ಪರಿಸರಕ್ಕೆ ಹಾನಿಯಾಗುವ ಜೊತೆಗೆ ರಸ್ತೆ ಗಟ್ಟಿತನಕ್ಕೂ ಧಕ್ಕೆ
ಸಿಮೆಂಟ್ ರಸ್ತೆಗಳನ್ನು ಅಗೆದ ನಂತರ ತ್ಯಾಜ್ಯವನ್ನು ವಿಲೇವಾರಿ ಮಾಡಲು ನಗರದಲ್ಲಿ ಯಾವುದೇ ಕಟ್ಟಡ ತ್ಯಾಜ್ಯ ವಿಲೇವಾರಿ ಜಾಗವಿಲ್ಲ. ಹೀಗಾಗಿ ಸಿಮೆಂಟ್ ರಸ್ತೆ ಒಡೆದ ಕಸವನ್ನು ಎಲ್ಲೆಂದರಲ್ಲೇ ಎಸೆಯುವುದು ಕಂಡು ಬರುತ್ತಿದೆ. ಈ ರೀತಿ ಕಟ್ಟಡ ತ್ಯಾಜ್ಯ ಎಸೆಯುವುದ ರಿಂದ ಅದು ಕೆರೆ ಕಟ್ಟೆಗಳಿಗೆ ಸೇರಿ ಹಾನಿ ಮಾಡುತ್ತದೆ.
ದಾವಣಗೆರೆ, ಅ. 17 – ಸ್ಮಾರ್ಟ್ ಕಾಮಗಾರಿ, 24×7 ನೀರಿನ ಕಾಮಗಾರಿ, ಭೂಗತ ವಿದ್ಯುತ್ ತಂತಿ ಅಳವಡಿಕೆ ಕಾಮಗಾರಿ, ಒಳಚರಂಡಿ, ಟೆಲಿಕಾಂ ಕೇಬಲ್… ಹೀಗೆ ಹಲವಾರು ಕಾರಣಗಳಿಗೆ ನಗರದ ರಸ್ತೆಗಳನ್ನು ಅಗೆದು ಬಗೆಯುವ ಕಾಮಗಾರಿಗೆ ಅಂತ್ಯವಿಲ್ಲದಂತಾಗಿದೆ.
ಸಿಮೆಂಟ್ ರಸ್ತೆಗಳೇ ಆಗಲಿ, ಡಾಂಬರ್ ರಸ್ತೆಗಳೇ ಆಗಲಿ ಯಾವ ರಸ್ತೆಯೂ ಅಗೆತದಿಂದ ಮುಕ್ತವಾಗಿ ಉಳಿದಿಲ್ಲ. ಭರ್ಜರಿಯಾಗಿ ಸಿಮೆಂಟ್ ರಸ್ತೆ ನಿರ್ಮಿಸುವುದು ಹಾಗೂ ಅಷ್ಟೇ ಭರ್ಜರಿಯಾದ ಯಂತ್ರಗಳನ್ನು ತಂದು ಒಡೆಯುವ ಕಾರ್ಯ ನಿತ್ಯದ ಕಾಯಕವಾಗಿ ಪರಿವರ್ತನೆಯಾಗಿದೆ.
ಎಂದಾದರೂ ಒಂದು ದಿನ ಅಗೆತದ ಕಾರ್ಯ ನಿಲ್ಲುತ್ತದೆ ಎಂದು ಭಾವಿಸುವುದೇ ಭ್ರಮೆ ಎನ್ನಿಸುವಂತೆ, ವರ್ಷಗಳಿಂದ ರಸ್ತೆಗಳ ಭಗ್ನ ನಡೆಯುತ್ತಲೇ ಬಂದಿದೆ. ಅಧಿಕಾರಸ್ಥರು ಈ ರಸ್ತೆಗಳನ್ನು ಅಗೆಯುವುದರಿಂದ ಆಗುವ ಹಾನಿಗಳ ಬಗ್ಗೆ ಕಣ್ಣು ಮುಚ್ಚಿ ಕುಳಿತಿರುವಂತಿದೆ.
ರಸ್ತೆ ಅಗೆಯುವ ಕಾಮಗಾರಿಗಳನ್ನು ಕೈಗೊಳ್ಳುವಾಗ ರಸ್ತೆಗೆ ಕನಿಷ್ಠ ಹಾನಿ ತರಬೇಕೆಂಬ ಕಾಳಜಿಯೂ ಉಳಿದಂತಿಲ್ಲ. ಸಣ್ಣ ಕೇಬಲ್ ಅಳವಡಿಕೆಗೂ ಪೂರ್ಣ ಪ್ರಮಾಣದಲ್ಲಿ ರಸ್ತೆ ಅಗೆಯಲಾಗುತ್ತಿದೆ.
ಪದೇ ಪದೇ ರಸ್ತೆ ಅಗೆತ ಹಾಗೂ ತ್ಯಾಜ್ಯದಿಂದ ಆಗುವ ಹಾನಿಯ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಯಾವುದೇ ಅಳತೆಗೋಲು ಹೊಂದಿಲ್ಲ. ಆದರೆ, ಸಿಮೆಂಟ್ ರಸ್ತೆಗೆ ಬೇಕಾದ ಜಲ್ಲಿ – ಕಬ್ಬಿಣ ಇತ್ಯಾದಿ ಉತ್ಪಾದಿಸುವಾಗಲೇ ಕ್ವಾರಿ ಹಾಗೂ ಗಣಿಗಳಿಂದ ಸಾಕಷ್ಟು ಪರಿಸರ ಹಾನಿಯಾಗಿರುತ್ತದೆ.
