ಶಿಕ್ಷಣ ಉದ್ದಿಮೆ ಪಡೆಯಲು ಸಾಧನವಾಗಬಾರದು

ಜೆ.ಹೆಚ್‌. ಪಟೇಲ್ ಕಾಲೇಜಿನ ಘಟಿಕೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಎಸ್ಪಿ ರವಿನಾರಾಯಣ್ ಕಳಕಳಿ

ದಾವಣಗೆರೆ, ಫೆ.22- ಕೇವಲ ಪದವಿ ಪಡೆಯುವುದಷ್ಟೇ ಮುಖ್ಯವಲ್ಲ. ಜೀವನ ಮೌಲ್ಯಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕಾಗಿದೆ ಎಂದು ದಾವಣಗೆರೆ ವಿವಿ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಹೆಚ್‌.ಎಸ್‌. ಅನಿತಾ ಪದವೀಧರ ವಿದ್ಯಾರ್ಥಿಗಳಿಗೆ ಹಿತನುಡಿದರು.

ನಗರದ ಜೆ.ಹೆಚ್‌. ಪಟೇಲ್‌ ಕಾಲೇಜಿನಿಂದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾಲೇಜು ಘಟಿಕೋತ್ಸವ ಹಾಗೂ ಚಿಗುರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.

ಪದವಿಯನ್ನು ಯಶಸ್ವಿಯಾಗಿ ಪೂರೈಸಲು ಜ್ಞಾನಧಾರೆ ಎರೆದ ಶಿಕ್ಷಕರು ಹಾಗೂ ಆರ್ಥಿಕ ಮತ್ತು ನೈತಿಕ ಪ್ರೋತ್ಸಾಹ ನೀಡಿದ ಪೋಷಕರು ಪ್ರಮುಖ ಕಾರಣರಾಗಿರುತ್ತಾರೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ದಾವಣಗೆರೆ ವಿವಿ ಮಾಜಿ ಸಿಂಡಿಕೇಟ್‌ ಸದಸ್ಯ ಡಾ. ಹೆಚ್‌. ವಿಶ್ವನಾಥ್‌ ಅವರು, ಜೆ.ಹೆಚ್‌. ಪಟೇಲ್‌ ಕಾಲೇಜು ಕೇವಲ ಘಟಿಕೋತ್ಸವ ಮಾತ್ರವಲ್ಲದೇ ಹಲವು ಪ್ರಥಮಗಳಿಗೆ ನಾಂದಿ ಹಾಡಿದೆ ಎಂದರು.

ಪಾಲಿಕೆ ಆವರಣದಲ್ಲಿನ ಹುತಾತ್ಮ ಯೋಧರ ಸ್ಮರಣೆ ಮಾಡುವ ಮೂಲಕ ಕೆಲವು ಪಾರ್ಕ್‌ಗಳನ್ನು ದತ್ತು ತೆಗೆದುಕೊಂಡು ಸ್ವಚ್ಛತೆ ಮಾಡುತ್ತಿರುವುದು ಕಾಲೇಜಿನ ವಿಶೇಷತೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ನಿವೃತ್ತ ಪೊಲೀಸ್‌ ಅಧಿಕಾರಿ ರವಿನಾರಾಯಣ್ ಮಾತನಾಡಿ, ಶಿಕ್ಷಣ ಉದ್ದಿಮೆ ಪಡೆಯಲು ಸಾಧನವಾಗಬಾರದು. ಸಾಮಾಜಿಕ ಕಳಕಳಿ ಹೊಂದಬೇಕು ಎಂದರು.

