ಕೋವಿಡ್ ಅಲೆ ಉಲ್ಬಣ: ನಿರ್ಲಕ್ಷ್ಯ ವಹಿಸಿದರೆ ನಿರ್ದಾಕ್ಷಿಣ್ಯ ಕ್ರಮ

ಜಗಳೂರ, ಏ.23- ಕೋವಿಡ್ ಎರಡನೇ ಅಲೆ  ಉಲ್ಬಣವಾಗುತ್ತಿದ್ದು, ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕು. ನಿರ್ಲಕ್ಷ್ಯ ವಹಿಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಸ್.ವಿ. ರಾಮಚಂದ್ರ ಖಡಕ್ ಸೂಚನೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿಂದು ಕೋವಿಡ್ ಉಲ್ಬಣದ ಹಿನ್ನೆಲೆಯಲ್ಲಿ ಅಧಿಕಾರಿಗಳ ತುರ್ತುಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕು ವೈದ್ಯಾಧಿಕಾರಿ  ಪ್ರತಿನಿತ್ಯ ಕೋವಿಡ್ ಪಾಸಿಟಿವ್ ಪ್ರಕರಣಗಳ ಬಗ್ಗೆ ಮಾಹಿತಿ ನೀಡಬೇಕು. ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಪೂರಕವಾಗುವ ಸೌಲಭ್ಯಗಳ ಕೊರತೆಯ ಬಗ್ಗೆ ಮಾಹಿತಿ ಕೊಟ್ಟರೆ, ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿ, ಅಗತ್ಯವಿ ರುವಷ್ಟು ಆಂಬ್ಯುಲೆನ್ಸ್ ಸೇವೆ, ಕೋವಿಡ್‌ ಚುಚ್ಚುಮದ್ದು, ಮಾಸ್ಕ್, ಸ್ಯಾನಿಟೈಸರ್‌ಗಳನ್ನು  ತ್ವರಿತಗತಿಯಲ್ಲಿ ತಲುಪಿಸಲಾಗುವುದು. 

ಪಟ್ಟಣದಲ್ಲಿ ಸಂಜೆ 7 ಗಂಟೆಯಿಂದ ಜನದಟ್ಟಣೆ ಸೇರುವ ಮದ್ಯದಂಗಡಿ, ಇತರೆ  ಅಂಗಡಿಗಳನ್ನು ಬಾಗಿಲು ಮುಚ್ಚಿಸಬೇಕು. ನಿಯಮ ಉಲ್ಲಂಘಿಸಿದರೆ ಪೊಲೀಸ್ ಇಲಾಖೆ  ಜೊತೆಗೂಡಿ ಕಾನೂನು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ   ಶಾಸಕರು ಸೂಚಿಸಿ ದರು. ಕೇವಲ 40 ವರ್ಷ ಮೇಲ್ಪಟ್ಟವರು ಅಲ್ಲದೆ ಯುವಕರಿಗೂ ಸೋಂಕು ತಗುಲುತ್ತಿದ್ದು, ಕೋವಿಡ್ ಚುಚ್ಚುಮದ್ದು ಹಾಕಿಸಲು ಜಾಗೃತಿ ಮೂಡಿಸಬೇಕು. ಸಭೆ-ಸಮಾರಂಭ, ಜಾತ್ರೆಗಳಿಗೆ ಸರ್ಕಾರದ ಆದೇಶ ಉಲ್ಲಂಘಿಸಿ ಜನ ಸೇರಿದಲ್ಲಿ ಅವಕಾಶ ನಿರಾಕರಿಸಬೇಕು. ಕೂಲಿ ಕಾರ್ಮಿಕರು ಹಸಿವಿನಿಂದ ಬಳಲದಂತೆ ದುಡಿಮೆಗೆ ಹಾಗೂ ಅಗತ್ಯ ವಸ್ತುಗಳ ಪೂರೈಕೆಗೆ  ಸರ್ಕಾರ ಅವಕಾಶ ಕಲ್ಪಿಸಿದ್ದು , ರಾತ್ರಿ ಕರ್ಫ್ಯೂಗೆ ಸಾರ್ವಜನಿಕರು ಸಹಕರಿಸಬೇಕು ಎಂದರು.

ತಾಲ್ಲೂಕಿನ ಮೆದಗಿನಕೆರೆ ವಸತಿ ಶಾಲೆ ಯಲ್ಲಿ ಕೋವಿಡ್ ಕೇರ್  ಸೆಂಟರ್ ಸ್ಥಾಪಿಸಲು ಅಗತ್ಯ ಕ್ರಮಕೈಗೊಳ್ಳಲು  ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಹೇಶ್ ಅವರಿಗೆ ಶಾಸಕರು ಸೂಚನೆ ನೀಡಿದರು.

