲಿ ನಿಂತಕೊಂಡಿದ್ದೆವು. ಆದರೆ ಕಾರ್ಮಿಕರು ಹೆಚ್ಚಾದಂತೆ ಟೋಕನ್ ಕೊಟ್ಟವರು ಒಂದು ಸಾಲಿನಲ್ಲಿ ಬನ್ನಿ ಮತ್ತು ಟೋಕನ್ ಇಲ್ಲದವರು ಇನ್ನೊಂದು ಸಾಲಿನಲ್ಲಿ ನಿಂತುಕೊಳ್ಳಿ ಎಂದು ಹೇಳಿದ ನಂತರದಲ್ಲಿ ನೂಕು  ನುಗ್ಗಲು ಹೆಚ್ಚಾಯಿತು. ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಿಟ್‌ ಕೊಡುವುದನ್ನು ನಿಲ್ಲಿಸಿ ತೆರಳಿದರು ಎಂದರು.

ಕಾರ್ಮಿಕ ರಮೇಶ್ ಹಿಂಡಸಘಟ್ಟ ಮಾತನಾಡಿ, ಆಹಾರದ ಕಿಟ್ ಕೊಡುತ್ತಾರೆ ಎಂದು ಹೇಳಿದಾಗ ನಾವು ನಿನ್ನೆ ಬಂದು ಕಾದು ಕಾದು ಸಾಕಾಗಿ ಮನೆಗೆ ಹೋದೆವು. ಇಂದು ನೋಡಿದರೆ ವಿತರಣೆ ಮಾಡುವುದನ್ನು ನಿಲ್ಲಿಸಿದರು. ದಿನದ ದುಡಿಮೆ 1,500 ರೂಪಾಯಿಯೂ ಇದರಿಂದ ಹೋಯಿತು ಎಂದು ಬೇಸರ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಸಿದ್ದೇಶ್, ಮಾಳಮ್ಮ, ಗಂಗಮ್ಮ, ಇಂದ್ರಮ್ಮ, ಸಾಕಮ್ಮ, ಗಂಗಮ್ಮ, ಉಮೇಶ್ ಜಿಗಳಿ, ಯೂನುಸ್, ನಿಂಗರಾಜ್, ಫಾರೂಕ್ ಇನ್ನಿತರರು ಹಾಜರಿದ್ದರು.

error: Content is protected !!