ತಾನೂ ಜೀವಿಸುವ ಜೊತೆಗೆ ಇತರರು ಜೀವಿಸಲು ಅವಕಾಶ ಮಾಡಿಕೊಡಬೇಕು ಎಂದು ಹೇಳುವ ಮೂಲಕ ಪದವಿ ಪಡೆದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸೆಟ್‌ ಡೆಮ್ ಛೇರ್ಮನ್ ಪ್ರೊ. ಕೆ.ಆರ್‌. ಸಿದ್ದಪ್ಪ ಮಾತನಾಡಿ, ನಮ್ಮ ಸುತ್ತಮುತ್ತಲಿನ ಜನರ ನೋವು-ನಲಿವುಗಳಿಗೆ ಸ್ಪಂದಿಸುವುದೇ ಜೀವನವಾಗಬೇಕು. ಇತಿಹಾಸ ಮರೆತವರು ಇತಿಹಾಸ ಸೃಷ್ಠಿಸಲಾರರು. ನಾವು ಗಳಿಸಿರುವುದರಲ್ಲಿ ಯಶಸ್ಸು ಇರಲಾರದು. ನಮ್ಮಿಂದ ಇತರರು ಪಡೆದ ಸ್ಫೂರ್ತಿಯಲ್ಲಿ ನಮ್ಮ ಯಶಸ್ಸು ಅಡಗಿದೆ ಎಂದರು.

ಆತ್ಮನಿರ್ಭರತೆ ಮತ್ತು ಕೌಶಲ್ಯ ಜೀವನ ಕಟ್ಟಿಕೊಡಬಲ್ಲದು. ಉತ್ತಮ ಚಾರಿತ್ರ್ಯದಿಂದ ಉತ್ತಮ ಬದಲಾವಣೆ ಸಾಧ್ಯ. ಇದು ಜಗದ ನಿಯಮ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಪ್ರಾಂಶುಪಾಲರಾದ ಶ್ರೀಮತಿ ಪ್ರತಿಭಾ ಪಿ. ದೊಗ್ಗಳ್ಳಿ ಮಾತನಾಡಿ, 2008 ರಲ್ಲಿ ಆರಂಭಗೊಂಡ ಜೆ.ಹೆಚ್‌. ಪಟೇಲ್‌ ಕಾಲೇಜು ಹಲವು ವಿಶೇಷತೆಗಳನ್ನು ರೂಢಿಸಿಕೊಂಡು ಬಂದಿದೆ. ಕೇವಲ ವಿವಿ ಮಟ್ಟದಲ್ಲಿ ನಡೆಯುತ್ತಿರುವ ಪದವಿ ಪ್ರದಾನ ಸಮಾರಂಭವನ್ನು ಪದವಿ ಕಾಲೇಜುಗಳಲ್ಲಿ ವಿಶಿಷ್ಟ ರೀತಿಯಲ್ಲಿ ಮಾಡುವುದನ್ನು ನಮ್ಮ ಕಾಲೇಜು ತೋರಿಸಿಕೊಟ್ಟಿದೆ ಎಂದರು.

ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕೌಶಲ್ಯಗಳನ್ನು ರೂಢಿಸಿಕೊಂಡಾಗ ಪರಿಪೂರ್ಣ ವಿದ್ಯಾರ್ಥಿಗಳಾಗಲು ಸಾಧ್ಯ ಎಂದು ಹೇಳಿದರು.

ಇದೇ ವೇಳೆ ಕಾಲೇಜಿನ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಗೌರವಿಸಲಾಯಿತು.

ಪಿ.ವಿ. ಕೀರ್ತಿ ಮತ್ತು ಸಂಗಡಿಗರು ಆಶಯಗೀತೆ ಹಾಡಿದರು. ಕಾಲೇಜಿನ ಕಾರ್ಯ ದರ್ಶಿ ಶೋಭಾ ಸಾಗರ್‌ ಶೀಲವಂತರ್‌ ಸ್ವಾಗತಿಸಿದರು. ಜಿ. ಹರ್ಷಿತ ನಿರೂಪಿಸಿದರು. ಶೈಲಾ ಎನ್‌ ಶೆಟ್ಟಿ ವಂದಿಸಿದರು.

error: Content is protected !!