ಮಲ್ಲಿಕಾರ್ಜುನ್‌ ದೂರದೃಷ್ಟಿಯಿಂದ ಜನಪರ ಕೆಲಸಗಳು : ಶಾಸಕ ಎಸ್ಸೆಸ್‌

ದಾವಣಗೆರೆ, ಜು.12- ದಾವಣಗೆರೆ ಸ್ಮಾರ್ಟ್‍ಸಿಟಿ ಯೋಜನೆಯಡಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಸ್.ಎಸ್.ಎಂ ನಗರ `ಬಿ’ ಬ್ಲಾಕ್‍ನಲ್ಲಿ ಕ್ರೀಡಾಂಗಣ, ಸರ್ಕಾರಿ ಶಾಲೆಯ ಸುಧಾರಣೆಯ ಅಭಿವೃದ್ಧಿ ಕಾಮಗಾರಿ ಹಾಗೂ ಮಾಗಾನಹಳ್ಳಿ ರಸ್ತೆಯವರೆಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣದ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರು ಇಂದು ಭೂಮಿ ಪೂಜೆ ನೆರವೇರಿಸಿದರು.

ಬಾಷಾನಗರದಲ್ಲಿ ನಿರ್ಮಿಸಲಾಗಿರುವ ಹೆರಿಗೆ ಆಸ್ಪತ್ರೆ ಕಟ್ಟಡ, ವೀರ ಮದಕರಿ ನಾಯಕ ವೃತ್ತದ ಬಳಿ ನಿರ್ಮಾಣಗೊಂಡಿರುವ ದುರ್ಗಾಂಬಿಕಾ ಸಮುದಾಯ ಭವನವನ್ನು ಹಿರಿಯ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ ಸಚಿವರು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದ ಎಸ್ಸೆಸ್, ತಾವು ಸಚಿವರಾಗಿದ್ದ ವೇಳೆ ನಗರವು ಸ್ಮಾರ್ಟ್‍ ಸಿಟಿಗೆ ಮೊದಲ ಹಂತದಲ್ಲೇ ಆಯಿತು. ಇದಕ್ಕೆ ಅಂದಿನ ಶಾಸಕ ಶಾಮನೂರು ಮಲ್ಲಿಕಾರ್ಜುನ್ ಮತ್ತು ಅಂದಿನ ಮಹಾನಗರ ಪಾಲಿಕೆ ಆಡಳಿತವೇ ಕಾರಣವಾಗಿದೆ ಎಂದರು.

ನಂತರ ಶಾಮನೂರು ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ಅವರ ದೂರದೃಷ್ಟಿಯ ಫಲವಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಲಾಯಿತು. ಇದರ ಯಶಸ್ಸು, ಕೀರ್ತಿ ಮಲ್ಲಿಕಾರ್ಜುನ್ ಮತ್ತು ಹಿಂದಿನ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್‍ಸಿಟಿ ಸದಸ್ಯರಿಗೆ ಸಲ್ಲುತ್ತದೆ ಎಂದು ಎಸ್ಸೆಸ್ ಪ್ರಶಂಸಿಸಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕ್ರೀಡಾಂಗಣ ನಿರ್ಮಾಣವಾಗಬೇಕೆಂಬ ಈ ಭಾಗದ ಕ್ರೀಡಾಪಟುಗಳ ಬೇಡಿಕೆ ಇಂದು ಈಡೇರಿದಂತಾಗಿದ್ದು, ಸುಮಾರು 6 ಎಕರೆ ಪ್ರದೇಶದಲ್ಲಿ 8 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣವಾಗಲಿದೆ. ಜೊತೆಗೆ ಕ್ರೀಡಾಂಗಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಈ ಭಾಗದಲ್ಲಿ ಹಳೇ ಹೆರಿಗೆ ಆಸ್ಪತ್ರೆ ಇದ್ದರೂ ಸಹ ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಒತ್ತು ನೀಡಿ, 1.35 ಕೋಟಿ ರೂ. ವೆಚ್ಚದಲ್ಲಿ 18 ಹಾಸಿಗೆವುಳ್ಳ ನೆಲಮಹಡಿ ಮತ್ತು ಮೊದಲ ಮಹಡಿ ಕಟ್ಟಡವನ್ನು    ಸಚಿವರು ಸಾರ್ವಜನಿಕರಿಗೆ ಸಮರ್ಪಿಸಿದರು ಎಂದು ಅವರು ಹೇಳಿದರು.

