ಪ್ರವರ್ಗ-1ರ ಹಿಂದುಳಿದ ಸಮುದಾಯಗಳ ಅಭಿವೃದ್ಧಿ ಕಡೆಗಣನೆ

ದಾವಣಗೆರೆ, ಅ.17- ಪ್ರವರ್ಗ-1ರ ಅತಿ ಹಿಂದುಳಿದ ಜಾತಿಗಳ ಜನಾಂಗದವರ ಬೇಡಿಕೆಗಳನ್ನು ಈಡೇರಿಸುವಂತೆ ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಹೆಚ್. ತಿಪ್ಪಣ್ಣ ತುರ್ಚಘಟ್ಟ ಅವರ ಅಧ್ಯಕ್ಷತೆಯಲ್ಲಿ ನಗರದ ಉಪ್ಪಾರ ಹಾಸ್ಟೆಲ್‍ನಲ್ಲಿ ಇಂದು ನಡೆದ ಸಭೆಯಲ್ಲಿ ಸರ್ಕಾರವನ್ನು ಹಕ್ಕೊತ್ತಾಯಿಸಲಾಯಿತು.

ಪ್ರವರ್ಗ-1ರ ಜಾತಿಗಳಾದ ಉಪ್ಪಾರ, ಗೊಲ್ಲ (ಯಾದವ), ಗಂಗಾಮತಸ್ಥ, ದೊಂಬಿ ದಾಸ, ಗೂರ್ಖಾ ಮತ್ತಿತರೆ ಜಾತಿಗಳು ಸೇರಿ ದಂತೆ, ಎಲ್ಲಾ ಜಾತಿಗಳ ಕುಲ ಶಾಸ್ತ್ರೀಯ ಅಧ್ಯ ಯನ ನಡೆಸುವುದೂ ಸೇರಿದಂತೆ, ವಿವಿಧ ಬೇಡಿಕೆ ಗಳ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು. 1 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಈ ಸಮುದಾಯಗಳ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಅಭಿವೃದ್ಧಿಗೆ ಸರ್ಕಾರಗಳು ಗಮನ ಹರಿಸದೇ ಕಡೆಗಣಿಸುತ್ತಿರುವುದಾಗಿ ವಿವಿಧ ಸಮುದಾಯ ಗಳ ಮುಖಂಡರಿಂದ ಆಕ್ಷೇಪ ವ್ಯಕ್ತವಾಯಿತು.

ಸರ್ಕಾರಗಳು ಈ ಸಮುದಾಯಗಳಿಗೆ ಸಮರ್ಪಕ ಕಾರ್ಯಕ್ರಮ ರೂಪಿಸುತ್ತಿಲ್ಲ. ಈ ಸಮುದಾಯಕ್ಕೆ ನೀಡಿದ್ದ ಸೌಲಭ್ಯಗಳನ್ನು ಇತ್ತೀಚೆಗೆ ಕಡಿತಗೊಳಿಸಲಾಗುತ್ತಿದೆ. ಪ್ರವರ್ಗ-1ರ ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸಿ, ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಅನುಕೂಲಕರ ಕಾರ್ಯಕ್ರಮ ರೂಪಿಸಬೇಕು. ನಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಿ, ಅಗತ್ಯ
ಕ್ರಮ ಕೈಗೊಳ್ಳಲು ಸಂಬಂಧಿಸಿದ ಸಚಿವರು, ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ವಿವಿಧ ಸಮುದಾಯಗಳ ಮುಖಂಡರು ಸಭೆಯಲ್ಲಿ ಒತ್ತಾಯಿಸಿದರು.

ಪರಿಶಿಷ್ಟ ವಿದ್ಯಾರ್ಥಿಗಳಿಗೆ ನೀಡುವಂತೆ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ, ಶೈಕ್ಷಣಿಕ ಸೌಲಭ್ಯಗಳನ್ನು ಈ ಹಿಂದೆ ನೀಡುತ್ತಿದ್ದಂತೆ ಪ್ರವರ್ಗ-1ರ ವಿದ್ಯಾರ್ಥಿಗಳಿಗೂ ನೀಡಬೇಕು. ಪ್ರವರ್ಗ-1ರ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನ ಮಾಡಬೇಕು. ಇದಕ್ಕಾಗಿ 5 ಕೋಟಿ ಅನುದಾನ ನಿಗದಿಪಡಿಸಬೇಕು. ವಿವಿಗಳಲ್ಲಿ ಪ್ರವರ್ಗ-1ರ ಜಾತಿಗಳ ಕೋಶವನ್ನು ಮರು ಸ್ಥಾಪಿಸಬೇಕು. ಹಾಸ್ಟೆಲ್‍ಗಳನ್ನು ವಿವಿಗಳಲ್ಲಿ ಪುನರಾರಂಭಿಸಬೇಕು. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಉತ್ತೀರ್ಣರಾದವರಿಗೆ ಬಹುಮಾನದ ಹಣ ಘೋಷಿಸುವಂತೆ ಆಗ್ರಹಿಸಿದರು.

