ಕೊರೊನಾ ಮಾರ್ಗಸೂಚಿ ಕಟ್ಟುನಿಟ್ಟು ಪಾಲನೆಗೆ ಡಿಸಿ ಸೂಚನೆ
ದಾವಣಗೆರೆ, ಜು. 12 – ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಿರ್ವಹಿಸುವ ಎಲ್ಲ ಶಿಕ್ಷಕರು ಹಾಗೂ ಸಿಬ್ಬಂದಿಗೆ ಲಸಿಕೆ ನೀಡುವ ಜೊತೆಗೆ ಕೊರೊನಾ ಪರೀಕ್ಷೆಗೆ ಒಳಪಡಿಸ ಬೇಕು. ಕೊರೊನಾಗೆ ಸಂಬಂಧಿಸಿದ ಮಾರ್ಗ ಸೂಚಿಯನ್ನು ಸಂಪೂರ್ಣವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಇದೇ ದಿನಾಂಕ 19 ಹಾಗೂ 22ರಂದು ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ನಗರದ ಜಿಲ್ಲಾಡಳಿತ ಭವನದಲ್ಲಿ ಇಂದು ಕರೆಯಲಾಗಿದ್ದ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳಿಗೆ ಮಾಸ್ಕ್, ಶಾಲೆಗಳಿಗೆ ಸ್ಯಾನಿಟೈಜ್, ಆರೋಗ್ಯ ಸಿಬ್ಬಂದಿ ಕಲ್ಪಿಸು ವುದೂ ಸೇರಿದಂತೆ ಕೋವಿಡ್ ಮಾರ್ಗಸೂಚಿ ಪ್ರಕಾರ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದ ಜಿಲ್ಲಾಧಿಕಾರಿ, ಪಾಸಿಟಿವ್ ಬಂದಿರುವ ವಿದ್ಯಾರ್ಥಿಗಳಿಗೆ ಕೊವಿಡ್ ಕೇರ್ ಸೆಂಟರ್‌ನಲ್ಲಿ ಪರೀಕ್ಷೆಗೆ ವ್ಯವಸ್ಥೆ ಕಲ್ಪಿಸಬೇಕು. ಪ್ರತಿ ಶಾಲೆಯಲ್ಲಿ ಪ್ರಾಥಮಿಕ ಚಿಕಿತ್ಸಾ ಕಿಟ್ ಇರಿಸಬೇಕು ಎಂದು ತಿಳಿಸಿದರು.
ಪರೀಕ್ಷೆ ನಿರ್ವಹಿಸುವ ಎಲ್ಲಾ ಶಿಕ್ಷಕರು ಹಾಗೂ ಸಿಬ್ಬಂದಿಗೆ ನಾಡಿದ್ದು ದಿನಾಂಕ 14 ಹಾಗೂ 15ರಂದು ತಾಲ್ಲೂಕು ಮಟ್ಟದಲ್ಲಿ ಕೊರೊನಾ ಟೆಸ್ಟ್ ಮಾಡಿಸಬೇಕು ಎಂದ ಜಿಲ್ಲಾಧಿಕಾರಿ, ಪರೀಕ್ಷಾ ಕಾರ್ಯದಲ್ಲಿ ಯಾವುದೇ ಲೋಪವಾಗದಂತೆ ಕ್ರಮ ವಹಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ 21,720 ವಿದ್ಯಾರ್ಥಿಗಳಿಗೆ 120 ಕೇಂದ್ರ
ಜಿಲ್ಲೆಯ ಆರು ವಲಯಗಳ 21,720 ವಿದ್ಯಾರ್ಥಿಗಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ ಎಂದು ಡಿಡಿಪಿಐ ಪರಮೇಶ್ವರಪ್ಪ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 444 ಪ್ರೌಢಶಾಲೆಗಳಿವೆ. ಕಳೆದ ಬಾರಿ 80 ಪರೀಕ್ಷಾ ಕೇಂದ್ರಗಳಿದ್ದವು. ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು 120ಕ್ಕೆ ಹೆಚ್ಚಿಸಲಾಗಿದೆ. 45 ಮಾರ್ಗಗಳ ಮೂಲಕ ಪ್ರಶ್ನೆಪತ್ರಿಕೆಗಳನ್ನು ತಲುಪಿಸಲಾಗುವುದು ಎಂದವರು ಹೇಳಿದ್ದಾರೆ.
