ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ಸನ್ಮಾನ ಸಮಾರಂಭ
ದಾವಣಗೆರೆ, ಪೆ.22- ಛಲವಾದಿ ಸಮಾಜವನ್ನು ಸಂಘಟಿತಗೊಳಿಸಿ, ಮುಖ್ಯವಾಹಿನಿಗೆ ತರಲು ಕಾರ್ಯ ಯೋಜನೆ ರೂಪಿಸಲಾಗುತ್ತಿದೆ ಎಂದು ಹಾವೇರಿ ಶಾಸಕರೂ, ರಾಜ್ಯ ಅನುಸೂಚಿತ ಜಾತಿ, ಪಂಗಡಗಳ ಆಯೋಗದ ಅಧ್ಯಕ್ಷರೂ ಆದ ನೆಹರು ಚ.ಓಲೇಕಾರ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಸೋಮವಾರ ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾಜವನ್ನು ಜಿಲ್ಲಾವಾರು ಸಂಘಟನೆ ಮಾಡಿ, ಪ್ರತಿ ಜಿಲ್ಲೆಯಲ್ಲೂ 10 ಜನ ಪ್ರತಿನಿಧಿಗಳನ್ನು ಮಾಡಿ, ಎಲ್ಲಾ ಜಿಲ್ಲೆಯ 300 ಪ್ರತಿನಿಧಿಗಳನ್ನೂ ಸೇರಿಸಿ ಬೆಂಗಳೂರಿನಲ್ಲಿ ಸಭೆ ನಡೆಸಿ, ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಪದಾಧಿಕಾರಿಗಳ ಆಯ್ಕೆ ಮಾಡಲಾಗುವುದು ಎಂದರು. ಪ್ರತಿ ಜಿಲ್ಲೆಗೂ ಪ್ರಾತಿನಿಧ್ಯ ನೀಡಲು ಕಾರ್ಯತಂತ್ರ ರೂಪಿಸಿ, ಆಡಳಿತ ಸಮಿತಿ ರಚಿಸಿ ಸಮಾಜದ ಸಮಸ್ಯೆಗಳನ್ನು ಬಗೆಹರಿಸುವ ಆಶಯ ಹೊಂದಲಾಗಿದೆ ಎಂದು ಹೇಳಿದರು.
ಸಮಾಜದ ಜನತೆ ಯಾವುದೇ ಸಮಸ್ಯೆ ಗಳಿದ್ದರೆ ರಾಜ್ಯ ಅನುಸೂಚಿತ ಜಾತಿ, ಪಂಗಡಗಳ ಆಯೋಗದ ಕಚೇರಿಗೆ ಪತ್ರ ಬರೆಯಬಹುದು ಅಥವಾ ಖುದ್ದಾಗಿ ಭೇಟಿ ಮಾಡಿ ಮನವಿ ನೀಡಿದರೂ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತೇನೆ. ಅರ್ಹ ರಿಗೆ ಸರ್ಕಾರಿ ಸವಲತ್ತುಗಳನ್ನು ನೀಡ ಲು ಕ್ರಮ ವಹಿಸುತ್ತೇನೆ ಎಂದರು.
ಗ್ರಾಮ ಪಂಚಾಯ್ತಿಗಳಲ್ಲಿ ಗೆಲುವು ಕಂಡ ಸಮಾಜ ಬಾಂಧವರು, ತಮ್ಮ ಕಾರ್ಯಕ್ಷೇತ್ರವನ್ನು ಅಷ್ಟಕ್ಕೆ ಸೀಮಿತಗೊಳಿಸದೆ, ತಾಲ್ಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಗಳಲ್ಲೂ ಅವಕಾಶ ಪಡೆಯಲು ಕಾರ್ಯೋನ್ಮುಖ ರಾಗ ಬೇಕು ಎಂದು ಸಲಹೆ ನೀಡಿದರು.