ಪರಿಶಿಷ್ಟರಿಗೆ ಇರುವಂತೆ ಪ್ರವರ್ಗ-1ರ ಜಾತಿಗಳಿಗೆ ಭೂ ಒಡೆತನ ಯೋಜನೆ ಅನುಷ್ಠಾನಗೊಳಿಸಬೇಕು. ಉದ್ದಿಮೆದಾರರಿಗೆ 10 ಕೋಟಿ ರೂ.ವರೆಗೆ ಶೇ.4ರಷ್ಟು ಬಡ್ಡಿ ದರದ ಸಾಲ ನೀಡಬೇಕು. ಕರ್ನಾಟಕ ಕೈಗಾರಿಕಾ ಕಾರಿಡಾರ್‍ನಲ್ಲಿ ಪ್ರವರ್ಗ-1ರ ಜಾತಿಯವರಿಗೆ ಕೈಗಾರಿಕಾ ನಿವೇಶನ ನೀಡಬೇಕು. ಈ ನಿವೇಶನಗಳನ್ನು ಶೇ.50ರ ಅನುದಾನದಲ್ಲಿ ಮಂಜೂರು ಮಾಡಬೇಕು. ಬಾಕಿ ಶೇ.50 ಅನುದಾನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಭರಿಸಬೇಕು. ಪ್ರವರ್ಗ-1ರ ಜಾತಿ ಪ್ರತಿನಿಧಿಸುವ ವಿಧಾನಸಭೆ, ವಿಧಾನ ಪರಿಷತ್ ಸದಸ್ಯರಲ್ಲಿ ಕನಿಷ್ಟ ಇಬ್ಬರಿಗೆ ಸಚಿವ ಸ್ಥಾನ ನೀಡಬೇಕು. ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಚುನಾವಣೆಗಳಲ್ಲಿ ಪ್ರವರ್ಗ-1ರ ಜಾತಿಗೆ ಮೀಸಲು ಸ್ಥಾನಗಳನ್ನು ಪ್ರತ್ಯೇಕವಾಗಿ ನಿಗದಿಪಡಿಸಬೇಕು. ಸರ್ಕಾರದ ಅಧೀನದ ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನು, ಸದಸ್ಯರನ್ನು ನೇಮಕಾತಿ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಯಿತು.

ಯಾದವ ಮಹಾಸಭಾದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ಮಾತನಾಡಿ, ಪ್ರವರ್ಗ-1ರ ವಿವಿಧ ಸಮುದಾಯಗಳ ಬೇಡಿಕೆಗಳನ್ನು ಮುಂದಿಟ್ಟುಕೊಂಡು, ಹಿಂದುಳಿದ ವರ್ಗಗಳ ಹಕ್ಕೊತ್ತಾಯಿಸುವ ಕುರಿತಂತೆ ಚರ್ಚಿಸಲು ಇದೇ ದಿನಾಂಕ 24ರಂದು ನಗರದ ಹದಡಿ ರಸ್ತೆಯ ಉದಯ ಮಾರ್ಟ್ ಪಕ್ಕದ ಕನ್ವೆನ್ಷನ್ ಹಾಲ್‍ನಲ್ಲಿ ಚಿಂತನಾ ಸಭೆಯನ್ನು ಕರೆಯಲಾಗಿದೆ ಎಂದು ತಿಳಿಸಿದರು.

ಉಪ್ಪಾರ ಮುಖಂಡರಾದ ತುರ್ಚಘಟ್ಟ ಎಸ್. ಬಸವರಾಜಪ್ಪ, ಮಾಜಿ ಮಹಾಪೌರರೂ,  ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರೂ ಆಗಿರುವ ಶ್ರೀಮತಿ ಡಿ.ಎಸ್. ಉಮಾ ಪ್ರಕಾಶ್, ಸದಸ್ಯ ಪಿ.ಎಸ್.ಬಸವರಾಜ, ಮಾಜಿ ಸದಸ್ಯೆ ಮಂಜುಳಮ್ಮ, ಹಿರಿಯ ವಕೀಲ ಎ.ವೈ. ಪ್ರಕಾಶ್, ಯುವ ಉದ್ಯಮಿ ಉದಯ ಶಿವಕುಮಾರ್‌, ಬಸವರಾಜ ಸಾಗರ್, ಬಿ.ಜಿ.ರೇವಣಸಿದ್ದಪ್ಪ, ತುರ್ಚಘಟ್ಟ ಶ್ರೀನಿವಾಸ, ಮಾಯಕೊಂಡ ಮಂಜುನಾಥ, ಯಾದವ ಸಂಘದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಗಂಗಾಮತಸ್ಥ ಸಮಾಜದ ಜಿಲ್ಲಾಧ್ಯಕ್ಷ ಮಾಗಾನಹಳ್ಳಿ ಬಿ.ಕೆ.ಮಂಜುನಾಥ ಸೇರಿದಂತೆ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!