ಶಾಮನೂರು ಮಲ್ಲಿಕಾರ್ಜುನ್ ಕ್ರೀಡಾ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ, ದೇವರಾಜ ಅರಸು ಬಡಾವಣೆಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಈಜುಕೊಳವನ್ನು ನಿರ್ಮಿಸಲಾಗಿತ್ತು. ಕಾರಣಾಂತರಗಳಿಂದ ಕೆಲವು ವರ್ಷಗಳಿಂದ ಈಜುಕೊಳ ಸಾರ್ವಜನಿಕರ ಬಳಕೆಗೆ ಬಾರದ ಕಾರಣದಿಂದ 5 ಕೋಟಿ ರೂ. ವೆಚ್ಚದಲ್ಲಿ ನವೀಕೃತ ಗೊಳಿಸಲು ಸಿದ್ದತೆ ಮಾಡಲಾಗಿತ್ತು. ಇಂದು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸುಮಾರು ಎರಡೂಕಾಲು ಕೋಟಿ ರೂ. ವೆಚ್ಚದಲ್ಲಿ ಈಜುಕೊಳ ನವೀಕೃತಗೊಂಡು ಶೀಘ್ರ ಸಾರ್ವಜನಿಕರ ಬಳಕೆಗೆ ಲಭಿಸಲಿದೆ ಎಂದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳ ಸುಧಾರಣೆಗಾಗಿ ಸುಮಾರು 3 ಕೋಟಿ ವೆಚ್ಚದಲ್ಲಿ ಚಾಮರಾಜಪೇಟೆ ಮೇನ್, ಭಾರತ್ ಕಾಲೋನಿ, ಬಸಾಪುರ, ಗಡಿ ಯಾರ ಕಂಬ, ಕರೂರು ಸರ್ಕಾರಿ ಶಾಲೆಗಳಲ್ಲಿ 20 ಕೊಠಡಿಗಳು ಮತ್ತು ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದ್ದು, ಸರ್ಕಾರಿ ಶಾಲಾ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿರುವಂತೆ ವಾತಾವರಣ ಕಲ್ಪಿಸಲಾಗುವುದು ಎಂದರು.

ವೀರ ಮದಕರಿ ನಾಯಕ ವೃತ್ತದ ಬಳಿ ದುರ್ಗಾಂಬಿಕಾ ಸಮುದಾಯ ಭವನವನ್ನು 3.28 ಕೋಟಿ ರೂ.ಗಳ ವೆಚ್ಚದಲ್ಲಿ ಶಾಮನೂರು ಮಲ್ಲಿಕಾರ್ಜುನ್ ಅವರ ಸಲಹೆಯಂತೆ ಆಧುನಿಕ ಸ್ಪರ್ಶದೊಂದಿಗೆ ನಿರ್ಮಾಣಗೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸಂಸದ ಜಿ.ಎಂ.ಸಿದ್ದೇಶ್ವರ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ರಿಷ್ಯಂತ್, ಮಹಾಪೌರ ಎಸ್.ಟಿ.ವೀರೇಶ್, ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯರುಗಳಾದ ಎ.ಬಿ.ರಹೀಂಸಾಬ್, ಕೆ.ಚಮನ್‍ಸಾಬ್, ವಿನಾಯಕ ಪೈಲ್ವಾನ್, ಕಬೀರ್, ಜಾಕೀರ್‍ಅಲಿ, ಶ್ರೀಮತಿ ಹುರ್‍ಬಾನು (ಪಂಡಿತ್), ಉದಯ್‍ಕುಮಾರ್, ದೂಡಾ ಅಧ್ಯಕ್ಷ ಶಿವಕುಮಾರ್, ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೊಡಪಾನ ದಾದಾಪೀರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!