ಯಾವುದೇ ಜನಪ್ರತಿನಿಧಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದರೆ ಮಾತ್ರ ಜನರ ಪ್ರೀತಿ, ವಿಶ್ವಾಸ ಗಳಿಸಿ ಚುನಾವಣೆ ಗೆಲ್ಲಲು ಸಾಧ್ಯ ಎಂಬುದಕ್ಕೆ ನಾನೇ ಉದಾಹರಣೆ ಎಂದ ಓಲೇಕಾರ್, ಚುನಾವಣೆಯಲ್ಲಿ ಗೆದ್ದ ನಂತರ ಜನರ ಕಷ್ಟಗಳಿಗೆ ಸ್ಪಂದಿಸುವಂತೆ ಹೇಳಿದರು. ಹುಟ್ಟಿದ ಮೇಲೆ ಸಮಾಜದ ಋಣ ತೀರಿಸಬೇಕು. ಇಲ್ಲದಿದ್ದರೆ ಪ್ರಾಣಿಗಳಳ ಜೀವನಕ್ಕೂ, ಮನುಷ್ಯರ ಜೀವನಕ್ಕೂ ವ್ಯತ್ಯಾಸ ಇರುವುದಿಲ್ಲ. ಅಂಬೇಡ್ಕರ್ ಜನಿಸಿದ ಪುಣ್ಯ ಭೂಮಿಯಲ್ಲಿರುವ ನಾವು ಸಮಾಜದ ಬಗ್ಗೆ ನಿರ್ಲಕ್ಷ್ಯ ತೋರಬಾರದು ಎಂದರು.
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಸೇರಿದಂತೆ ಸಮಾಜದ ಹಿರಿಯ ಮುಖಂಡರು ಸಮಾಜದ ಹೆಸರೇಳಿ ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಸಮಾಜವನ್ನು ಪ್ರೀತಿಸಿ, ಸಂಘಟಿತಗೊಳಿಸಲು ಮುಂದಾಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಾಜದ ಮುಖಂಡ ಬಿ.ಡಿ. ಸಾಹುಕಾರ್, ಬೇರೆ ಸಮಾಜದವರಿಗೆ ಹೋಲಿಸಿದರೆ ಛಲವಾದಿ ಸಮಾಜ ಸಂಘಟನೆಯಲ್ಲಿ ತೀವ್ರ ಹಿಂದುಳಿದಿದೆ. ಉಳ್ಳವರೇ ಮೀಸಲಾತಿಗಾಗಿ ಹೋರಾಡುತ್ತಿದ್ದಾರೆ. ಆದರೆ ನಮಗೆ ಇರುವ ಮೀಸಲಾತಿಗೂ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸಮಾಜದ ಸಂಘಟನೆ ಅತ್ಯಗತ್ಯ ಎಂದರು.
ಡಾ.ಬಿ.ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು ಟ್ರಸ್ಟಿ ವಿ.ಎಸ್. ಕುಬೇರಪ್ಪ ಮಾತನಾಡಿ, ಸಮಾಜದ ಪ್ರತಿಯೊಬ್ಬರಿಗೂ ಅಂಬೇಡ್ಕರ್ ಅವರು ಹೇಳಿದ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಎಂಬ ಮೂರು ಮಂತ್ರಗಳು ನೆನಪಿರಬೇಕು ಎಂದರು.
ಇದೇ ಸಂದರ್ಭದಲ್ಲಿ ಹಾವೇರಿ ಶಾಸಕರೂ, ರಾಜ್ಯ ಅನುಸೂಚಿತ ಜಾತಿ, ಪಂಗಡಗಳ ಆಯೋಗದ ಅಧ್ಯಕ್ಷರೂ ಆದ ನೆಹರು ಚ.ಓಲೇಕಾರ ಹಾಗೂ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಆಯ್ಕೆಯಾದ ಛಲವಾದಿ ಸಮಾಜದ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾಘಟಕದ ಉಪಾಧ್ಯಕ್ಷ ಸಿ.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಜಗನ್ನಾಥ್, ಎಸ್.ಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು. ಜಯಪ್ರಕಾಶ್ ತೂಲಹಳ್ಳಿ, ಶಂಭು ಕಳಸದ್, ಎನ್.ರುದ್ರಮುನಿ, ಹೆಚ್.ವಸಂತ್, ಬಿ.ಡಿ. ಸಾವಕ್ಕನವರ್, ನಿರಂಜನಮೂರ್ತಿ, ಶಿವಪ್ಪ, ಜಯಪ್ರಕಾಶ್, ಗುರುಮೂರ್ತಿ ಇತರರು ಉಪಸ್ಥಿತರಿದ್ದರು.
ಜಿಲ್ಲಾ ಘಟಕ ಖಜಾಂಚಿ ಹೆಚ್.ನವೀನ್ ಕುಮಾರ್ ನಿರೂಪಿಸಿದರು. ಹೆಚ್.ವಸಂತ್ ಪ್ರಾರ್ಥಿಸಿದರು. ಟಿ.ಸ್. ರಾಮಯ್ಯ ವಂದಿಸಿದರು.