ಇದಾದ ನಂತರ ನಿರ್ಮಿಸಲಾಗುವ ಸಿಮೆಂಟ್ ರಸ್ತೆಯನ್ನು ಒಡೆದರೆ ಮತ್ತಷ್ಟು ಹಾನಿ ಕಟ್ಟಿಟ್ಟ ಬುತ್ತಿ. ಸಿಮೆಂಟ್ ರಸ್ತೆಗಳನ್ನು ಒಡೆಯುವಾಗ ಅದನ್ನು ಸಣ್ಣ ಚೂರುಗಳಾಗಿಸಿದರೆ ಮತ್ತೆ ಅದನ್ನು ಅಲ್ಲೇ ತುಂಬಬಹುದು. ಆದರೆ, ದೊಡ್ಡ ಬ್ಲಾಕ್ಗಳಾಗಿ ತುಂಡರಿಸಿ ಊರ ಹೊರಗೆ ಚೆಲ್ಲಿ, ಮತ್ತೆ ಊರ ಹೊರಗಿನಿಂದ ಮಣ್ಣು ತಂದು ಗುಂಡಿ ಮುಚ್ಚುವ ಕಾರ್ಯವೂ ನಡೆಯುತ್ತದೆ.
ಈ ಸಮಸ್ಯೆ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿರುವ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಸಿಮೆಂಟ್ ರಸ್ತೆ ಕಾಮಗಾರಿ ಪೂರ್ಣಗೊಂಡ ವರ್ಷಗಳ ನಂತರ ಹೊಸ ಕಾಮಗಾರಿಗಳ ಪ್ರಸ್ತಾವನೆಗಳು ಬರುತ್ತವೆ. ಹೀಗಾಗಿ ರಸ್ತೆ ಅಗೆಯುವುದು ಅನಿವಾರ್ಯವಾಗುತ್ತದೆ. ಇಷ್ಟಾದರೂ, ಕಾಮಗಾರಿಗಳಿಂದ ರಸ್ತೆಗೆ ಹೆಚ್ಚು ಹಾನಿಯಾಗದಂತೆ ಎಚ್ಚರಿಕೆ ವಹಿಸಲು ಕಾಮಗಾರಿ ನಡೆಸುವವರಿಗೆ ತಿಳಿಸಲಾಗುತ್ತಿದೆ. ಕೆಲವೊಮ್ಮೆ ರಸ್ತೆಗೆ ತೀವ್ರ ಹಾನಿಯಾಗುವುದಿದ್ದರೆ, ಕಾಮಗಾರಿಗೇ ಅನುಮತಿ ನೀಡುವುದಿಲ್ಲ ಎಂದಿದ್ದಾರೆ.
ರಸ್ತೆ ಅಗೆಯುವ ಸಂಸ್ಥೆಯೇ ಅದರ ಮರು ನಿರ್ಮಾಣ ಮಾಡಬೇಕೆಂಬ ನಿಯಮವಿದೆ. ಆದರೆ, ಒಂದು ಬಾರಿ ಸಿಮೆಂಟ್ ರಸ್ತೆಯನ್ನು ಧ್ವಂಸಮಾಡಿದ ಮೇಲೆ, ಮತ್ತೆ ಅದು ಮೊದಲಿನಂತೆ ಗಟ್ಟಿಯಾಗಿ ಕೂರುವುದು ಕಷ್ಟ ಎಂದೂ ಅವರು ಹೇಳಿದ್ದಾರೆ.
ಕಟ್ಟಡ ತ್ಯಾಜ್ಯ ವಿಲೇವಾರಿಗೆ ಪಾಲಿಕೆ ವತಿಯಿಂದ ಇನ್ನೂ ಅಂತಿಮ ಜಾಗವನ್ನು ಗುರುತಿಸಿಲ್ಲ. ಕಟ್ಟಡ ತ್ಯಾಜ್ಯ ಮರು ಬಳಕೆಯ ಘಟಕಗಳ ಸ್ಥಾಪನೆ ಅಷ್ಟು ಸುಲಭವಲ್ಲ. ಕೆಲವೇ ಬೃಹತ್ ನಗರಗಳಲ್ಲಿ ಇಂತಹ ಘಟಕಗಳಿವೆ. ಹೀಗಾಗಿ, ರಸ್ತೆ ಅಗೆಯುವುದರಿಂದ ಉಂಟಾಗುವ ಬೃಹತ್ ತ್ಯಾಜ್ಯವನ್ನು ತಡೆಯಲು ಎಚ್ಚರಿಕೆ ವಹಿಸದೇ ಬೇರೆ ದಾರಿ ಇಲ್ಲ.
ರಸ್ತೆ ನಿರ್ಮಾಣದ ವೇಳೆ ಮುಂದೆ ಮತ್ತೆ ಅಗೆಯುವ ಪ್ರಸಂಗ ಬಂದರೂ ಹಾನಿ ಕಡಿಮೆಯಾಗುವಂತೆ ರಸ್ತೆಗಳನ್ನು ರೂಪಿಸಬೇಕಿದೆ. ರಸ್ತೆ ಅಗೆಯುವಾಗ ಹಾನಿ ಕಡಿಮೆಯಾಗುವಂತೆ ಲಭ್ಯವಿರುವ ತಂತ್ರಜ್ಞಾನ ಬಳಸಲು ಉತ್ತೇಜನ ನೀಡಬೇಕಿದೆ. ಅಗೆತದ ತ್ಯಾಜ್ಯ ಸ್ಥಳದಲ್ಲೇ ಮರು ಬಳಕೆಗೆ ಆದ್ಯತೆಯಂತಹ ಕ್ರಮಗಳಿಂದ ಪರಿಸರ ಹಾನಿ ನಿಯಂತ್ರಿಸಬಹುದು.