ಪ್ರಯಾಣಿಕರ ಸಂಖ್ಯೆ ಇಳಿಮುಖ
ದಾವಣಗೆರೆ, ಏ.23- ಕಳೆದ 15 ದಿನಗಳಿಂದ ನೌಕರರು ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರ ಕೈಗೊಂಡಿದ್ದ ಕಾರಣ ಆದಾಯದಲ್ಲಿ ಇಳಿಕೆ ಕಂಡ ಕೆಎಸ್ಆರ್ಟಿಸಿಗೆ, ಈಗ ಕೊರೊನಾ 2ನೇ ಅಲೆಯ ಅಬ್ಬರದಿಂದಲೂ ಆದಾಯಕ್ಕೆ ಪೆಟ್ಟು ಬೀಳುವಂತಾಗಿದೆ.
ಈಗಾಗಲೇ ಜಿಲ್ಲೆಯಲ್ಲಿನ 1100 ಜನ ಸಾರಿಗೆ ನೌಕರರು ಮುಷ್ಕರ ಕೈ ಬಿಟ್ಟು ಕೆಲಸಕ್ಕೆ ಹಾಜರಾಗಿದ್ದು, ಇನ್ನೇನು ಆದಾಯದಲ್ಲಿ ಸುಧಾರಿಸಿಕೊಳ್ಳಬಹುದೆಂಬ ಸಮಯದಲ್ಲಿ ಈಗ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ ಕಂಡು, ಮತ್ತೊಮ್ಮೆ ಆದಾಯಕ್ಕೆ ಕತ್ತರಿ ಬಿದ್ದಂತಾಗಿದೆ.
ಕೊರೊನಾ 2ನೇ ಅಲೆಯು ಜೋರಾಗಿರುವುದು ಒಂದು ಕಡೆಯಾದರೆ, ಹಗಲು-ರಾತ್ರಿ ಕರ್ಫ್ಯೂ ಕಾರಣ ಕೆಲಸ-ಕಾರ್ಯಗಳಿಗೆ, ವ್ಯಾಪಾರ-ವಹಿವಾಟು ಸೇರಿದಂತೆ ಇತರೆ ಕಾರಣಗಳಿಂದಾಗಿ ನಗರ, ತಾಲ್ಲೂಕು, ಜಿಲ್ಲೆಗಳಿಗೆ ಜನರ ಓಡಾಟ ಕಡಿಮೆಯಾಗಿರುವುದರಿಂದ ಬಸ್ ಗಳ ಪ್ರಯಾಣಿಕರ ಸಂಖ್ಯೆ ಕ್ಷೀಣಿಸಲು ಕಾರಣವೆನ್ನಲಾಗಿದೆ.
ಪ್ರತಿನಿತ್ಯ ದಾವಣಗೆರೆಯಿಂದ ಬೆಂಗಳೂರಿಗೆ ಸುಮಾರು 30 ಬಸ್ನಷ್ಟು ಜನರು ಪ್ರಯಾಣಿಸು ತ್ತಿದ್ದರು. ಇಂದು ಒಂದು ಬಸ್ನಲ್ಲಿ 25 ಜನರು ಪ್ರಯಾಣಿಸುವು ದನ್ನೇ ಕಾಣಲು ಸಾಧ್ಯವಾಗಿಲ್ಲ ಎಂದು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ ಹೆಬ್ಬಾಳ್ ತಿಳಿಸಿದರು.
ಬಸ್ ಚಾಲಕ ಸುರೇಶ್ ಹೇಳುವಂತೆ, ಜನರು ಹೆಚ್ಚಾಗಿ ಓಡಾಟ ಮಾಡುತ್ತಿಲ್ಲ. ಈಗಾಗಲೇ ಸರ್ಕಾರ ಹೇಳುವಂತೆ ಶೇ.50ರಷ್ಟು ಪ್ರಯಾಣಿಕರನ್ನು ಕರೆದೊಯ್ಯಬೇಕಾಗಿದೆ. ಅದರಲ್ಲಿ ಅರ್ಧ ಭಾಗದಷ್ಟು ಪ್ರಯಾಣಿಕರು ಬಂದಿಲ್ಲ ಎಂದಿದ್ದಾರೆ.
ಕೋವಿಡ್ ಪರೀಕ್ಷೆಗೆ ಸೂಚನೆ: ಈಗ ಎಲ್ಲಾ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದು, ಅವರುಗಳು ಕಳೆದ 15 ದಿನಗಳಿಂದ ಕೆಲಸಕ್ಕೆ ಬಂದಿರಲಿಲ್ಲ. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಎಲ್ಲಾ ನೌಕರರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ಸೂಚನೆ ನೀಡಲಾಗಿದೆ ಎಂದು ಸಿದ್ದೇಶ್ ಹೆಬ್ಬಾಳ್ ತಿಳಿಸಿದರು.