ಅಲೆಮಾರಿ ಜನಾಂಗದವರಿಗೆ ಸೂರು: ಅಲೆಮಾರಿ ಜನಾಂಗದವರಿಗೆ ಸರ್ಕಾರದಿಂದ ಮನೆಗಳು ಮಂಜೂರಾಗಿದ್ದು,  ಪಿಡಿಓಗಳು  ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಲೆಮಾರಿ ಕುಟುಂಬಗಳನ್ನು ಗುರುತಿಸಿ ಪಟ್ಟಿ ತಯಾರಿಸಬೇಕು. ಹಣದ ಆಮಿಷ ತೋರದೆ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ಹಣ ಪಡೆದಲ್ಲಿ, ಮಧ್ಯವರ್ತಿಗಳಿಗೆ ಅವಕಾಶ ಕೊಟ್ಟಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ತಹಶೀಲ್ದಾರ್ ಡಾ. ನಾಗವೇಣಿ ಮಾಹಿತಿ ನೀಡಿ, ತಾಲ್ಲೂಕಿನಲ್ಲಿ 72 ಪಾಸಿಟಿವ್ ಪ್ರಕರಣ ಗಳಿದ್ದು, 46 ಸಕ್ರಿಯವಾಗಿವೆ. ಈಗಾಗಲೇ ಧಾರ್ಮಿಕ ಮುಖಂಡರುಗಳ ಜಾಗೃತಿ ಸಭೆ ನಡೆಸಿ, ಮಸೀದಿಗಳಲ್ಲಿ, ದೇವಸ್ಥಾನಗಳಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಲು ಸಾಮೂಹಿಕವಾಗಿ ಸೇರದಂತೆ ತಿಳಿಸಲಾಗಿದೆ. ಅಲ್ಲದೆ ಪಟ್ಟಣದಲ್ಲಿ ಅಗತ್ಯ ಅಂಗಡಿಗಳನ್ನು ಹೊರತುಪಡಿಸಿ, ಉಳಿ ದಂತೆ ರಾತ್ರಿ 8.30ಕ್ಕೆ‌ ಸಂಪೂರ್ಣ ಬಂದ್ ಮಾಡಲು  ವರ್ತಕರಿಗೆ ತಿಳಿಸಲಾಗಿದೆ ಎಂದರು.

ತಾ.ಪಂ. ಇಒ ಮಲ್ಲಾನಾಯ್ಕ ಮಾತನಾಡಿ, ಗ್ರಾಮ ಪಂಚಾಯ್ತಿಯಲ್ಲಿನ 15ನೇ ಹಣಕಾಸಿನಲ್ಲಿ ಶೇ‌.10 ಚರಂಡಿ ಸ್ವಚ್ಛತೆ, ಬ್ಲೀಚಿಂಗ್ ಪೌಡರ್ ಹಾಗೂ ನೈರ್ಮಲ್ಯ  ಕಾಪಾಡಬೇಕು. ಪಿಡಿಒಗಳು ಕರ್ತವ್ಯ  ನಿರತರಾಗಿ ಸಂಪರ್ಕದಲ್ಲಿರಬೇಕು. ಫೋನ್ ಸ್ವಿಚ್ ಆಫ್ ಮಾಡಿದರೆ, ನಿರ್ಲಕ್ಷದಿಂದ  ಸಮಸ್ಯೆ ಉಂಟಾದರೆ ಅಮಾನತ್ತು ಪಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಪ.ಪಂ. ಮುಖ್ಯಾಧಿಕಾರಿ ರಾಜು ಡಿ. ಬಣಕಾರ್, ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್ ಪಂಡಿತ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ‌ ನಿರ್ದೇಶಕ ಬಿ. ಮಹೇಶ್ವರಪ್ಪ, ಟಿಎಚ್ಒ ಡಾ. ನಾಗರಾಜ್, ಡಾ. ಮಲ್ಲಪ್ಪ, ಲೋಕೋಪಯೋಗಿ ಇಲಾಖೆ ಎಇಇ ರುದ್ರಪ್ಪ ಸೇರಿದಂತೆ ತಾಲ್ಲೂಕು ಮಟ್ಟದ  ಅಧಿಕಾರಿಗಳು ಭಾಗವಹಿಸಿದ್ದರು.

error: Content is protected !!