ದಾವಣಗೆರೆ, ಜು. 14 – ಪಹಣಿ ವಿವರಗಳು ಹೊಂದಾಣಿಕೆಯಾಗಿಲ್ಲ ಎಂಬ ಕಾರಣಕ್ಕಾಗಿ ರೈತರು ಕೊರೊನಾ ಪರಿಹಾರದಿಂದ ವಂಚಿತರಾಗಬಾರದು. ಈ ಬಗ್ಗೆ ಉಪವಿಭಾಗಾಧಿಕಾರಿ, ತಹಶೀ ಲ್ದಾರ್ ಹಾಗೂ ಕಂದಾಯ ಅಧಿಕಾರಿಗಳು ತ್ವರಿತವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಡಳಿತ ಭವನದಲ್ಲಿ ಇಂದು ಕರೆಯಲಾಗಿದ್ದ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲೆಯ ತೋಟಗಾರಿಕೆ ಬೆಳೆಗಾರರಿಗೆ ನೀಡಲಾಗಿರುವ 1.63 ಲಕ್ಷ ರೂ. ಅನುದಾನದಲ್ಲಿ 50 ಲಕ್ಷ ರೂ. ರೈತರಿಗೆ ತಲುಪಿಲ್ಲ ಎಂಬ ವಿವರ ಪಡೆದ ನಂತರ ಈ ಸೂಚನೆ ನೀಡಿದ್ದಾರೆ.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಲಕ್ಷ್ಮೀಕಾಂತ್ ಬೋಮ್ಮನ್ನರ್ ಮಾತನಾಡಿ, ರೈತರು ಸಾವನ್ನಪ್ಪಿದ ಸಂದರ್ಭದಲ್ಲಿ ಆರ್.ಟಿ.ಸಿ. ಮಕ್ಕಳ ಹೆಸರಿಗೆ ಖಾತೆಯಾಗದೇ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಅಲ್ಲದೆ ರೈತರು ಜಾತಿ ಪ್ರಮಾಣ ಪತ್ರದಲ್ಲಿ ಆರ್ಡಿ ಸಂಖ್ಯೆ ಇಲ್ಲದ ಕಾರಣಕ್ಕಾಗಿ, ಹೊಸದಾಗಿ ಜಾತಿ ಪ್ರಮಾಣ ಪತ್ರ ಪಡೆದು ರೈತರು ಸಲ್ಲಿಸಬೇಕಿದೆ ಎಂದು ಹೇಳಿದರು.
ಸರ್ಕಾರ ನೆರವಿಗಾಗಿ ಬಿಡುಗಡೆ ಮಾಡಿದ ಹಣ ನಮ್ಮ ಖಾತೆಯಲ್ಲೇ ಉಳಿದರೆ ಏನು ಪ್ರಯೋಜನ? ಸಂಬಂಧಿಸಿದ ಅಧಿಕಾರಿಗಳು ಜನರ ಮನೆ ಬಾಗಿಲಿಗೆ ತೆರಳಿ ನೆರವು ಕಲ್ಪಿಸಬೇಕು ಎಂದು ತಾಕೀತು ಮಾಡಿದರು.
ಬಿಪಿಎಲ್ ಪರಿಹಾರ : ಸರ್ಕಾರ ಬಿಪಿಎಲ್ ಕಾರ್ಡುದಾರರು ಕೊರೊನಾದಿಂದ ಸಾವನ್ನಪ್ಪಿದಾಗ ಲಕ್ಷ ರೂ. ಪರಿಹಾರ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ, ಕೊರೊನಾದಿಂದ ಮೃತರ ಕುಟುಂಬದವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಾಗಿದ್ದರೆ ಪರಿಹಾರ ತಲುಪಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಹಾರ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಬೆಳೆ ವಿಮೆ ಕಡಿಮೆ : ಅಡಿಕೆ, ಕಾಳುಮೆಣಸು ಇತ್ಯಾದಿಗಳಿಗೆ ಹವಾಮಾನ ವಿಮೆ ಮಾಡಿಸಲು ಜೂನ್ 30ರವರೆಗೆ ಅವಕಾಶ ಇದ್ದರೂ, ಜೂನ್ 28ಕ್ಕೇ ವಿಮೆ ನೀಡುವುದನ್ನು ನಿಲ್ಲಿಸಲಾಗಿದೆ ಎಂದು ಸಭೆಯಲ್ಲಿ ಆರೋಪಿಸಲಾಯಿತು. ಈ ಬಗ್ಗೆ ಕ್ರಮ ತೆಗೆದುಕೊಂಡು ರೈತರಿಗೆ ನೆರವಾಗುವಂತೆ ಸಚಿವರು ಹೇಳಿದರು.