2,260 ಕೊಠಡಿ ಮೇಲ್ವಿಚಾರಕರು ಸೇರಿದಂತೆ 2,647 ಸಿಬ್ಬಂದಿ ಪರೀಕ್ಷೆಯಲ್ಲಿ ಭಾಗಿಯಾಗಲಿದ್ದಾರೆ. ಇವರಲ್ಲಿ 1868 ಜನರು ಮೊದಲ ಹಾಗೂ 736 ಜನರು 2 ಡೋಸ್ ಲಸಿಕೆ ಪಡೆದಿದ್ದಾರೆ. ಇನ್ನೂ 43 ಜನ ಲಸಿಕೆ ಪಡೆಯಬೇಕಿದೆ. ಒಂದೆರಡು ದಿನಗಳಲ್ಲಿ ಲಸಿಕೆ ನೀಡಲಾಗುವುದು ಎಂದವರು ತಿಳಿಸಿದ್ದಾರೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ತಲಾ ಒಬ್ಬರು ಮೊಬೈಲ್ ಸ್ವಾಧೀನಾಧಿಕಾರಿ, ತಲಾ ಇಬ್ಬರು ದೈಹಿಕ ಶಿಕ್ಷಕರು, ಸ್ಕೌಟ್ – ಗೈಡ್ಸ್ ಸ್ವಯಂ ಸೇವಕರು ಮತ್ತು ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರ ತಂಡವೊಂದನ್ನು ನೇಮಿಸಲಾಗುವುದು ಎಂದು ಪರಮೇಶ್ವರಪ್ಪ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ವಿಜಯ ಮಹಾಂತೇಶ ದಾನಮ್ಮನ ವರ್, ಕಳೆದ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ದೇಶಕ್ಕೇ ಮಾದರಿಯಾಗುವಂತೆ ನಡೆದಿತ್ತು. ಈ ಬಾರಿ ಯಾವುದೇ ಕಾರಣಕ್ಕೂ ನಿಷ್ಕಾಳಜಿ ಆಗಬಾರದು. ಇಲ್ಲವಾದರೆ ಹೊಣೆ ಪರೀಕ್ಷಾ ವ್ಯವಸ್ಥೆ ಮೇಲೆ ಬರುತ್ತದೆ ಎಂದು ಎಚ್ಚರಿಸಿದರು.
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಮುಂದೆ ಗುಂಪಾಗಿ ಸೇರುವುದನ್ನು ತಡೆಯ ಬೇಕಿದೆ. ಇದಕ್ಕಾಗಿ ಪರೀಕ್ಷಾ ಕೋಣೆಯ ಮಾಹಿತಿಯನ್ನು ಮುಂಚೆಯೇ ತಿಳಿದು ಕೊಳ್ಳಲು ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಮೊಬೈಲ್ ಅಷ್ಟೇ ಅಲ್ಲದೇ ಡಿಜಿಟಲ್ ವಾಚ್ ಇತ್ಯಾದಿಗಳನ್ನು ಪರೀಕ್ಷಾ ಕೋಣೆಗೆ ತರುವಂತಿಲ್ಲ. ಎರಡು ಮೊಬೈಲ್ ತಂದು, ಒಂದನ್ನು ಮೊಬೈಲ್ ಸ್ವಾಧೀನಾಧಿಕಾರಿಗೆ ನೀಡಿ ಇನ್ನೊಂದನ್ನು ಪರೀಕ್ಷಾ ಕೋಣೆಗೆ ತೆಗೆದುಕೊಂಡು ಹೋಗುವ ಪ್ರಯತ್ನ ನಡೆಸುವ ಸಾಧ್ಯತೆಯೂ ಇರುವ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದವರು ತಿಳಿಸಿದರು.
ಡಿ.ಹೆಚ್.ಒ. ಡಾ. ನಾಗರಾಜ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗಿವೆ. ಮಕ್ಕಳು ಯಾರೂ ಆಸ್ಪತ್ರೆಗೆ ದಾಖಲಾಗುತ್ತಿಲ್ಲ. ಆದರೂ, ದೇಶದಲ್ಲಿ 40 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ, ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ವಹಿಸಿದರೆ ಯಾವುದೇ ತೊಂದರೆಯಾಗದು ಎಂದು ಹೇಳಿದರು.
ಡಿಡಿಪಿಐ (ಆಡಳಿತ) ಪರಮೇಶ್ವರಯ್ಯ, ಡಿಡಿಪಿಐ (ಅಭಿವೃದ್ಧಿ) ಲಿಂಗರಾಜ್, ಖಜಾನೆ ಉಪ ಕಾರ್ಯದರ್ಶಿ ಪ್ರಭಾವತಿ, ಶಿಕ್ಷಣಾಧಿಕಾರಿ ಜಗದೀಶ್, ಡಿವೈಎಸ್‌ಪಿ ಬಸವರಾಜ ಮತ್ತಿತರರು ಉಪಸ್ಥಿತರಿದ್ದರು.