ಸಿ.ಜಿ. ಆಸ್ಪತ್ರೆಯಲ್ಲಿ ಕೊರೊನೇತರ ಚಿಕಿತ್ಸೆ
ಕೊರೊನಾ ಎರಡನೇ ಅಲೆ ತೀವ್ರತೆ ಈಗ ಕಡಿಮೆಯಾಗಿದೆ. ಜಿಲ್ಲಾ ಸಿ.ಜಿ. ಆಸ್ಪತ್ರೆಯಲ್ಲಿ ಕೊರೊನೇತರ ರೋಗಿಗ ಳಿಗೆ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಶಸ್ತ್ರಚಿಕಿತ್ಸಾ ಘಟಕವನ್ನು ನವೀಕರಣ ಗೊಳಿಸಲಾಗಿದೆ. ಬೇರೆ ಆಸ್ಪತ್ರೆಗೆ ರೆಫ ರೆನ್ಸ್ ನೀಡುವುದನ್ನು ಕಡಿಮೆ ಮಾಡಲು ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿಜಯ್ ಕುಮಾರ್ ಮಾತನಾಡಿ, ಹರಿಹರದ ಗ್ರಾಸಿಂ ಕಂಪನಿ ಸಹಯೋಗದಲ್ಲಿ ಜಿಲ್ಲೆಯ 8 ಸಾವಿರಕ್ಕೂ ಹೆಚ್ಚು ಅಪೌಷ್ಠಿಕ ಮಕ್ಕಳಿಗೆ ಸ್ಪಿರುಲಿನ ಚಿಕ್ಕಿ ನೀಡಲಾಗುವುದು ಎಂದರು.
ಅಪೌಷ್ಠಿಕತೆ ಎದುರಿಸುತ್ತಿರುವ ಮಕ್ಕಳ 5 ಸಾವಿರ ಪೋಷಕರಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಡಿ.ಹೆಚ್.ಒ. ಡಾ. ನಾಗರಾಜ್ ತಿಳಿಸಿದರು.
ಹೂಳು ತೆಗೆಯುವುದು ವಿಳಂಬ; ತರಾಟೆ
ತುಪ್ಪದಹಳ್ಳಿ ಕೆರೆ ಹೂಳು ತೆಗೆಯಲು ತಿಳಿಸಿ 4 ತಿಂಗಳಾಗಿದೆ. ಇನ್ನೂ ಸಹ ಅಧಿಕಾರಿಗಳು ಸರ್ವೆಗೆ ಟೆಂಡರ್ ಕರೆದಿಲ್ಲ. ಅಕ್ಟೋಬರ್ನಲ್ಲಿ ಕೆರೆಗೆ ನೀರು ಬರಲಿದೆ. ನಂತರ ಹೂಳು ಹೇಗೆ ತೆಗೆಯುತ್ತೀರಾ? ಎಂದು ಶಾಸಕ ಎಸ್.ವಿ. ರಾಮಚಂದ್ರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಣ್ಣ ನೀರಾವರಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಇದುವರೆಗೆ ಕರೆದ ಒಂದೂ ಸಭೆಗೆ ಬಂದಿಲ್ಲ ಎಂದು ರಾಮಚಂದ್ರ ಆಕ್ರೋಶ ವ್ಯಕ್ತಪ ಡಿಸಿದರು. ಗೈರಿಗಾಗಿ ನೋಟಿಸ್ ಕಳಿಸಲಾಗಿದೆಯಾದರೂ, ಎಕ್ಸಿಕ್ಯೂಟಿವ್ ಇಂಜಿನಿಯರ್ ನೀಡಿರುವ ಉತ್ತರ ಸಮರ್ಪಕವಾಗಿಲ್ಲ. ಈ ಬಗ್ಗೆ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್ ತಿಳಿಸಿದರು.
10 ಕೆ.ಜಿ. ಅಕ್ಕಿ ನೀಡಲು ಸಿ.ಎಂ.ಗೆ ಮನವಿ
ಬಡವರಿಗೆ ನೀಡುವ ಅಕ್ಕಿ ಪ್ರಮಾಣವನ್ನು 10 ಕೆ.ಜಿ.ಗೆ ಹೆಚ್ಚಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ತಿಳಿಸಿದ್ದಾರೆ.
ಲಾಕ್ಡೌನ್ನಿಂದ ಕೂಲಿ ಮತ್ತು ಉದ್ಯೋಗ ಸಮಸ್ಯೆಯಿಂದ ಆರ್ಥಿಕವಾಗಿ ತೊಂದರೆ ಅನುಭವಿಸಿದ ಬಿಪಿಎಲ್ ಕುಟುಂಬಗಳಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ದೀಪಾವಳಿ ವರೆಗೂ ಉಚಿತವಾಗಿ ಅಕ್ಕಿ, ಆಹಾರ ಧಾನ್ಯ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಇದರ ಜೊತೆಗೆ ರಾಜ್ಯ ಸರ್ಕಾರವೂ ಕೂಡ ಉಚಿತವಾಗಿ ಅಕ್ಕಿ, ಗೋಧಿ, ರಾಗಿ ನೀಡುತ್ತಿದೆ. ಕೋವಿಡ್ ಸಂಕಷ್ಟ ಸಮಯದಲ್ಲಿ ಯಾರೂ ಕೂಡ ಹಸಿವಿನಿಂದ ಬಳಲಬಾರದು ಎಂದವರು ಹೇಳಿದ್ದಾರೆ.
ಹಾಲು ಒಕ್ಕೂಟಕ್ಕೆ ಶೀಘ್ರದಲ್ಲೇ ಜಾಗ
ಜಿಲ್ಲೆಯಲ್ಲಿ ಹಾಲು ಒಕ್ಕೂಟ ಸ್ಥಾಪನೆಗಾಗಿ ಹೆಚ್. ಕಲಪನಹಳ್ಳಿಯಲ್ಲಿ ಗುರುತಿಸಲಾಗಿರುವ 15 ಎಕರೆ ಜಾಗಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಇದ್ದ 60 ದಿನಗಳ ಅವಧಿ ಮುಗಿದಿದೆ. ಶೀಘ್ರದಲ್ಲೇ ಜಮೀನು ಲಭ್ಯವಾಗಲಿದೆ ಎಂದು ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ತಿಳಿಸಿದ್ದಾರೆ.
ಗ್ರಾಮೀಣ ವಸತಿ ರಹಿತರಿಗೆ ಸರ್ಕಾರಿ ಜಾಗ
ಗ್ರಾಮೀಣ ಭಾಗದ ನಿವೇಶನ ರಹಿತರಿಗೆ ಸರ್ಕಾರದ ಜಮೀನು ಲಭ್ಯವಿದ್ದರೆ ನಿವೇಶನಗಳಾಗಿ ಪರಿವರ್ತಿಸಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಡಿಸಿ ಮಹಾಂತೇಶ್ ಬೀಳಗಿ, ಸರ್ಕಾರಿ ಜಾಗಗಳನ್ನು ಗುರುತಿಸಿ ಸಮೀಕ್ಷೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 8 ಸಾವಿರ ರೈತರು ಪ್ರಧಾನ ಮಂತ್ರಿ ಫಸಲು ವಿಮೆ ಪಡೆದಿದ್ದಾರೆ ಎಂದು ಕೃಷಿ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಮಾಹಿತಿ ನೀಡಿದರು.
ವಿಮೆ ಪ್ರಮಾಣ ಕಡಿಮೆ ಆಯಿತು. ಜುಲೈ 30ರವರೆಗೆ ವಿಮೆಗೆ ಸಮಯ ಇದೆ. ಈಗಾಗಲೇ ಮಳೆ ಪ್ರಮಾಣ ಕಡಿಮೆ ಇದೆ. ಹೆಚ್ಚು ವಿಮೆ ಮಾಡಿಸಿದರೆ, ಮಳೆ ಇನ್ನೂ ಕಡಿಮೆಯಾದರೂ ರೈತರಿಗೆ ಅನುಕೂಲವಾಗುತ್ತದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.
ಜಿಲ್ಲೆಯಲ್ಲಿ ಇದುವರೆಗೂ 120 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಆದರೆ, 114 ಮಿಮೀ ಮಳೆಯಾಗಿದೆ. ಒಟ್ಟು ಕೊರತೆ ಶೇ.5ರಷ್ಟಿದೆ. ಮೃಗಶಿರ ಹಾಗೂ ಆರಿದ್ರಾ ಮಳೆ ಬರದ ಕಾರಣ ಸಮಸ್ಯೆ ಹೆಚ್ಚಾಗಿತ್ತಾದರೂ, 2-3 ದಿನಗಳಿಂದ ಮಳೆಯಾಗುತ್ತಿರುವುದು ಸಮಾಧಾನಕರವಾಗಿದೆ ಎಂದರು.
ಮಕ್ಕಳ ಘಟಕಕ್ಕೆ 36 ಐಸಿಯು : ಮೂರನೇ ಕೊರೊನಾ ಅಲೆ ಹಿನ್ನೆಲೆಯಲ್ಲಿ ಜಿಲ್ಲಾ ಸಿ.ಜಿ. ಆಸ್ಪತ್ರೆಯಲ್ಲಿ ಮಕ್ಕಳ ಘಟಕಕ್ಕಾಗಿ 36 ಐಸಿಯು ಹಾಗೂ 36 ವೆಂಟಿಲೇಟರ್ ಖರೀದಿಸಬೇಕು. ಎಸ್ಡಿಆರ್ಎಫ್ ಮೂಲಕ ಖರೀದಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕ್ರಮ ತೆಗೆದುಕೊಳ್ಳಬೇಕೆಂದು ಸಚಿವ ಭೈರತಿ ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕ ಎಸ್.ವಿ. ರಾಮಚಂದ್ರಪ್ಪ, ಶಾಸಕ ಎಸ್.ಎ. ರವೀಂದ್ರನಾಥ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್, ಡಿ.ಸಿ.ಸಿ. ಅಧ್ಯಕ್ಷ ವೇಣುಗೋಪಾಲ ರೆಡ್ಡಿ, ಜಿ.ಪಂ. ಉಪ ಕಾರ್ಯದರ್ಶಿ ಆನಂದ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.